ಕುಕನೂರು:
ಬಿಜೆಪಿ ತನ್ನದೆಯಾದ ತತ್ವ, ಸಿದ್ಧಾಂತಗಳಿಂದ ವಿಶ್ವದ ಗಮನ ಸೆಳೆದಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು.ತಾಲೂಕಿನ ಮಸಬ ಹಂಚಿನಾಳದ ಪಕ್ಷದ ಕಾರ್ಯಾಲಯದಲ್ಲಿ ಭಾನುವಾರ ನಡೆದ ಬಿಜೆಪಿ 45ನೇ ಸಂಸ್ಥಾಪನ ದಿನಾಚರಣೆಯ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಭಾರತೀಯ ಜನ ಸಂಘ ಎಂಬ ಹೆಸರಿನಲ್ಲಿ ಆರಂಭಗೊಂಡು ೧೯೭೭ರಲ್ಲಿ ಜನತಾ ಪಕ್ಷದಲ್ಲಿ ವಿಲೀನವಾಗಿ, ಪುನಃ ಅದರಿಂದ ಬೇರೆಯಾಗಿ ೧೯೮೦ರಲ್ಲಿ ಬಿಜೆಪಿಯಾಗಿ (ರಾಷ್ಟ್ರೀಯ ಪಕ್ಷ) ಹೊರಹೊಮ್ಮಿತು ಎಂದರು.
ಮಾಜಿ ಪ್ರಧಾನಿ ಡಾ. ಅಟಲ್ ಬಿಹಾರಿ ವಾಜಪೇಯಿ ಅವರು ಜನಸಂಘದಿಂದ ಬಂದಿದ್ದೇವೆ. ರಾಷ್ಟ್ರೀಯ ಒಳಿತಗಾಗಿ ಬಿಜೆಪಿ ಕಟ್ಟುತ್ತೇವೆ ಎಂದು ಏ. 6ರಂದು ಪಕ್ಷ ಕಟ್ಟಿದರು. ಅಂದು ಕಟ್ಟಿದ ಪಕ್ಷ ಇಂದು ರಾಷ್ಟ್ರದ ಅಭಿವೃದ್ಧಿಗಾಗಿ, ರಾಷ್ಟ್ರೀಯತೆಗಾಗಿ, ಸಂಘಟನೆ, ಹೋರಾಟದಿಂದ ಇಡೀ ವಿಶ್ವದಲ್ಲಿ ಗಮನ ಸೆಳೆದಿದೆ ಎಂದ ಅವರು, ಪಕ್ಷ ಸಂಘಟನೆಯಲ್ಲಿ ನಾಯಕರಾದ ವಾಜಪೇಯಿ, ಎಲ್.ಕೆ. ಅಡ್ವಾನಿ ಅವರ ಕೊಡುಗೆ ಅಪಾರ. ವಾಜಪೇಯಿ ಕೇವಲ ಒಂದು ಮತದಲ್ಲಿ ಅಧಿಕಾರ ಕಳೆದುಕೊಂಡರು. ಆದರೆ, ಯಾರ ಜತೆಗೂ ಸಹ ಹೊಂದಾಣಿಕೆಯಾಗದೆ ಸ್ವತಂತ್ರ್ಯವಾಗಿ ಪಕ್ಷ ಕಟ್ಟಿ ಬೆಳೆಸಿದರು ಎಂದು ಬಣ್ಣಿಸಿದರು.ಚತುಷ್ಪತ ರಸ್ತೆಗಳನ್ನು ಮೊದಲ ಬಾರಿಗೆ ವಾಜಪೇಯಿ ಜಾರಿಗೆ ತಂದರು ಎಂದ ಅವರು, ಬಿಜೆಪಿ ಜನಸಾಮಾನ್ಯರಿಗೆ ಯೋಜನೆ ತಲುಪಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರಾವಧಿ ಸುವರ್ಣಯುಗವಾಗಿದೆ. ಭಾರತ ತನ್ನ ಪರಂಪರೆಯನ್ನು ಎಲ್ಲಿ ಅನ್ಯ ಪಕ್ಷಗಳ ಆಡಳಿತದಿಂದ ಕಳೆದುಕೊಳ್ಳುತ್ತದೆಯೋ ಎಂಬ ಭಯ ಇತ್ತು. ಆದರೆ, ನಮ್ಮ ಪರಂಪರೆ, ಮಾತೃಭಾವ ಬಿಜೆಪಿ ಆಡಳಿತದಲ್ಲಿ ಭಾರತಕ್ಕೆ ಸಂಪೂರ್ಣವಾಗಿ ಮರಳಿ ದೊರಕಿದೆ ಎಂದರು.
ಯಲಬುರ್ಗಾ ಬಿಜೆಪಿ ಮಂಡಲದ ಅಧ್ಯಕ್ಷ ಮಾರುತಿ ಗಾವರಾಳ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಂಬರೀಶ ಹುಬ್ಬಳ್ಳಿ, ಶಿವಕುಮಾರ ನಾಗಲಾಪೂರಮಠ, ಶರಣಪ್ಪ ಬಣ್ಣದಬಾವಿ, ಬಸನಗೌಡ ತೊಂಡಿಹಾಳ, ಶಂಭು ಜೋಳದ, ಮಹಿಳಾ ಮೋರ್ಚಾ ಅಧ್ಯಕ್ಷೆ ಸಂತೋಷಮ್ಮ ಜೋಶಿ, ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ ಪಾರ್ವತಿ ಹನಸಿ, ಯುವ ಮೋರ್ಚಾ ಅಧ್ಯಕ್ಷ ಕಲ್ಲೇಶಪ್ಪ ಕರಮುಡಿ, ಪಪಂ ಸದಸ್ಯರಾದ ಜಗನ್ನಾಥ ಬೋವಿ, ಬಾಲರಾಜ ಗಾಳಿ, ಶಿವರಾಜ ಯಲ್ಲಪ್ಪಗೌಡ್ರು, ಮಹಾಂತೇಶ ಹೂಗಾರ, ಚಂದ್ರು ಬಗನಾಳ, ನಾಗರಾಜ ಬನ್ನಿಕೊಪ್ಪ, ಉಮೇಶಗೌಡ ಪಾಟೀಲ್, ಪ್ರಕಾಶ ತಹಸೀಲ್ದಾರ್, ಲಕ್ಷ್ಮಣ ಕಾಳಿ, ಪ್ರಕಾಶ ರಾಜೂರು ಇದ್ದರು.ಮನೆ ಮೇಲೆ ಹಾರಾಡಿದ ಬಿಜೆಪಿ ಧ್ವಜಬಿಜೆಪಿ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಭಾನುವಾರ ಬಿಜೆಪಿ ಕಾರ್ಯಕರ್ತರು ತಮ್ಮ ಮನೆಗಳ ಮೇಲೆ ಬಿಜೆಪಿ ಧ್ವಜ ಕಟ್ಟಿ ಸಂಸ್ಥಾಪನಾ ದಿನ ಆಚರಿಸಿದರು. ಮಾಜಿ ಸಚಿವ ಹಾಲಪ್ಪ ಆಚಾರ ಸೇರಿದಂತೆ ಮುಖಂಡರು, ಕಾರ್ಯಕರ್ತರ ಮನೆ ಮೇಲೆ ಬಿಜೆಪಿ ಬಾವುಟ ಹಾರಾಡಿತು.