ಕನ್ನಡಪ್ರಭ ವಾರ್ತೆ ಮಂಡ್ಯ
ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ತೊಡೆ ತಟ್ಟುವ ಅವಶ್ಯಕತೆ ನನಗಿಲ್ಲ. ಅವರಿಗೆ ಬೇರೆಯವರ ವಿರುದ್ಧ ತೊಡೆ ತಟ್ಟುವ ಅಗತ್ಯವಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ನಾನು ಅವರಿಗೆ ಎದುರಾಳಿಯಾಗೋಕೆ ಸಾಧ್ಯವೇ. ಕುಮಾರಸ್ವಾಮಿಗೆ ಯಾರೂ ಎದುರಾಳಿಯೇ ಇಲ್ಲ. ಅವರು 28 ಕ್ಷೇತ್ರಕ್ಕೂ ಒಂದೇ ಬಾರಿ ನಿಲ್ಲಬಹುದು. ಅವರು ನಿಂತುಕೊಂಡರೆ ಎದುರಾಳಿಯೇ ಇರುವುದಿಲ್ಲ. ನಾನು ಯಾವತ್ತೂ ಅವರ ಎದುರಾಳಿ ಎಂದು ಹೇಳಿಲ್ಲ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ನನಗೆ ನನ್ನ ಜಿಲ್ಲೆ, ನನ್ನ ಕ್ಷೇತ್ರ, ರಾಜ್ಯ ಅಷ್ಟೇ. ಕುಮಾರಸ್ವಾಮಿಗೆ ತೊಡೆ ತಟ್ಟುವುದು ನನಗೆ ಅವಶ್ಯಕವಿಲ್ಲ. ಅವರಿಗೆ ಬೇರೆಯವರ ವಿರುದ್ಧ ತೊಡೆ ತಟ್ಟೋ ಅವಶ್ಯಕತೆ ಇದೆ. ಅವರು ದೇವೇಗೌಡರ ಮಗ ಆಗಿರದಿದ್ದರೆ ಉತ್ತರ ಹೇಳುತ್ತಿದ್ದೆ. ದೇವೇಗೌಡರ ಮಗ ಎಂಬ ಗೌರವ ಅವರ ಮೇಲಿದೆ ಎಂದು ಹೇಳಿದರು.ನಾನು ಕುಮಾರಸ್ವಾಮಿ ಅವರಂತೆ ಲಘುವಾಗಿ ಮಾತನಾಡುವುದಿಲ್ಲ. ನಮಗೆ ಹಾಗೂ ನಮ್ಮ ಜಿಲ್ಲೆಗೆ ಒಂದು ಸಂಸ್ಕಾರವಿದೆ. ಅದಕ್ಕೆ ಧಕ್ಕೆ ತರಲು ಮಾತನಾಡುವುದಿಲ್ಲ. ಒಟ್ಟಿನಲ್ಲಿ ಜೆಡಿಎಸ್‌ಗೆ ಮಂಡ್ಯ ಅಭಿವೃದ್ಧಿ ಬೇಡ, ಅಧಿಕಾರ ಬೇಕು ಅಷ್ಟೇ ಎಂದರು.
ನಾನೇನು ಕುಮಾರಸ್ವಾಮಿ ಋಣದಲ್ಲಿಲ್ಲಕುಮಾರಸ್ವಾಮಿ ಬಳಿ ನಾನು ವಿನಯದ ಬಗ್ಗೆ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ಅವರಿಂದ ನಾನು ಲೀಡರ್ ಆಗಿಲ್ಲ. ದೇವೇಗೌಡರ ಮೇಲಿನ ಗೌರವಕ್ಕಾಗಿ ಮಾತ್ರ ಸುಮ್ಮನಿದ್ದೇನೆ. ದೇವೇಗೌಡರ ಹೆಸರು ಅವರ ಜೊತೆ ಇಲ್ಲದಿದ್ದರೆ ಅದರಪ್ಪನಂತೆ ನಾನೂ ಕುಮಾರಸ್ವಾಮಿಗೆ ಉತ್ತರ ಕೊಡುತ್ತಿದ್ದೆ. ಚಲುವರಾಯಸ್ವಾಮಿ ಏನು ಕುಮಾರಸ್ವಾಮಿ ಅವರ ಮನೆ ಋಣದಲ್ಲಿ ಇದ್ದಾನಾ? ನಾನೇನೂ ಅವರ ಆಸ್ತಿ ತಿಂದಿದ್ದೇನಾ? ಮಾಜಿ ಸಿಎಂ ಅಂತ ಗೌರವ ಕೊಟ್ಟು ಮಾತನಾಡುತ್ತಿದ್ದೇವೆ. ಗೌರವ ಬೇಡ ಅನ್ನಲಿ. ಅವರು ಮಾತಾಡಿದ್ದಕ್ಕಿಂತ ಬೇರೆ ರೀತಿಯಲ್ಲೇ ನಾನೂ ಅವರಿಗೆ ಮಾತನಾಡುವುದಾಗಿ ಹೇಳಿದರು.
