ಬಿಜೆಪಿಯಿಂದ ಮಳೆಹಾನಿ ಅಧ್ಯಯನಕ್ಕೆ ತಂಡ ರಚನೆ

KannadaprabhaNewsNetwork |  
Published : Sep 04, 2025, 01:00 AM IST

ಸಾರಾಂಶ

ಮಳೆಹಾನಿ ಸಂಬಂಧ ಜಿಲ್ಲಾ ಮಟ್ಟದಲ್ಲಿ ಶಾಸಕರು, ಮುಖಂಡರ ತಂಡ ರಚಿಸಿ ಅಧ್ಯಯನ ನಡೆಸಿ ಬಳಿಕ ರಾಜ್ಯ ಘಟಕಕ್ಕೆ ವರದಿ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪಕ್ಷದ ಪದಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಳೆಹಾನಿ ಸಂಬಂಧ ಜಿಲ್ಲಾ ಮಟ್ಟದಲ್ಲಿ ಶಾಸಕರು, ಮುಖಂಡರ ತಂಡ ರಚಿಸಿ ಅಧ್ಯಯನ ನಡೆಸಿ ಬಳಿಕ ರಾಜ್ಯ ಘಟಕಕ್ಕೆ ವರದಿ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪಕ್ಷದ ಪದಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ತಿಂಗಳ 8ರೊಳಗೆ ಪ್ರವಾಸ ಪೂರ್ಣಗೊಳಿಸಿ ಪ್ರವಾಸ ಪೂರ್ಣಗೊಂಡ ನಂತರ ಇಡೀ ವರದಿಯನ್ನು ಭಾವಚಿತ್ರಗಳ ಸಹಿತ ರಾಜ್ಯ ಕಾರ್ಯಾಲಯಕ್ಕೆ ಕಳುಹಿಸಿಕೊಡಬೇಕು ಎಂದು ತಿಳಿಸಿದ್ದಾರೆ.ಕಳೆದ ಹಲವು ದಿನಗಳಿಂದ ಇಡೀ ರಾಜ್ಯದಲ್ಲಿ ವ್ಯಾಪಕವಾದ ಮಳೆ ಬಂದು ಜನಜೀವನ ಅಸ್ತವ್ಯಸ್ತವಾಗಿರುವುದು ತಮಗೆಲ್ಲ ತಿಳಿದ ವಿಷಯ. ರಾಜ್ಯದ ಜನತೆ ಸತತವಾಗಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಬಳಲುತ್ತಿದ್ದರೂ, ಅಪಾರ ಪ್ರಮಾಣದ ಬೆಳೆಹಾನಿ ಉಂಟಾಗಿದ್ದರೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವುದಾಗಲಿ, ನೊಂದ ಜನತೆಗೆ ಸಾಂತ್ವನ ಹೇಳುವ ಕಾರ್ಯವನ್ನಾಗಲಿ ಮಾಡಿಲ್ಲ. ರೈತರಿಗೆ ಸೂಕ್ತ ಪರಿಹಾರ ನೀಡುವ ಕೆಲಸವನ್ನು ಸಂಪೂರ್ಣವಾಗಿ ಮರೆತು ಗಾಢನಿದ್ದೆಯಲ್ಲಿ ಮುಳುಗಿದೆ ಎಂದು ಹೇಳಿದ್ದಾರೆ.

ಇಂತಹ ಸಂಕಷ್ಟದ ಸಂದರ್ಭದಲ್ಲಿ ಮೈಮರೆತ ಸರ್ಕಾರವನ್ನು ಎಚ್ಚರಿಸಬೇಕಾಗಿರುವುದು ಪ್ರತಿಪಕ್ಷವಾಗಿ ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಮಳೆ ಹಾನಿಗೊಳಗಾದ ಪ್ರದೇಶಗಳಿಗೆ ಪ್ರವಾಸ ಕೈಗೊಂಡು ವಿಳಂಬವಿಲ್ಲದೆ ರಾಜ್ಯ ಕಾರ್ಯಾಲಯಕ್ಕೆ ವರದಿಯನ್ನು ಸಲ್ಲಿಸಬೇಕಾಗಿದೆ. ಈ ಭೇಟಿ ವೇಳೆ ಮಳೆಯಿಂದ ಹಾನಿಗೀಡಾದ ಕೃಷಿ ಪ್ರದೇಶಗಳ ಭೇಟಿ ಜೊತೆಗೆ ನೊಂದ ಕುಟುಂಬಗಳನ್ನು ಭೇಟಿಯಾಗಬೇಕು ಹಾಗೂ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ವರದಿಯನ್ನು ತಯಾರಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.ನೆರೆ ಸಂತ್ರಸ್ತರ ಸಮಸ್ಯೆ ಆಲಿಸಲು 9ರಿಂದ ಜೆಡಿಎಸ್‌ ರಾಜ್ಯ ಪ್ರವಾಸ:

