ಸುದ್ದಿಗೋಷ್ಠಿ । ತಾಲೂಕು ಕಸಾಪ ಅಧ್ಯಕ್ಷ ಹಡೇನಹಳ್ಳಿ ಲೋಕೇಶ್ ಮಾಹಿತಿ । ಬೋರಲಿಂಗಯ್ಯ ನಂಬಿಹಳ್ಳಿ ಸಮ್ಮೇಳನಾಧ್ಯಕ್ಷ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣತಾಲೂಕಿನ ಕಸಬಾ ಹೋಬಳಿ ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಫೆ.೮ ರಂದು ಕಲ್ಕೆರೆಯ ಪ್ರೌಢಶಾಲೆ ಆವರಣದಲ್ಲಿ ನಡೆಯಲಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಡೇನಹಳ್ಳಿ ಲೋಕೇಶ್ ತಿಳಿಸಿದರು.
ಪಟ್ಟಣದಲ್ಲಿನ ತಾಲೂಕು ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾಮೀಣ ಭಾಗಕ್ಕೆ ಕನ್ನಡ ಸಾಹಿತ್ಯ ಪರಿಷತ್ತನ್ನು ಕೊಂಡೊಯ್ಯಬೇಕು ಎಂಬ ದೃಷ್ಟಿಯಿಂದ ಆ ಭಾಗದ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿಗಳು ಸೇರಿ ಎಲ್ಲ ಕನ್ನಡದ ಮನಸ್ಸುಗಳನ್ನು ಒಟ್ಟಾಗಿ ಸೇರಿಸಿ ಉತ್ತಮ ಸಂಘಟನೆಯೊಂದಿಗೆ ಸಮ್ಮೇಳನಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ. ಕಾರ್ಯಕ್ರಮಕ್ಕೆ ಪರಿಷತ್ತಿನ ಎಲ್ಲ ಅಜೀವ ಸದಸ್ಯರು, ಪತ್ರಕರ್ತರು, ಸಂಘಟಕರು, ಸಾರ್ವಜನಿಕರು, ಸಾಹಿತಿಗಳಿಗೆ ಈ ಮೂಲಕ ಆಹ್ವಾನ ನೀಡುತ್ತಿದ್ದೇವೆ. ಎಲ್ಲರೂ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.ಸಮ್ಮೇಳನಾಧ್ಯಕ್ಷರಾಗಿ ಸ್ಥಳೀಯವಾಗಿ ಐದಾರು ಮಂದಿ ಸಾಹಿತಿಗಳಿದ್ದರೂ, ಎಲ್ಲರೂ ಸೇರಿ ಒಕ್ಕೊರಲಿನ ತೀರ್ಮಾನದಂತೆ ಎನ್. ಬೋರಲಿಂಗಯ್ಯ ನಂಬಿಹಳ್ಳಿ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಶಾಸಕ ಬಾಲಕೃಷ್ಣ ಮತ್ತು ಮಾಜಿ ಎಂಎಲ್ಸಿ ಗೋಪಾಲಸ್ವಾಮಿ ಸೇರಿ ಎಲ್ಲ ಸ್ಥಳೀಯರ ಸಹಕಾರದಿಂದ ಒಂದು ದಿನ ಸಮ್ಮೇಳನ ನಡೆಯಲಿದ್ದು, ಎಲ್ಲರಿಗೂ ಆಹ್ವಾನ ಪತ್ರಿಕೆ ತಲುಪಿಸುವಲ್ಲಿ ಕಷ್ಟವಾಗುತ್ತದೆ. ಇದನ್ನು ಆಹ್ವಾನ ಎಂದು ಭಾವಿಸಿ ಎಲ್ಲಾ ಕನ್ನಡದ ಮನಸ್ಸುಗಳು ಆಗಮಿಸಬೇಕು ಎಂದು ಹೇಳಿದರು.
