ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ತಾಲೂಕಿನ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಹಾಗೂ ಸರ್ಕಾರ ಗ್ಯಾರಂಟಿ ಯೋಜನೆಗಳ ಕಾರ್ಯಕ್ರಮದಲ್ಲಿ ಪಟ್ಟಣದ ಪುರಸಭೆಯ ಪೌರಾಡಳಿತದ ವತಿಯಿಂದ ಪೌರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಈ ಹಿಂದಿನ ಬಿಜೆಪಿ ಸರ್ಕಾರ ಪ್ರಸ್ತುತ ಸರ್ಕಾರದ ತಲೆ ಮೇಲೆ ಸಾವಿರಾರು ಕೋಟಿಗಳಷ್ಟು ಸಾಲ ಮಾಡಿಟ್ಟು ಹೋಗಿದ್ದಾರೆ. ಅದ್ಯಾವುದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೆದರಿಲ್ಲ. ಧೈರ್ಯದಿಂದ ಉತ್ತಮ ಜನಪರ ಆಡಳಿತ ನೀಡುವಲ್ಲಿ ಸತತವಾಗಿ ಪ್ರಯತ್ನಿಸುತ್ತಲೇ ಇದ್ದಾರೆ ಎಂದು ಶ್ಲಾಘಿಸಿದರು.
ಸಿದ್ದರಾಮಯ್ಯನವರಿಗೆ ಹಿಂದಿನ ಬಾಗಿಲಿನಿಂದ ರಾಜಕಾರಣ ಮಾಡುವುದು ಯಾವತ್ತಿಗೂ ಗೊತ್ತಿಲ್ಲ. ಹಾಗೇ ಮಾಡಿದ ಉದಾಹರಣೆಗಳೇ ಇಲ್ಲ. ಆದರೆ, ಬಿಜೆಪಿಯವರು ಹಿಂದಿನ ಬಾಗಿಲಿನಿಂದ ರಾಜಕಾರಣ ಮಾಡುವುದು ಕರತಲಾಮಲಕ ಮಾಡಿಕೊಂಡಿದ್ದಾರೆ ಎಂದರೇ ಅವರಿಗೆ ಅಷ್ಟೊಂದು ಹಣ ಎಲ್ಲಿಂದ ಬರುತ್ತದೆ ಎಂಬುವುದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು ಎಂದರು.ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯನವರು ಎಲ್ಲ ಭರವಸೆ, ಗ್ಯಾರಂಟಿಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದಾರೆ. ಮುಂಬರುವ ದಿನಗಳಲ್ಲಿ ಇದೇ ರೀತಿ ಸದಾ ಬೆಂಬಲಿಸಿದರೇ ನಿಜವಾದ ಕಡು ಬಡವರ, ದೀನ ದಲಿತರ, ಅಲ್ಪಸಂಖ್ಯಾತರ, ರೈತರ ಪರವಾಗಿ ನಿಲ್ಲುವ ಮೂಲಕ ಉತ್ತಮ ಸಮಾಜ ನಿರ್ಮಾಣಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಸದ್ಯ ಎಲ್ಲೆಡೆ ಭೀಕರ ಬರಗಾಲ ಎದುರಾಗಿ ತೀವ್ರ ಸಂಕಷ್ಟದಲ್ಲಿರೂ ಸಹಿತ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಕೊಟ್ಟಿರುವ 5 ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಯಾವುದೇ ತೊಂದರೆ ಕಾಣದೇ ಮುಖದಲ್ಲಿ ಮಂದಹಾಸ ಮೂಡಿದೆ ಎಂದರು.
300 ಯೂನಿಟ್ ವಿದ್ಯುತ್ ಉಚಿತ ಎಂದು ಕೇಂದ್ರ ಬಿಜೆಪಿ ಸರ್ಕಾರ ಬಜೆಟ್ ಮಂಡಿಸಿದ್ದಾರೆ. ಆದರೆ, ನಾಯ್ಕೈದು ಲಕ್ಷ ಖರ್ಚು ಮಾಡಿ ಸೋಲಾರ್ ವಿದ್ಯುತ್ ಅಳವಡಿಸಿಕೊಂಡಿರಬೇಕು. ಅಂತಹವರಿಗೆ ಈ ಯೋಜನೆ ಲಾಭ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಹಾಗಾದರೇ ನಿಮ್ಮ ಯೋಜನೆ ಬಡವರಿಗೆ ಮುಟ್ಟಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಇಡೀ ಜಿಲ್ಲೆಯಲ್ಲಿಯೇ ಮುದ್ದೇಬಿಹಾಳ, ಇಂಡಿ, ಸಿಂದಗಿ ತಾಲೂಕುಗಳಲ್ಲಿ ಬರಗಾಲದಿಂದಲೋ ಅಥವಾ ಅತೀವೃಷ್ಟಿಯಿಂದಲೋ ಪ್ರತೀ ಬಾರಿಯೂ ಒಂದಲ್ಲ ಒಂದು ರೀತಿಯಲ್ಲ ತೊಂದರೆ ಅನುಭವಿಸುತ್ತಲೇ ಇದ್ದಾರೆ. ಹಾಗಾಗಿ ತೀರಾ ಹಿಂದುಳಿದ ಮತಕ್ಷೇತ್ರಗಳಾಗಿವೆ. ಶಿವಾನಂದ ಪಾಟೀಲರು ಹಾಗೂ ಎಂ.ಬಿ.ಪಾಟೀಲರು ಇಬ್ಬರು ಮಂತ್ರಿಗಳಿದ್ದಾರೆ. ಈ 3 ಮತಕ್ಷೇತ್ರಗಳ ಬಗ್ಗೆ ಹೆಚ್ಚು ನಿಗಾವಹಿಸಿ ಈ ಭಾಗದಲ್ಲಿ ರೈತರಿಗೆ ಅನುಕೂಲವಾಗುವ ಸಮಗ್ರ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿ ಮತ್ತು ಕೆರೆ ತುಂಬಿಸುವಲ್ಲಿ ಕಾಳಜಿ ವಹಿಸಬೇಕು. ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ಮತಕ್ಷೇತ್ರಕ್ಕೆ ಈ ಇಬ್ಬರು ಸಚಿವರಿಗಿಂತ ಒಂದು ಗುಂಜಿಯಷ್ಟಾದರೂ ಹೆಚ್ಚಿನ ಅನುದಾನ ನೀಡುವ ಮೂಲಕ ಮುದ್ದೇಬಿಹಾಳ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೈಜೋಡಿಸಬೇಕು.