ಲಿಂಗದಬೈಲ್ ಹೋಮ್ ಸ್ಟೇ ವಿರುದ್ಧ ಇಂದು ಸಿದ್ದಿಗಳ ಪ್ರತಿಭಟನೆ

KannadaprabhaNewsNetwork | Published : Feb 3, 2024 1:49 AM

ಸಾರಾಂಶ

ಹೋಮ್ ಸ್ಟೇ ನಿರ್ಮಾಣಕ್ಕೆ ಸರ್ಕಾರ ಬಿಡುಗಡೆ ಮಾಡಿದ ಅನುದಾನ ದುರ್ಬಳಕೆಯಾಗಿದ್ದು, ಹಿರಿಯ ಅಧಿಕಾರಿಗಳೂ ಈ ಅವ್ಯವಹಾರದಲ್ಲಿ ಭಾಗಿಯಾಗಿರುವ ಶಂಕೆ ಇದೆ.

ಯಲ್ಲಾಪುರ:

ತಾಲೂಕಿನ ಇಡಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಸನಗದ್ದೆ-ಲಿಂಗದಬೈಲ್ ಬಳಿ ಸೀತಾರಾಮ ಸಂಜೀವಿನಿ ಸ್ವ-ಸಹಾಯ ಸಂಘಗಳ ಒಕ್ಕೂಟದಡಿ ನಿರ್ಮಿಸಿರುವ ಸಿದ್ದಿ ಟ್ರೈಬಲ್‌ ಹೋಮ್ ಸ್ಟೇ ಉದ್ಘಾಟನೆ ವಿರೋಧಿಸಿ ಇಂದು (ಶನಿವಾರ) ಸಿದ್ದಿ ಸಮುದಾಯದ ಜನರು ಪ್ರತಿಭಟನೆ ನಡೆಸಲಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಹೋಮ್ ಸ್ಟೇ ಮಾಜಿ ಅಧ್ಯಕ್ಷೆ ರಾಜೇಶ್ವರಿ ಕೃಷ್ಣ ಸಿದ್ದಿ, ಹೋಮ್ ಸ್ಟೇ ನಿರ್ಮಾಣಕ್ಕೆ ಸರ್ಕಾರ ಬಿಡುಗಡೆ ಮಾಡಿದ ಅನುದಾನ ದುರ್ಬಳಕೆಯಾಗಿದ್ದು, ಹಿರಿಯ ಅಧಿಕಾರಿಗಳೂ ಈ ಅವ್ಯವಹಾರದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಈ ಕುರಿತು ಸಮಗ್ರ ತನಿಖೆಯಾಗಬೇಕು. ಫೆ. ೩ರಂದು ನಡೆಯಲಿರುವ ಉದ್ಘಾಟನೆ ಕಾರ್ಯಕ್ರಮ ವಿರೋಧಿಸಿ ಪ್ರತಿಭಟನೆ ಮಾಡುವುದಾಗಿ ಹೇಳಿದರು.೨೦೨೧ರಲ್ಲಿ ಅಂದಿನ ಜಿಪಂ ಸಿಇಒ ಪ್ರಿಯಾಂಗಾ ಅವರು ಸಿದ್ದಿ ಸಮುದಾಯದ ಉನ್ನತಿಗಾಗಿ ಸ್ವಯಂ ಆಸಕ್ತಿಯಿಂದ ಈ ಯೋಜನೆ ರೂಪಿಸಿ, ಸ್ವಾವಲಂಬನೆ ಮತ್ತು ಸಂಸ್ಕೃತಿ ದೊರಕಿಸುವ ಉದ್ದೇಶದಿಂದ ಸರ್ಕಾರಕ್ಕೆ ಕೋಟ್ಯಂತರ ರೂ.ಗಳ ಪ್ರಸ್ತಾವನೆ ಸಲ್ಲಿಸಿದ್ದರು. ಯೋಜನೆಯ ಪ್ರಾರಂಭಿಕ ಹಂತದಲ್ಲಿಯೇ ಅವರು ಜಿಲ್ಲೆಯಿಂದ ವರ್ಗವಾದರು. ನಂತರ ಆಗಮಿಸಿದ ಸಿಇಒ ಈಶ್ವರಕುಮಾರ ಕಾಂದು ನಮ್ಮೆಲ್ಲರನ್ನೂ ಕಡೆಗಣಿಸಿ, ಕೇರಳದ ಕಬಿನಿ ಖಾಸಗಿ ಪ್ರವಾಸೋದ್ಯಮ ಸಂಸ್ಥೆಗೆ ನಮ್ಮ ಜನಾಂಗದ ಅರಿವಿಗೂ ಬಾರದಂತೆ ಅದನ್ನು ಹಸ್ತಾಂತರಿಸಿದ್ದಾರೆ. ಅಲ್ಲದೇ, ಡಿ. ೬, ೨೦೨೩ರಂದು ಉಸ್ತುವಾರಿ ಸಮಿತಿ ಅಧ್ಯಕ್ಷೆಯಾಗಿದ್ದ ನನ್ನನ್ನು ಉಚ್ಛಾಟಿಸಿ, ಸಮಿತಿ ವಿಸರ್ಜಿಸಿ, ಲಲಿತಾ ಮಂಜುನಾಥ ಸಿದ್ದಿ ಅವರನ್ನು ಅಧ್ಯಕ್ಷರನ್ನಾಗಿ ನಿಯುಕ್ತಿಗೊಳಿಸಿದ್ದಾರೆ. ಅಲ್ಲದೇ ಸಂಸ್ಥೆಗಿದ್ದ ಹೆಸರನ್ನು ಡಮಾಮಿ ಸಮುದಾಯ ಪ್ರವಾಸೋದ್ಯಮ ಎಂದು ಬದಲಾಯಿಸಿದ್ದಾರೆ. ಬ್ಯಾಂಕ್‌ ಸೇರಿದಂತೆ ಎಲ್ಲ ಖಾತೆ ಬದಲಾವಣೆ ಮಾಡಿದ್ದಾರೆ ಎಂದು ಆಪಾದಿಸಿದರು.

