ಬಿಜೆಪಿ ಸರ್ಕಾರ ರಚನೆಗೆ ಸಾವಿರ ಕೋಟಿ ಮೀಸಲು?: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವಾರಾಜ್ ತಂಗಡಗಿ

KannadaprabhaNewsNetwork | Updated : Oct 01 2024, 11:42 AM IST

ಸಾರಾಂಶ

ಬಿಜೆಪಿಯವರು ಯಾವಾಗಲೂ ಅಧಿಕಾರಕ್ಕಾಗಿ ಖರೀದಿ ಮಾಡುತ್ತಾರೆ ಎಂದು ಸಚಿವ ಶಿವರಾಜ್ ತಂಗಡಗಿ ಆರೋಪಿಸಿದ್ದಾರೆ. ಯತ್ನಾಳ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

 ವಿಜಯಪುರ : ಬಿಜೆಪಿಯವರು ಯಾವಾಗಲೂ ಮತ್ತೊಬ್ಬರನ್ನು ಖರೀದಿ ಮಾಡಿಯೇ ಅಧಿಕಾರ ಅನುಭವಿಸಿದ್ದಾರೆ. ಹಿಂದೆ ಯಡಿಯೂರಪ್ಪನವರ ಸರ್ಕಾರದಲ್ಲಿ ಪಕ್ಷೇತರನಾಗಿ ನಾನು ಸಪೋರ್ಟ್ ಮಾಡಿದ್ದೆ. ಬಿಜೆಪಿ ಎಂದೂ ಜನರು ಆಯ್ಕೆ ಮಾಡಿದ ಸರ್ಕಾರ ಆಗಲು ಸಾಧ್ಯವಿಲ್ಲ ಎಂದು ಹಿಂದುಳಿದ ವರ್ಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವಾರಾಜ್ ತಂಗಡಗಿ ಹೇಳಿದರು.

ಕಾಂಗ್ರೆಸ್ ಸರ್ಕಾರ ಕೆಡವಲು ಬಿಜೆಪಿ ಸಾವಿರ ಕೋಟಿ ಮೀಸಲಿಟ್ಟಿದ್ದಾರೆ ಎಂಬ ಯತ್ನಾಳ ಹೇಳಿಕೆ ವಿಚಾರಕ್ಕೆ ಮಹಾರಾಷ್ಟ್ರ ಗಡಿಭಾಗದ ಗುಡ್ಡಾಪುರದಲ್ಲಿ ಪ್ರತಿಕ್ರಿಯಿಸಿದ ಅವರು, ಪಕ್ಷೇತರ ಐದು ಜನ ಆಗ ಸರ್ಕಾರಕ್ಕೆ ಬೆಂಬಲ ಕೊಟ್ಟಿದ್ದೇವು, ನಮ್ಮನ್ನೇ ಅನರ್ಹನನ್ನಾಗಿ ಮಾಡಲಾಯಿತು. ಆಮೇಲೆ ಆಪರೇಷನ್ ಕಮಲ‌ ಮಾಡಿ ಸರ್ಕಾರ ಮಾಡಿದರು. ಅವ್ಯವಹಾರ ಏನು ಮಾಡಬೇಕು ಎಲ್ಲವನ್ನೂ ಮಾಡಿದ್ದಾರೆ. ಈಗ ರಾಜ್ಯದ ಜನರು ಅವರನ್ನು ಮನೆಗೆ ಕಳುಹಿಸಿದ್ದಾರೆ. ಈಗ ಸಮಾಧಾನದಿಂದ ಕುಳಿಕೊಳ್ಳಲು ಬಿಜೆಪಿಯವರಿಗೆ ಆಗುತ್ತಿಲ್ಲ. ಸಿದ್ದರಾಮಯ್ಯನವರ ಬಗ್ಗೆ ಇಲ್ಲ‌ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಈಗ ಮುಡಾ ಬಗ್ಗೆ ಮಾತನಾಡುತ್ತಿದ್ದಾರೆ. ಮುಡಾ ಸೈಟ್ ಹಂಚಿಕೆಯಾದಾಗ ಸಿದ್ದರಾಮಯ್ಯ ಸಿಎಂ ಆಗಿರಲಿಲ್ಲ, ಅಧಿಕಾರದಲ್ಲಿರಲಿಲ್ಲ. ಅವರು ಕಡತಕ್ಕೆ ಸಹಿ ಹಾಕಿಲ್ಲ. ಕೋರ್ಟ್ ಹೇಳಿದೆ ಅದನ್ನು ನಾವು ಗೌರವಿಸುತ್ತೇವೆ. ತನಿಖೆಯಾಗಲಿ ಏನು ಶಿಕ್ಷೆಯಾಗತ್ತೋ ಅದನ್ನು ಗೌರವಿಸುವುದು ನಮ್ಮ ಧರ್ಮ. ಈ ಹಿಂದೆ ಯತ್ನಾಳ, ಬೊಮ್ಮಾಯಿ ಸಿಎಂ ಆಗಲು ₹2 ಸಾವಿರ ಕೋಟಿ ವ್ಯವಹಾರ ಆದ ಮೇಲೆ ಸಿಎಂ ಆಗಿದ್ದಾರೆ ಎಂದು ಹೇಳಿದ್ದರು. ಈ ಮೂಲಕ ಕಾಂಗ್ರೆಸ್‌ನವರಿಂದಲೇ ಕಾಂಗ್ರೆಸ್ ಸರ್ಕಾರ ಕೆಡವಲು ಹಣ ಮೀಸಲಿಟ್ಟಿದ್ದಾರೆ ಎಂದು ಯತ್ನಾಳ್ ಹೇಳಿಕೆಗೆ ಟಾಂಗ್ ನೀಡಿದರು.

