ಪೌರ ಕಾರ್ಮಿಕರಿಗೂ ಗೌರವ ಸಿಗುವಂತೆ ಮಾಡಿದ್ದೇವೆ: ಆಂಜನೇಯ

KannadaprabhaNewsNetwork | Updated : Oct 01 2024, 01:46 AM IST

ಸಾರಾಂಶ

ನಾವು ಎದ್ದೇಳುವ ಮುನ್ನ ನಗರ, ಪಟ್ಟಣವನ್ನು ಸ್ವಚ್ಛ ಮಾಡಿ, ನಮಗೆ ಹೊರಗೆ ಬರಲು ಸ್ವಾಗತ ನೀಡುತ್ತಾರೆ.

ಹೊಸಪೇಟೆ: ಪೌರ ಕಾರ್ಮಿಕರನ್ನು ಜೀತದಾಳುವಿನಂತೆ ಕಾಣಲಾಗುತ್ತಿತ್ತು. ಅವರ ಸೇವಾ ಭದ್ರತೆಗೆ ಹೋರಾಟ ಮಾಡಿ ಅವರಿಗೂ ಸರ್ಕಾರದ ಸೌಲಭ್ಯ ದೊರಕಿಸಿ, ಗೌರವ ಸಿಗುವಂತೆ ಮಾಡಿದ್ದೇವೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ನಗರದ ಸಿದ್ದಿಪ್ರಿಯಾ ಕಲ್ಯಾಣಮಂಟಪದಲ್ಲಿ ನಗರಸಭೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪೌರ ಕಾರ್ಮಿಕರು ಸಮಾಜದ ಆಸ್ತಿ. ನಾವು ಎದ್ದೇಳುವ ಮುನ್ನ ನಗರ, ಪಟ್ಟಣವನ್ನು ಸ್ವಚ್ಛ ಮಾಡಿ, ನಮಗೆ ಹೊರಗೆ ಬರಲು ಸ್ವಾಗತ ನೀಡುತ್ತಾರೆ. ಈ ಹಿಂದೆ ಮಲ ಹೋರುವ ಪದ್ಧತಿಯನ್ನು ಅಂದಿನ ಮುಖ್ಯಮಂತ್ರಿ ದೇವರಾಜ್ ಅರಸು ಹಾಗೂ ಮಂತ್ರಿಯಾಗಿದ್ದ ಬಿ. ಬಸವಲಿಂಗಪ್ಪ ನಿರ್ಮೂಲನೆ ಮಾಡಿದರು. 70ರ ದಶಕದಲ್ಲಿ ಈ ಅನಿಷ್ಟ ಪದ್ಧತಿಗೆ ಮುಕ್ತಿ ಸಿಕ್ಕಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೌರಕಾರ್ಮಿಕರಿಗೆ ಹಲವು ಅಭಿವೃದ್ಧಿ ಯೋಜನೆಗಳನ್ನು ನೀಡಿ ಸುವರ್ಣ ಯುಗ ತಂದಿದ್ದಾರೆ. ಪೌರಕಾರ್ಮಿಕರಿಗೆ ಸರ್ಕಾರ ನೀಡುವ ಸಂಬಳ ಒಂದು ರೀತಿಯಾದ್ದಾಗಿದ್ದರೆ, ಗುತ್ತಿಗೆದಾರರು, ಅಧಿಕಾರಿಗಳು ಜೀತದಾಳಾಗಿ ಮಾಡಿಕೊಂಡು ಕಡಿಮೆ ವೇತನ ನೀಡುತ್ತಿದ್ದರು. ಆದರೆ ಈಗ ನೇರವಾಗಿ ಸ್ಥಳೀಯಸಂಸ್ಥೆಗಳು ವೇತನ ಪಾವತಿ ಮಾಡಬೇಕು ಎಂದು ಸರ್ಕಾರ ಆದೇಶ ಮಾಡಿದೆ ಎಂದರು.ರಾಜ್ಯ ಸರ್ಕಾರದಿಂದ ಹಲವು ಸೌಲಭ್ಯ ಪಡೆದು, ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುತ್ತೇವೆ ಎಂದು ಪೌರ ಕಾರ್ಮಿಕರು ಸಂಕಲ್ಪ ಮಾಡಬೇಕಿದೆ. ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾದಿಗ ಸಮಾಜಕ್ಕೆ ಭಾರೀ ಅನ್ಯಾಯ ಆಗುತ್ತಿದೆ. ಆದ್ದರಿಂದ ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಜಾರಿಗೊಳಿಸಲು ಆದೇಶ ನೀಡಿದೆ. ಮುಖ್ಯಮಂತ್ರಿ ಬೇರೆ ಯಾವುದೋ ಗೊಂದಲದಲ್ಲಿದ್ದಾರೆ. ಒಂದೆರಡು ತಿಂಗಳು ಕಾಯುತ್ತೇವೆ, ಜಾರಿ ಆಗದಿದ್ದರೆ, ಉಗ್ರಹೋರಾಟ ಮಾಡುತ್ತೆವೆ ಎಂದರು.

