ಹರಂದೂರು ಕುವೆಂಪುನಗರ ವಾತ್ಸಲ್ಯ ಸದಸ್ಯೆ ಸುಕನ್ಯಾ ಫಲಾನುಭವಿ
ಕನ್ನಡಪ್ರಭ ವಾರ್ತೆ, ಕೊಪ್ಪಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನವಿಕಾಸ ಕಾರ್ಯಕ್ರಮ ಮಹಿಳೆಯರನ್ನು ಸಬಲರನ್ನಾಗಿಸುವ ನಿಟ್ಟಿನಲ್ಲಿ ಅವರಿಗೆ ಸಾಮಾಜಿಕ ಕಳಕಳಿ ಸೇವಾ ಕಾರ್ಯಗಳ ತರಬೇತಿ ನೀಡುವ ಮೂಲಕ ಸಾಮಾನ್ಯ ಜ್ಞಾನದೊಂದಿಗೆ ಸಾಮಾಜಿಕ ಕಳಕಳಿ ಮೂಡಿಸುತ್ತಿದೆ ಎಂದು ಯೋಜನೆ ಜಿಲ್ಲಾ ನಿರ್ದೇಶಕ ಪ್ರಕಾಶ್ ರಾವ್ ಹೇಳಿದರು. ಗುರುವಾರ ಕೊಪ್ಪ ವಲಯದ ಹರಂದೂರು ಕಾರ್ಯಕ್ಷೇತ್ರದ ಕುವೆಂಪುನಗರ ವಾತ್ಸಲ್ಯ ಸದಸ್ಯೆ ಸುಕನ್ಯಾರವರಿಗೆ ವಾತ್ಸಲ್ಯ ಯೋಜನೆಯಡಿ ವಾತ್ಸಲ್ಯ ಕುಟುಂಬಗಳ ಎರಡನೇ ಹಂತದ ಮನೆ ದುರಸ್ತಿ, ಸ್ನಾನಗ್ರಹ ಮತ್ತು ಶೌಚಾಲಯ ನಿರ್ಮಾಣದ ಕಾಮಗಾರಿ ಪೂರ್ಣಗೊಂಡ ವಾತ್ಸಲ್ಯ ಮನೆ ಹಸ್ತಾಂತರ ವಳೆ ಮಾತನಾಡಿ, ಹೇಮಾವತಿ ವಿ.ಹೆಗ್ಗಡೆಯವರು ವಾತ್ಸಲ್ಯ ಸದಸ್ಯರನ್ನು ಗುರುತಿಸಿ ಅವರಿಗೆ ಮಾತೃ ವಾತ್ಸಲ್ಯ ಕೊಡುವ ಮೂಲಕ ಪ್ರತೀ ತಿಂಗಳು ಮಾಸಾಶನ, ವಾತ್ಸಲ್ಯ ಮಿಕ್ಸ್ ಫುಡ್, ವಾತ್ಸಲ್ಯ ಕಿಟ್‌ಗಳನ್ನು ನೀಡುವುದರೊಂದಿಗೆ ಅನೇಕರ ಬಾಳಿಗೆ ಬೆಳಕಾಗಿದ್ದಾರೆ. ಪ್ರಸ್ತುತ ವಾತ್ಸಲ್ಯ ಫಲಾನುಭ ವಿಗಳಾದ ಸುಕನ್ಯಾ ವಯೋವೃದ್ಧರಾಗಿದ್ದು ಇವರ ಮಗ, ಸೊಸೆ ನಿಧನರಾಗಿದ್ದಾರೆ. ಇವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು ಅಜ್ಜಿ ಮೊಮ್ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಇವರ ಆರ್ಥಿಕ ಸ್ಥಿತಿ ಕಷ್ಟಕರವಾಗಿರುವುದನ್ನು ಕಂಡು ವಾತ್ಸಲ್ಯ ಮನೆಯನ್ನು ಹಸ್ತಾಂತರಿಸಲಾಗಿದೆ. ವಾತ್ಸಲ್ಯ ಯೋಜನೆ ಕಾರ್ಯ ಸ್ಫೂರ್ತಿ ಮತ್ತು ಮಾದರಿ ಕಾರ್ಯಕ್ರಮ ಎಂದರು.
ಕಾರ್ಯಕ್ರಮದಲ್ಲಿ ಫಲ ತಾಂಬೂಲದೊಂದಿಗೆ ಮನೆ ಜವಾಬ್ದಾರಿ ಹಸ್ತಾಂತರ ಮಾಡಲಾಯಿತು. ಕೊಪ್ಪ, ನ.ರಾ.ಪುರ ಯೋಜನಾ ಕಚೇರಿ ಯೋಜನಾಧಿಕಾರಿ ನಿರಂಜನ್, ವಲಯ ಮೇಲ್ವಿಚಾರಕ ರವಿಕುಮಾರ್, ಜ್ಞಾನವಿಕಾಸ ಸಮನ್ವಯಾಧಿಕಾರಿ ರಂಜಿತಾ, ಸೇವಾ ಪ್ರತಿನಿಧಿಗಳಾದ ಪುಷ್ಪ, ರಾಘವೇಂದ್ರ ಪೂಜಾರಿ ಒಕ್ಕೂಟದ ಪದಾಧಿಕಾರಿಗಳು, ಸಂಘದ ಸದಸ್ಯರು, ಶೌರ್ಯ ವಿಪತ್ತು ನಿರ್ವಹಣೆಯ ಸ್ವಯಂ ಸೇವಕರು ಕಾರ್ಯಕ್ರಮದಲ್ಲಿದ್ದರು.