ಕನ್ನಡಪ್ರಭ ವಾರ್ತೆ ಕಲಬುರಗಿ
ಪೆಟ್ರೋಲ್, ಬೆಲೆ ಏರಿಕೆ ಖಂಡಿಸಿ ಬಿಜೆಪಿ ಕಲಬುರಗಿಯಲ್ಲಿ ಗುರುವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಎತ್ತಿನ ಬಂಡಿ ಹತ್ತಿ ಬಂದ ಆರ್. ಅಶೋಕ ಅವರು ಸರ್ಕಾರ ತಕ್ಷಣ ತೈಲದರ ಇಳಿಸಬೇಕು ಎಂದು ಆಗ್ರಹಿಸಿದರು.ತೈಲ ಬೆಲೆ ಇಳಿಸಲೇಬೇಕು, ಈ ಜನ ವಿರೋಧಿ ಸರಕಾರವನ್ನ ತೊಗಿಸಿ ಎಂದು ಘೋಷಣೆ ಕೂಗುತ್ತ ಹೊರಟ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಹಾಗೂ ಬಿಜೆಪಿ ಕಾರ್ಯಕರ್ತರನ್ನೆಲ್ಲ ಸ್ವಲ್ಪ ದೂರ ಹೋದ ನಂತರ ತಡೆದು ನಿಲ್ಲಿಸಿದ ಸ್ಟೇಷನ್ ಬಜಾರ್ ಠಾಣೆಯ ಪಿಐ ಶಕೀಲ್ ಅಂಗಡಿ ಹಾಗೂ ಸಿಬ್ಬಂದಿ ಎಲ್ಲರನ್ನು ಬಂಧಿಸಿ ಕರೆದೊಯ್ದು ಕೆಲ ಕಾಲದ ನಂತರ ಬಿಡುಗಡೆ ಮಾಡಿದರು.
ಬಡವರ ಹೊಟ್ಟೆ ಮೇಲೆ ಹೊಡೆತ ಎಂದು ಅಶೋಕ ಗುಡುಗು:ರಾಜ್ಯ ಸರ್ಕಾರ ಪೆಟ್ರೋಲ್- ಡೀಸೆಲ್ ಬೆಲೆ ಹೆಚ್ಚಳ ಮಾಡಿ ಬಡವರ ಹೊಟ್ಟೆಯ ಮೇಲೆ ಹೊಡಿದಿದೆ ಎಂದು ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ವಿಪಕ್ಷ ನಾಯಕ ಆರ್. ಅಶೋಕ ಅವರು, ಕಲಬುರಗಿಯಲ್ಲಿ ಗುರುವಾರ ಬಿಜೆಪಿ ಆಯೋಜಿಸಿದ್ದ ಹೋರಾಟದಲ್ಲಿ ಎತ್ತಿನ ಬಂಡಿ ಹತ್ತಿ ಬಂದು ಸರ್ಕಾರದ ನಿರ್ಣಯದ ವಿರುದ್ಧ ಗುಡುಗಿದರು.
ಕಲಬುರಗಿ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ಸರ್ಕಲ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಎಂಎಲ್‌ಸಿ ಶಶಿಲ್ ನಮೋಶಿ, ಬಿಜಿ ಪಾಟೀಲ್, ಜಿಲ್ಲಾಧ್ಯಕ್ಷ ಶಿವರಾಜ ರದ್ದೇವಾಡಗಿ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಸೇರಿದಂತೆ ಹಲವು ನಾಯಕರ ಜೊತೆಗೂಡಿಕೊಂಡು ಎತ್ತಿನ ಬಂಡಿಯೊಂದಿಗೆ ರಸ್ತೆಗಿಳಿದು ಬಿಜೆಪಿ ಮುಖಂಡರು ವಿನೂತನ ಪ್ರತಿಭಟನೆ ನಡೆಸಿದರು.ತೈಲ ಬೆಲೆ ಹೆಚ್ಚಿದ್ದರಿಂದ ಎತ್ತಿನ ಬಂಡಿ ಗತಿಯಾಗಿದೆ:
ಇದೇ ಸಂದರ್ಭದಲ್ಲಿ ಮಾತನಾಡಿದ ಆರ್. ಅಶೋಕ ತೈಲ ದರ ಹೆಚ್ಚಳದಿಂದಾಗಿ ರಾಜ್ಯ ಸರಕಾರದ ವಿರುದ್ದ ಜನರು ಆಕ್ರೋಶಗೊಂಡಿದ್ದಾರೆಂದರಲ್ಲದೆ ತೈಲ ಬೆಲೆ ಏರಿಕೆಯಿಂದ ಜನ ವಾಹನ ಮನೆಯಲ್ಲಿಟ್ಟು ಮತ್ತೆ ಎತ್ತಿನ ಬಂಡಿಯಲ್ಲಿ ಸಂಚರಿಸುವಂತಾಗಿದೆ ಎಂದು ವ್ಯಂಗ್ಯವಾಡಿದರು.ರಾಜ್ಯ ಸರಕಾರ ತೈಲ ಬೆಲೆ ಹೆಚ್ಚಳದ ಮೂಲಕ ಜನ ವಿರೋಧಿ ನೀತಿ ಅನುಸರಿಸುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಮತ ಹಾಕದ ಜನರ ಮೇಲೆ ಈ ಮೂಲಕ ಸೇಡು ತೀರಿಸಿಕೊಳ್ಳುತ್ತಿದೆ ಎಂದರು.
