ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಬಿಜೆಪಿ ಯಾರನ್ನು ಭ್ರಷ್ಟ ಎಂದು ಆರೋಪಿಸಿತ್ತೋ ಅವರನ್ನೇ ಈಗ ರಾಜ್ಯಾಧ್ಯಕ್ಷರನ್ನಾಗಿ ಮಾಡಿದೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ತಿರುಗೇಟು ನೀಡಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಿಜೆಪಿಯವರೇ ವಿಜಯೇಂದ್ರ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎಂದು ಆರೋಪಿಸಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರು. ವಿಜಯೇಂದ್ರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಬಿಜೆಪಿಯವರೇ ಭ್ರಷ್ಟಾಚಾರದ ಕಳಂಕ ಹೊರಿಸಿದ್ದರು. ಈಗ ಅದೇ ಬಿಜೆಪಿಯವರೇ ವಿಜಯೇಂದ್ರನನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಅವರು ಏನು ಹೇಳಿದರೂ ಸರಿ ಅನ್ನುವಂತಾಗಿದೆ. ಅವರೆಲ್ಲ ಬೆಳಗ್ಗೆ ಒಂದು, ಮಧ್ಯಾಹ್ನ ಒಂದು, ರಾತ್ರಿ ಒಂದು ಹೇಳಿಕೆ ನೀಡುತ್ತಿದ್ದಾರೆ. ಬೆಳಗ್ಗೆ ಹೇಳಿದ ಮಾತು ಮಧ್ಯಾಹ್ನ ಕೇಳಿದರೆ ನೆನಪೇ ಇರುವುದಿಲ್ಲ. ಇಂತಹ ಸ್ಥಿತಿ ಬಿಜೆಪಿಯಲ್ಲಿದೆ ಎಂದು ವ್ಯಂಗ್ಯವಾಡಿದರು.
ದೇಶ ದಿವಾಳಿ ಮಾಡಿದ ಬಿಜೆಪಿ:ಬಿಜೆಪಿಯವರು ಕಳೆದ ಹತ್ತು ವರ್ಷಗಳಲ್ಲಿ ದೇಶವನ್ನು ನಾಶ ಮಾಡಿದ್ದಾರೆ. ಆರ್ಥಿಕವಾಗಿ ದೇಶ ದಿವಾಳಿಯಾಗಿದ್ದು, ₹165 ಲಕ್ಷ ಕೋಟಿ ಸಾಲ ಇದೆ. ಒಬ್ಬ ವ್ಯಕ್ತಿಯನ್ನು ದೇವರೆಂದು ಪ್ರತಿಬಿಂಬಿಸುವುದು, ಅವರನ್ನೇ ವಿಶ್ವಗುರು ಎಂದು ಹೇಳುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಳ್ಳೆಯದಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಮತ್ತು ನರೇಂದ್ರ ಮೋದಿ ಅವರು ಹತ್ತು ವರ್ಷ ಏನು ಮಾಡಿದ್ದಾರೆ ಎಂಬ ಬಗ್ಗೆ ಚರ್ಚೆ ನಡೆಸಬೇಕು ಎಂದರು.
ಬಿಜೆಪಿಯಲ್ಲಿ ಅಸಮಾಧಾನ ಮೊದಲಿಂದಲೂ ಇದೆ. ಕೇಂದ್ರದ ಬಗ್ಗೆ ಬಿಜೆಪಿ ಯಾವ ಸಂಸದರೂ ಮಾತನಾಡುವುದಿಲ್ಲ. ಆದರೆ, ರಾಜ್ಯದ ವಿಷಯ ಬಂದಾಗ ಎಲ್ಲರೂ ಮಾತನಾಡುತ್ತಾರೆ. ದೇಶದ ವಿಚಾರ ಬಂದಾಗ ಮಾತನಾಡುವುದಿಲ್ಲ. ಕ್ಯಾಬಿನೆಟ್ ಪ್ರಗತಿ ಪರಿಶೀಲನೆ ಇಲ್ಲ, ಕ್ಯಾಬಿನೆಟ್ ಬಿಟ್ಟು ನಿರ್ಧಾರ ತೆಗೆದುಕೊಳ್ಳುವುದು ಇದನ್ನು ಹತ್ತು ವರ್ಷದಿಂದ ನೋಡುತ್ತಾ ಬಂದಿದ್ದೇವೆ. ನರೇಂದ್ರ ಮೋದಿ ಅವರಿಗೆ ಮಾತ್ರ ಅನುಕೂಲ ಆಗಿದೆ. ಆದರೆ, ಅವರಿಂದ ದೇಶಕ್ಕೆ ಒಂದು ರುಪಾಯಿ ಅನುಕೂಲವಾಗಿಲ್ಲ ಎಂದು ಹೇಳಿದರು.ಮುಖ್ಯಮಂತ್ರಿ ಪುತ್ರ ಯತೀಂದ್ರ ವಿರುದ್ಧ ಬಿಜೆಪಿ ಕೈಗೊಂಡಿರುವ ಅಭಿಯಾನಕ್ಕೆ ಆಕ್ರೋಶ ವ್ಯಕ್ತಪಡಿಸಿದ ಲಾಡ್, ಭ್ರಷ್ಟಾಚಾರಕ್ಕೆ ಸಂಬಂಧಿಸಿ ಮಧ್ಯಪ್ರದೇಶದಲ್ಲಿ ಅಪ್ಪ-ಮಗ ವಿಡಿಯೋ ಒಂದರಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅದರ ಬಗ್ಗೆ ಬಿಜೆಪಿ ನಾಯಕರು ಚಕಾರ ಎತ್ತುವುದಿಲ್ಲ. ಯತೀಂದ್ರ ಮಾತನಾಡಿರುವ ಯಾವುದೋ ಒಂದು ವಿಡಿಯೋ ಇಟ್ಟುಕೊಂಡು ಆಟವಾಡುತ್ತಿದ್ದಾರೆ. ಆ ವಿಡಿಯೋದಲ್ಲಿ ಏನಿದೆ? ವರ್ಗಾವಣೆ ಎನ್ನುವ ಪದವೇ ಇಲ್ಲ. ಈ ಕುರಿತು ಈಗಾಗಲೇ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಿದ್ದಾರೆ ಎಂದರು.