ಹೋಬಳಿ ಘಟಕದ ಅಧ್ಯಕ್ಷ ದಯಾನಂದ್ ಶೆಟ್ಟಿಹಳ್ಳಿ ಮತನಾಡಿ, ಜಾನಪದ ಕಲೆಗಳು ಅಳಿವಿನ ಅಂಚಿನಲ್ಲಿದ್ದು, ಗ್ರಾಮೀಣ ಭಾಗದಲ್ಲೆ ಗ್ರಾಮೀಣ ಕಲೆಗಳು ಮರೆಯಾಗುತ್ತಿರುವ ಹಿನ್ನೆಲೆ ಅವುಗಳನ್ನು ಉತ್ತೇಜಿಸಲು ಗ್ರಾಮೀಣ ಭಾಗದಲ್ಲಿ ಇಂತಹ ಕಾರ್ಯಕ್ರಮವನ್ನು ಹೋಬಳಿ ಘಟಕದ ಪದಾಧಿಕಾರಿಗಳ ತೀರ್ಮಾನದಂತೆ ಆಯೋಜನೆ ಮಾಡಲಾಗಿದೆ. ಸಮ್ಮೇಳನ ಸಲುವಾಗಿ ಹೋಬಳಿ ಹಲವು ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಇದ್ದ ಗ್ರಾಮೀಣ ಕಲೆ ಕೋಲಾಟ, ಸೋಬಾನೆ ಪದ, ರಂಗಕುಣಿತ ಕಲೆಗಳು ನಿಂತುಹೋಗಿದ್ದವು, ಅಂತಹ ಎಲ್ಲ ಕಲೆಗಳಿಗೂ ಸಮ್ಮೇಳನದಲ್ಲಿ ವೇದಿಕೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.ಸಮ್ಮೇಳನಕ್ಕಾಗಿ ಜನಪ್ರತಿನಿಧಿಗಳು ಸೇರಿ ಸಂಘ ಸಂಸ್ಥೆಗಳು ಸಹಕಾರಕ್ಕೆ ಮುಂದಾಗಿವೆ. ಫೆ.೮ ರಂದು ಬೆಳಿಗ್ಗೆ ೮ ಘಂಟೆಗೆ ಧ್ವಜಾರೋಹಣದ ಮೂಲಕ ಆರಂಭವಾಗಿ, ೮.೩೦ಕ್ಕೆ ಕನ್ನಡ ಜಾಗೃತಿ ಬೈಕ್ ರ್‍ಯಾಲಿ, ೯ ಘಂಟೆಗೆ ಎತ್ತಿನಗಾಡಿ ಮೆರವಣಿಗೆ ಆರಂಭವಾಗಿ ೧೫ಕ್ಕೂ ಹೆಚ್ಚು ಕಲಾತಂಡಗಳ ಮೆರವಣಿಗೆ ಇರುತ್ತದೆ. ೧೦.೩೦ಕ್ಕೆ ಕೇಂದ್ರ ಕಸಾಪ ಅಧ್ಯಕ್ಷ ಮಹೇಶ್ ಜೋಷಿ ಇರುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ ಘಟಕದ ಎಲ್ಲಾ ಪದಾಧಿಕಾರಿಗಳು ಹಾಗೂ ಹೋಬಳಿ ಅಧ್ಯಕ್ಷರು ಇರಲಿದ್ದಾರೆ. ಬಳಿಕ ಮೂರು ವಿಚಾರಗೋಷ್ಠಿಗಳು, ಸಂಜೆ ಜಾನಪದ ಝೇಂಕಾರ ಎಂಬ ಕಾರ್ಯಕ್ರಮವನ್ನು ಅಪ್ಪಗೆರೆ ತಿಮ್ಮರಾಜು ನಡೆಸಿಕೊಡಲಿದ್ದಾರೆ. ವಾಗ್ಮಿ ಪ್ರೊ.ಕೃಷ್ಣೇಗೌಡರ ಕಾರ್ಯಕ್ರಮವಿರುತ್ತದೆ ಎಂದು ಮಾಹಿತಿ ನೀಡಿದರು.
ಶ್ಯಾಂಸುಂದರ್ ಕೆ. ಅಣ್ಣೇನಹಳ್ಳಿ, ಎಚ್.ಆರ್.ನಾಗೇಂದ್ರ, ಮೋಹನ್ ಕಲ್ಕೆರೆ, ಬಿ.ಸಿ.ದೊರೆಸ್ವಾಮಿ, ಮಲ್ಲೇಶ್‌ಗೌಡ, ತಾರಾ, ರಂಗನಾಥ್, ಭಾರತೀಶ್, ನಂದನ್‌ಪುಟ್ಟಣ್ಣ, ಸಿ. ವಿ. ಲೋಹಿತ್, ಯಶೋಧ ಜೈನ್, ರೂಪಾ ಇದ್ದರು.ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಡೇನಹಳ್ಳಿ ಲೋಕೇಶ್.