ಕನ್ನಡಪ್ರಭ ವಾರ್ತೆ ಬಾದಾಮಿ
ರಾಜ್ಯದಲ್ಲಿನ ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ಪ್ರಕೃತಿ ವಿಕೋಪದಿಂದ ರೈತ ಬೆಳೆದ ಬೆಳೆಗಳಿಗೆ ಅತಿವೃಷ್ಟಿ ಹಾಗೂ ಬೆಂಬಲ ಬೆಲೆ ಸಿಗದೆ ರೈತನ ಜೀವನ ಅತಂತ್ರವಾಗಿದೆ. ರಾಜ್ಯ ಸರ್ಕಾರ ಮುಖ್ಯಮಂತ್ರಿ ಕುರ್ಚಿ ಕಿತ್ತಾಟ ಬಿಟ್ಟು ರೈತಪರ ಕಾಳಜಿ ವಹಿಸಬೇಕೆಂದು ಎಂದು ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ರೈತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಗುರುವಾರ ಬಿಜೆಪಿ ರೈತ ಮೋರ್ಚಾ ನಡೆಸಿದ ಪ್ರತಿಭಟನಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದರು.
ಮಾಜಿ ಶಾಸಕ ರಾಜಶೇಖರ ಶೀಲವಂತ ಮಾತನಾಡಿ, ನಮ್ಮ ಮತಕ್ಷೇತ್ರದ ಗುಳೇದಗುಡ್ಡ ಪುರಸಭೆಯಲ್ಲಿ ಅಧಿಕಾರಿಗಳು ಬರುವ ಸಾರ್ವಜನಿಕರಿಂದ ನವೀನ ಮಾದರಿಯಲ್ಲಿ ಫೋನ್ ಪೇ ಮೂಲಕ ಹಣ ಕಬಳಿಸುತ್ತಿದ್ದಾರೆ ಜನರು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ಶತಸಿದ್ಧ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ, ಸರ್ಕಾರ ಅಭಿವೃದ್ಧಿ ಮಾಡುವಲ್ಲಿ ವಿಫಲವಾಗಿದೆ. ಆದರೆ, ಶೇ.63 ರಷ್ಟು ಭ್ರಷ್ಟಾಚಾರ ಮತ್ತು ರಾಜ್ಯದಲ್ಲಿ ಎರಡುವರೆ ವರ್ಷದಲ್ಲಿ ವಾಲ್ಮೀಕಿ ಹಗರಣ, ಮುಡಾ ಹಗರಣ ಸೇರಿದಂತೆ ಹಗರಣದಲ್ಲಿ ತೊಡಗಿದೆ. ಸರ್ಕಾರ ಹಣ ಲೂಟಿ ಮಾಡುವಲ್ಲಿ ಮಗ್ನವಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ರೈತರ ಮಕ್ಕಳಿಗೆ ರೈತ ವಿಧ್ಯಾನಿಧಿ ವಿಧ್ಯಾರ್ಥಿ ವೇತನ ಯೋಜನೆ ನಿಲ್ಲಿಸಿ ರೈತ ವಿರೋಧಿ ಸರ್ಕಾರ ಎಂಬ ಹಣೆಪಟ್ಟಿ ಪಡೆದಿದೆ ಎಂದು ಟೀಕಿಸಿದರು.
ಜಿಜೆಪಿ ಮಂಡಲ ಅಧ್ಯಕ್ಷ ನಾಗರಾಜ ಕಾಚಟ್ಟಿ ಮಾತನಾಡಿ, ಸರ್ಕಾರ ತಮ್ಮಲ್ಲಿನ ಹಗರಣವನ್ನು ಮುಚ್ಚಿ ಹಾಕುವ ಸಲುವಾಗಿ ಆರ್.ಎಸ್.ಎಸ್. ಮತ್ತು ಹಿಂದೂ ಸಂಘಟನೆಯನ್ನು ಬ್ಯಾನ್ ಮಾಡುತ್ತೇವೆ ಎಂದು ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಪುಂಡಲೀಕ ಕವಡಿಮಟ್ಟಿ, ಬಿ.ಪಿ. ಹಳ್ಳೂರ ಮಾತನಾಡಿದರು. ಪ್ರತಿಭಟನೆಯಲ್ಲಿ ಶಿವನಗೌಡ ಸುಂಕದ, ಹುಚ್ಚಪ್ಪ ಬೆಳ್ಳಿಗುಂಡಿ, ಹೊನ್ನಯ್ಯ ಹಿರೇಮಠ, ಮುತ್ತು ಲಿಂಗರೆಡ್ಡಿ, ಮುತ್ತು ಉಳ್ಳಾಗಡ್ಡಿ, ಸಂಜು ಜಗದಾಳೆ, ಭಾಗ್ಯಶ್ರೀ ಹುದ್ನೂರ, ಜಯಶ್ರೀ ದಾಸಿಮನಿ ಹಾಗೂ ವಿವಿಧ ಸಂಘಟನೆಗಳು ಭಾಗವಹಿಸಿದ್ದವು
ಬಿಜೆಪಿ ಕಚೇರಿಯಲ್ಲಿ ಪಿಎಲ್‌ಡಿ ಬ್ಯಾಂಕ್ ಆವರಣದವರೆಗೆ ನಡೆದ ಪ್ರತಿಭಟನೆಯಲ್ಲಿ ರೈತರು ಚಕ್ಕಡಿಗಳೊಂದಿಗೆ ಪಾಲ್ಗೊಂಡಿದ್ದರು. ಸರ್ಕಾರದ ವಿರುದ್ಧ ಘೋಷಣೆ ಮೊಳಗಿದವು. ಪ್ರತಿಭಟನಾ ಮೆರವಣಿಗೆ ನಂತರ ಉಪತಹಸೀಲ್ದಾರ್ ಬೊಮ್ಮಣ್ಣವರಿಗೆ ಮನವಿ ಸಲ್ಲಿಸಿದರು.