ರಾಜ್ಯದ ನೆರೆಹಾನಿ ಪ್ರದೇಶಗಳ ರೈತರು, ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ಇದೇ ತಿಂಗಳ 9ರಿಂದ ಪಕ್ಷದ ವತಿಯಿಂದ ರಾಜ್ಯ ಪ್ರವಾಸ ಕೈಗೊಳ್ಳಲಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ರಾಜ್ಯದಲ್ಲಿ ಮುಂಗಾರು ಮಳೆಯ ಅತಿವೃಷ್ಟಿಯಿಂದ 1.42 ಲಕ್ಷ ಹೆಕ್ಟರ್‌ ಪ್ರದೇಶದಲ್ಲಿ ರೈತರ ಬೆಳೆ ನಷ್ಟವಾಗಿದ್ದು, ನೆರೆಹಾನಿಯಿಂದ ಜನಸಾಮಾನ್ಯರೂ ಮನೆಗಳನ್ನು ಕಳೆದುಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ. ರೈತ ವಿರೋಧಿ ಕಾಂಗ್ರೆಸ್‌ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳು ನೆರವಿಗೆ ಧಾವಿಸದೆ, ಪರಿಹಾರಗಳನ್ನು ಒದಗಿಸದೆ ನಿರ್ಲಕ್ಷ್ಯ ವಹಿಸಿದೆ ಎಂದು ಅವರು ಕಿಡಿಕಾರಿದರು.ಎರಡು ತಂಡಗಳಿಂದ ಪ್ರವಾಸ:

ಈ ಹಿನ್ನೆಲೆಯಲ್ಲಿ ನೆರೆ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಲು ನಮ್ಮ ಪಕ್ಷದ ವತಿಯಿಂದ ರಾಜ್ಯ ಪ್ರವಾಸ ಕೈಗೊಳ್ಳಲಾಗುತ್ತಿದೆ. ಕಲ್ಯಾಣ ಕರ್ನಾಟಕದಲ್ಲಿ ಬಹಳಷ್ಟು ಹಾನಿಯಾಗಿದೆ. ಜೆಡಿಎಸ್ ಎಲ್ಲಾ ನಾಯಕರು ಚರ್ಚೆ ಮಾಡಿದ್ದೇವೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದೇವೆ‌. ಇದಕ್ಕಾಗಿ ಎರಡು ತಂಡ ಮಾಡಿದ್ದೇವೆ. ಬೆಳೆ ಹಾನಿ, ಮನೆ ಕುಸಿತ ಪ್ರದೇಶಗಳಿಗೆ ಭೇಟಿ ನೀಡಿ ವಸ್ತು ಸ್ಥಿತಿ ವರದಿಯನ್ನು ರಾಜ್ಯ ಸರ್ಕಾರಕ್ಕೆ ನೀಡಲಿದ್ದೇವೆ ಎಂದರು.-ಬಾಕ್ಸ್‌-

ಪ್ರವಾಸದ ತಂಡಗಳ ಮಾಹಿತಿ:

ಮಾಜಿ ಸಚಿವ ವೆಂಕಟರಾವ್‌ ನೇತೃತ್ವದ ತಂಡವು ಸೆ.9ರಿಂದ 11ರ ವರೆಗೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ಬೀದರ್‌, ಕಲಬುರಗಿ ಮತ್ತು ಯಾದಗಿರಿ ನೆರೆಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡಲಿದೆ. ಮಾಜಿ ಸಚಿವ ಎಚ್‌.ಡಿ.ರೇವಣ್ಣ ನೇತೃತ್ವದ ತಂಡವು ಸೆ.13 ಮತ್ತು 14ರಂದು ಮಲೆನಾಡು ಪ್ರದೇಶದ ಜಿಲ್ಲೆಗಳಾದ ಶಿವಮೊಗ್ಗ, ಹಾಸನ ಮತ್ತು ಚಿಕ್ಕಮಗಳೂರಿನ ನೆರೆಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡಲಿದೆ. ಈ ತಂಡಗಳಲ್ಲಿ ಆ ಭಾಗದ ಜೆಡಿಎಸ್ ಶಾಸಕರು, ಮಾಜಿ ಶಾಸಕರು, ಪರಾಜಿತ ಅಭ್ಯರ್ಥಿಗಳು ಹಾಗೂ ಆಯಾಯ ಜಿಲ್ಲಾಧ್ಯಕ್ಷರು ಇರಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳಮೀಸಲು ಹೆಚ್ಚಳ: ಸಿದ್ದು vs ಬೆಲ್ಲದ್‌ ಜಟಾಪಟಿ
ಎಚ್ಚೆತ್ತ ಬೆಂ.ವಿವಿ: ಲೋಪ ಸರಿಪಡಿಸಿ 400 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