ರೈತ ವಿರೋಧಿ, ಜನ ವಿರೋಧಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕರುನಾಡಲ್ಲಿ ಇನ್ಮುಂದೆ ತೆರಿಗೆ ಪರ್ವವೇ ಶುರುವಾಗಲಿದೆ ಎಂದು ಅಶೋಕ ಭವಿಷ್ಯ ನುಡಿದರು. ಮುದ್ರಾಂಕ ಶುಲ್ಕವಾಯ್ತು, ಮದ್ಯದ ದರವಾಯ್ತು, ತೈಲ ಬೆಲೆಯಾಯ್ತು, ಶೀಘ್ರವೇ ಬಸ್ ದರ ಹೆಚ್ಚಳವಾಗುತ್ತದೆ, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿದ ವರ್ಷದೊಳಗೇ ತೆರಿಗೆ ಪರ್ವ, ಬೆಲೆ ಏರಿಕೆ ಪರ್ವಗಳೇ ಶುರುವಾಗಿವೆ. ಬರೋ ದಿನಗಳಲ್ಲಿ ಇದಿನ್ನು ಹೆಚ್ಚಲಿದೆ ಎಂದು ಅಶೋಕ ಆತಂಕ ಹೊರಹಾಕಿದರು.15 ಬಾರಿ ಹಣಕಾಸು ಸಚಿವರಾಗಿ ಬಜೆಟ್ ಮಂಡಿಸಿದ್ದಾಗಿ ಹೇಳಿಕೊಳ್ಳುವ ಸಿದ್ದರಾಮಯ್ಯನವರಿಗೆ ಯಾವಾಗ ಅದೆಷ್ಟು ಹಣ ಹೊಂದಿಸಬೇಕು ಎಂಬುದು ಗೊತ್ತಿಲ್ಲವೆ? ಬಜೆಟ್ ಮಾರನೇ ದಿನವೇ ತೈಲಬೆಲೆ ಹೆಚ್ಚಿಸಬೇಕಿತ್ತು. ಸಮರ್ಥ ಹಣಕಾಸು ಸಚಿವನೆಂದು ಹೇಳಿಕೊಳ್ಳುವ ಸಿಎಂ ಸಮರ್ಥರಲ್ಲ. ತೆರಿಗೆ ಹೆಚ್ಚಿಸಿ ರಾಜ್ಯಭಾರ ಮಾಡುತ್ತಿದ್ದಾರೆಂದು ಅಶೋಕ ತಿವಿದರು.
ಸೇರಿದ್ದ ಮುಖಂಡರು, ಕಾರ್ಯಕರ್ತರೆಲ್ಲರೂ ತೈಲದರ ಹೆಚ್ಚಳ ಮಾಡಿರುವ ಸಿಎಂ ಹಾಗೂ ಸರಕಾರದ ವಿರುದ್ಧ ದಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಮಾಜಿ ಎಂಎಲ್‌ಸಿ ಅಮರನಾಥ ಪಾಟೀಲ್, ಅಧ್ಯಕ್ಷ ಶಿವರಾಜ ರದ್ದೇವಾಡಗಿ, ಓಬಿಸಿ ಮುಖಂಡರಾದ ಶೋಭಾ ಬಾಣಿ, ಅವ್ವಣ್ಣ ಮ್ಯಾಕೇರಿ, ಶರಣಪ್ಪ ತಳವಾರ್, ವಕೀಲರಾದ ರಾಘವೇಂದ್ರ ಕೋಗನೂರ್, ಶಿವುಯೋಗಿ ನಾಗನ ಹಳ್ಳಿ ಅಶೋಕ್ ಮಾನ್ಕರ್, ವರದ ಶಂಕರ್ ಶೆಟ್ಟಿ , ಮಹೇಶ್ ಚವಾಣ್, ಶರಣು ಸಜ್ಜನ್ ಶೆಟ್ಟಿ, ಸುಂದರ ಕುಲಕರ್ಣಿ, ಸುಧೀರ್ ಅಣವೀರ್ ಪಾಟೀಲ್ , ಮಹೇಶ್ ರೆಡ್ಡಿ, ಪಾಲಿಕೆ ಮೇಯರ್ ವಿಶಾಲ ಧರ್ಗಿ, ಮಾಧ್ಯಮ ಪ್ರಮುಖರು ನಾಗರಾಜ್ ಮಹಾಗಾವಕರ್ ಮಹಾನಗರ ಪಾಲಿಕೆ ಸದಸ್ಯರು ಕಾರ್ಯಕರ್ತರು ಪದಾಧಿಕಾರಿಗಳು ಉಪಸ್ಥಿತಿ ಇದ್ದರು.