ಬಿಜೆಪಿ ಮೋದಿ ಹೆಸರಲ್ಲಿ ಗ್ಯಾರಂಟಿ:ನಾವು ಕನಿಷ್ಠ ಕಾಂಗ್ರೆಸ್ ಗ್ಯಾರಂಟಿ ಅಂತ ಆರಂಭಿಸಿದ್ದೇವೆ. ಆದರೆ, ಗ್ಯಾರಂಟಿ ವಿರೋಧಿಸುತ್ತಿದ್ದ ಬಿಜೆಪಿ ಈಗ ಮೋದಿ ಹೆಸರಲ್ಲಿ ಗ್ಯಾರಂಟಿ ಆರಂಭಿಸಿದೆ. ಮೋದಿ ಕಳೆದ ಹತ್ತು ವರ್ಷದಲ್ಲಿ ಮಾತಾಡಿದ್ದೆಲ್ಲವೂ ಉಲ್ಟಾ ಆಗಿದೆ. ಬರ ವಿಚಾರದಲ್ಲಿ ಕೇಂದ್ರ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ನಮ್ಮ ಭೇಟಿಗೆ ಸಮಯಾವಕಾಶ ಕೊಡುತ್ತಿಲ್ಲ. ನಾಲ್ಕು ಬಾರೀ ಹೋದರೂ ಭೇಟಿಗೆ ಸಮಯ ನೀಡಿಲ್ಲ. ರಾಜ್ಯದ ಜನರ ಸಂಕಷ್ಟ ಅರಿತು ರಾಜ್ಯ ಸರ್ಕಾರ ಬರ ಪರಿಹಾರ ಕಾಮಗಾರಿ ಆರಂಭಿಸಿದೆ ಎಂದರು.
ಹೆಸರು ಅದಲು ಬದಲು!:ಸಚಿವ ಸಂತೋಷ ಲಾಡ್ ಅವರು ಮಾತಿನ ಭರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲು ಮುಖ್ಯಮಂತ್ರಿ ಪುತ್ರ ಯತೀಂದ್ರ ಮೇಲೆ ಹರಿಹಾಯ್ದ ಘಟನೆ ನಡೆಯಿತು. ಯತೀಂದ್ರ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಾರೆ, ಅವರು ಬಹಳಷ್ಟು ಭ್ರಷ್ಟರಿದ್ದಾರೆ. ಯತೀಂದ್ರರನ್ನು ಯಾಕೆ ಅಧ್ಯಕ್ಷರಾಗಿ ಮಾಡಿದರು ಎಂಬುದನ್ನು ಬಿಜೆಪಿಯವರಿಗೆ ದಯವಿಟ್ಟು ಕೇಳಿ. ಯತೀಂದ್ರ ಮೇಲೆ ಆಪಾದನೆ ಹೊರಿಸಿದವರು ಯಾರು? ಎಂದು ವಿಜಯೇಂದ್ರರನ್ನು ಬಯ್ಯುವ ಭರದಲ್ಲಿ ಯತೀಂದ್ರ ಹೆಸರು ಹೇಳಿ ಬೈಯ್ದರು. ಬಳಿಕ ಮಾತಿನ ತಪ್ಪು ಅರಿವಾಗಿ ನಾನು ಯತೀಂದ್ರ ಅವರ ಬಗ್ಗೆ ಅಲ್ಲ ವಿಜಯೇಂದ್ರ ಬಗ್ಗೆ ಮಾತನಾಡಿದೆ ಅಂತ ಸಮಜಾಯಿಷಿ ನೀಡಿದರು.