ಕನ್ನಡ ಭಾಷೆ ಬಾರದ ಮಲೆಯಾಳಿಗಳನ್ನು ತಂದು ನಮಗೆ ವಾರಗಟ್ಟಲೇ ತರಬೇತಿ ನೀಡಿದ್ದಾರೆ. ಈ ಹೋಮ್ ಸ್ಟೇ ನಮ್ಮ ಸಮುದಾಯಕ್ಕೂ ತಿಳಿಸದೇ ಉದ್ಘಾಟಿಸಲಾಗುತ್ತಿದೆ. ಆದರೂ ನಾವು ಸಮಾಜದ ಹಿತದೃಷ್ಟಿಯಿಂದ ಸಹಿಸಿಕೊಂಡೆವು. ಗುರುವಾರ ಪ್ರಕಟಗೊಂಡ ಆಮಂತ್ರಣ ನೋಡಿ ಆಶ್ಚರ್ಯವಾಗಿ, ಫೆ. ೩ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರತಿಭಟನೆ ಮಾಡುವುದಾಗಿ ಹೇಳಿದರು.

ಇಡಗುಂದಿ ಗ್ರಾಪಂ ಸದಸ್ಯ ಗೋಪಾಲ ಸಿದ್ದಿ ಮಾತನಾಡಿ, ನಮ್ಮ ಸಮುದಾಯದ ಜನರಿಗೆ ಸ್ವ-ಉದ್ಯೋಗ ಕಲ್ಪಿಸುವ ನೆಲೆಯಲ್ಲಿ ಮಾಡಿದ ಯೋಜನೆಯಾಗಿದ್ದರೂ ಇದನ್ನು ಕೇರಳದ ಸಂಸ್ಥೆಯವರಿಗೆ ವಹಿಸಿ, ನಮ್ಮನ್ನು ಇಲ್ಲಿ ಕೂಲಿ ಕೆಲಸಕ್ಕಾಗಿ ಮಾತ್ರ ಬಳಸಿಕೊಳ್ಳುವ ಹುನ್ನಾರ ನಡೆದಿದೆ. ನಮ್ಮ ಪ್ರತಿಭಟನೆ ಸಮಾಜಕ್ಕಾದ ಅನ್ಯಾಯದ ವಿರುದ್ಧವೇ ಹೊರತು, ಯೋಜನೆಯ ವಿರುದ್ಧವಲ್ಲ. ಆದ್ದರಿಂದ ಶನಿವಾರದ ಉದ್ಘಾಟನಾ ಕಾರ್ಯಕ್ರಮಕ್ಕೆ ಬರಲಿರುವ ಜಿಪಂ ಸಿಒಗೆ ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ನಮಗುಂಟಾದ ಅನ್ಯಾಯವನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತೇವೆ ಎಂದರು.

ಆನಗೋಡು ಗ್ರಾಪಂ ಉಪಾಧ್ಯಕ್ಷೆ ಕುಸುಮಾ ಸಿದ್ದಿ, ಮಹಾದೇವಿ ಸಿದ್ದಿ, ಸಾಮಾಜಿಕ ಕಾರ್ಯಕರ್ತ ಅನಂತ ಗಣಪ ಸಿದ್ದಿ, ಗಣಪತಿ ಸಿದ್ದಿ, ಸೀತಾ ಸಿದ್ದಿ, ಅನಿತಾ ಸಿದ್ದಿ, ಮೀನಾಕ್ಷಿ ಸಿದ್ದಿ, ದೇವಕಿ ಸಿದ್ದಿ ಗೋಷ್ಠಿಯಲ್ಲಿದ್ದರು.

Share this article