ಕಾಂಗ್ರೆಸ್‌ನವರಿಗೆ ಅದು ಅವಶ್ಯಕತೆ ಇಲ್ಲ. ದುಡ್ಡು ಕೊಟ್ಟು ಶಾಸಕರನ್ನು ಖರೀದಿಸುವ ಅವಶ್ಯಕತೆ ಕಾಂಗ್ರೆಸ್ಸಿಗಿಲ್ಲ. ಸಿದ್ದರಾಮಯ್ಯನವರಿಗೆ ಅವಶ್ಯಕತೆ ಇಲ್ಲ. ಏನಾದರೂ ಅವಶ್ಯತೆಯಿದ್ದರೇ ಬಿಜೆಪಿವರಿಗೆ, ಯತ್ನಾಳರಿಗೆ ಇದೆ. ಬಳ್ಳಾರಿಗೆ ಜನಾರ್ದನ ರೆಡ್ಡಿ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಅನುಮತಿ ವಿಚಾರ. ಕೋರ್ಟ್ ಆದೇಶಕ್ಕೆ ಏನೂ ಕಮೆಂಟ್ ಮಾಡಲು ಬರಲ್ಲ. ಕೋರ್ಟ್ ಆದೇಶ ಗೌರವಿಸಬೇಕು, ಆ ಬಗ್ಗೆ ನಾನು ಹೆಚ್ಚು ಕಮೆಂಟ್ ಮಾಡಲ್ಲ. ಇವರೆಲ್ಲ ಸಿದ್ದರಾಮಯ್ಯ ನವರ ಬಗ್ಗೆ ಮಾತನಾಡುತ್ತಾರಲ್ಲ, ಆಗ ನಮಗೆ ನೋವಾಗತ್ತೆ. ದೊಡ್ಡ ದೊಡ್ಡ ಕಳ್ಳತನ ಮಾಡಿ ಜೈಲಿಗೆ ಹೋಗಿ ಬಂದಿದ್ದಾರೆ. ಸಿದ್ದರಾಮಯ್ಯ ನವರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಲಿ ಎಂದು ಜನಾರ್ದನ ರೆಡ್ಡಿಗೆ ಸಲಹೆ ನೀಡಿದರು.

ಕಾಂಗ್ರೆಸ್ ಶಾಸಕರನ್ನು ಖರೀದಿಸಿ ಬಿಜೆಪಿ ಸರ್ಕಾರ ರಚಿಸುವ ವಿಚಾರ. ಈಗಿರುವ 136 ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಪ್ರಶ್ನೆಯೇ ಇಲ್ಲ. ಖರೀದಿ ಆಗುವುದಿಲ್ಲ, ಬಿಜೆಪಿಯವರು ಕನಸ್ಸು ಕಾಣಬೇಕು. ಕಾಂಗ್ರೆಸ್ ಸರ್ಕಾರ ಕೆಡವಲು ಆಗುವುದಿಲ್ಲ, ಸಿದ್ದರಾಮಯ್ಯನವರು ಗಟ್ಟಿಯಾಗಿರುತ್ತಾರೆ. 136 ಶಾಸಕರು, ಸಚಿವರು, ಹೈ ಕಮಾಂಡ್ ಸಿದ್ದರಾಮಯ್ಯನವರೊಟ್ಟಿಗೆ ಇದ್ದೇವೆ. ಸಿದ್ದರಾಮಯ್ಯ ಆಡಳಿತ ರಾಜ್ಯದ ಬಡ ಜನರಿಗೆ ಅನುಕೂಲವಾಗುತ್ತದೆ ಎಂಬ ದೃಷ್ಟಿಯಿಂದ ಟಾರ್ಗೆಟ್ ಮಾಡಲಾಗುತ್ತಿದೆ. ಟಾರ್ಗೆಟ್ ಮಾಡುವ ರಾಜಕಾರಣಕ್ಕೆ ರಾಜಕೀಯವಾಗಿಯೇ ಉತ್ತರ ಕೊಡುತ್ತೇವೆ ಎಂದು ಗುಡುಗಿದರು.

Share this article