ಕುಮಾರಸ್ವಾಮಿ ಕೈಯಲ್ಲಿ ನನ್ನ ಹಣೆಬರಹ ಬರೆಯೋಕೆ ಆಗುವುದಿಲ್ಲ. ಅವರ ವಿಚಾರವೇ ಪ್ರಸ್ತುತ ಅಲ್ಲ. ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲ್, ಭೈರೇಗೌಡ ಇವರನ್ನು ಜೆಡಿಎಸ್ ನಿಂದ ಹೊರ ಕಳುಹಿಸಿದ್ದು ಯಾರು ಎಂಬುದನ್ನು ಕುಮಾರಸ್ವಾಮಿ ಹೇಳಲಿ. ಮಂಡ್ಯ ಇವರಿಗೆ ಕೊಟ್ಟ ಗೌರವಕ್ಕೆ ಈಗ ಗಲಭೆಯನ್ನು ಬಳುವಳಿಯಾಗಿ ಕೊಡುತ್ತಿದ್ದಾರೆ ಎಂದು ಕಿಡಿಕಾರಿದರು.ಅಭಿವೃದ್ಧಿ ಮಾಡಿದ್ದರೆ ಸೋತಿದ್ದೇಕೆ?
ಮಂಡ್ಯದ ಅಭಿವೃದ್ಧಿ ಬಗ್ಗೆ ದಳಪತಿಗಳಿಂದ ಚರ್ಚೆಗೆ ಆಹ್ವಾನ ನೀಡಿರುವ ಬಗ್ಗೆ ಕೇಳಿದಾಗ, ಅವರಿಗೆ ನಾಚಿಕೆ ಆಗಬೇಕು. ಒಂದು ಅಂಗನವಾಡಿ ಕಟ್ಟಡ ಕಟ್ಟಲು ಆಗಲಿಲ್ಲ. ಅವರೇನು ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತಾರೆ. ಹಿಟ್ ಅಂಡ್ ರನ್ ಕೇಸ್ ಅವರದು. ಬರೋಕೆ ಹೇಳಿ. ಮಂಡ್ಯ ಇಲ್ಲದಿದ್ದರೆ ವಿಧಾನಸಭೆಯಲ್ಲೇ ಒಂದು ದಿನ ಮಂಡ್ಯ ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡೋಣ. ನಾನೂ ಸ್ಪೀಕರ್ ಬಳಿ ಸಮಯ ಕೇಳುತ್ತೇನೆ. ಅವರೂ ಕೇಳಲಿ. ಒಂದು ಇಡೀ ದಿನ ಕಲಾಪದಲ್ಲೇ ಚರ್ಚಿಸೋಣ. ಅವರ ಅಭಿವೃದ್ಧಿ ಶೂನ್ಯ. ಯಾರನ್ನಾದರೂ ಬೈಯ್ಯುತ್ತಿದ್ದರೆ ಇಡೀ ದಿನ ಪ್ರಚಾರದಲ್ಲಿರುತ್ತೇವೆಂದು ಹೀಗೆಲ್ಲಾ ಮಾಡುತ್ತಾರೆ ಎಂದರು.ಮಂಡ್ಯ ಅಭಿವೃದ್ಧಿ ಮಾಡಿದ್ದರೆ 8 ಜನ ಯಾಕೆ ಸೋತರು:ಪುಟ್ಟರಾಜುಗೆ ತಿರುಗೇಟು
ನನಗೆ ಸವಾಲು ಹಾಕಿರುವ ಸಿ.ಎಸ್.ಪುಟ್ಟರಾಜು 2014ರ ಲೋಕಸಭೆ ಚುನಾವಣೆಯನ್ನು ಒಮ್ಮೆ ನೆನಪಿಸಿಕೊಳ್ಳಲಿ. ಅವರಿಗೆ ಬಿ-ಫಾರಂ ಕೊಡಿಸಿದ್ದು ಯಾರು ಎಂದು ಹೇಳಲಿ. ಆನಂತರ ಸವಾಲಿನ ವಿಚಾರಕ್ಕೆ ಬರಲಿ ಎಂದು ಮಾಜಿ ಸಚಿವ ಪುಟ್ಟರಾಜುಗೆ ತಿರುಗೇಟು ನೀಡಿದರು.14 ತಿಂಗಳು ಮಂತ್ರಿಯಾಗಿದ್ದ ಪುಟ್ಟರಾಜು ಕೊಡುಗೆ ಜಿಲ್ಲೆಗೆ ಏನಿದೆ. ಮೊದಲು ಅವರ ಕೊಡುಗೆ ಏನು ಎಂದು ಹೇಳಿದರೆ ಸವಾಲು ಎದುರಿಸುತ್ತೇನೆ. ಅವರ ಸವಾಲನ್ನು ಶಾಸಕ ರವಿಕುಮಾರ್ ಒಬ್ಬನೇ ಎದುರಿಸುತ್ತಾನೆ ಎಂದು ಪಕ್ಕದಲ್ಲಿದ್ದ ರವಿಕುಮಾರ್ ಎದೆಯನ್ನು ತಟ್ಟುತ್ತಾ ಹೇಳಿದರು.