ಪೌರ ಕಾರ್ಮಿಕರು ದೇಶದ ಆಸ್ತಿಯಾಗಿದ್ದಾರೆ. ಆದರೆ, ಅವರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳು ಗೊತ್ತಿರುವುದಿಲ್ಲ. ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಅವರಿಗೆ ಲಭಿಸುವ ಸೌಲಭ್ಯಗಳ ಕುರಿತು ಮಾಹಿತಿ ಒದಗಿಸಬೇಕು. ಪೌರ ಕಾರ್ಮಿಕರು ಕೂಡ ತಮ್ಮ ಬದುಕು ಹಸನು ಮಾಡಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ ಮಾತನಾಡಿ, ಸಮಾಜ ಸುಖವಾಗಿರಬೇಕು ಎಂದರೆ ಕಾರ್ಮಿಕರ ಸೇವೆ ಅಗತ್ಯವಾಗಿದೆ. ಸೇವೆ ಮಾಡಲು ಅಧಿಕಾರ, ರಾಜಕೀಯ ಬೇಕಾಗಿಲ್ಲ. ನಗರಸಭೆಯಲ್ಲಿ ಪೌರಕಾರ್ಮಿಕರಾಗಿ ಸೇರಿಲು ವಿದ್ಯಾಭ್ಯಾಸ ಬೇಕಾಗಿಲ್ಲ. ನೇರವಾಗಿ ಸೇರಿಕೊಳ್ಳಬಹುದು. ಒತ್ತಡದ ಬದುಕಿನಲ್ಲಿ ಸುಖದ ನಿದ್ದೆ ಮಾಡುವವನೆ ಆರೋಗ್ಯವಂತ. ಶಿಕ್ಷಣ ಒಂದೇ ನಮ್ಮ ಸಮಸ್ಯೆಗೆ ಪರಿಹಾರ ನೀಡಲು ಸಾಧ್ಯ ಎಂದರು.

ನಗರದ ಅಂಬೇಡ್ಕರ್‌ ವೃತ್ತದಿಂದ ನಗರದ ಸಿದ್ದಿಪ್ರಿಯಾ ಕಲ್ಯಾಣಮಂಟಪದವರೆಗೆ ಭವ್ಯ ಮೆರವಣಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಹಿರಿಯ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.

ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ, ಹುಡಾ ಅಧ್ಯಕ್ಷ ಎಚ್‌ಎನ್‌ಎಫ್‌ ಇಮಾಮ್ ನಿಯಾಜಿ, ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ಉಪಾಧ್ಯಕ್ಷ ರಮೇಶ್ ಗುಪ್ತ, ಸದಸ್ಯರಾದ ಸಂತೋಷ್‌ ಕುಮಾರ, ಮುನ್ನಿಕಾಸಿಂ, ಜಿಲ್ಲಾ ನಗರಾಭಿವೃದ್ಧಿ ಯೋಜನಾಧಿಕಾರಿ ಮನೋಹರ್‌, ನಗರಸಭೆ ಪೌರಾಯುಕ್ತ ಚಂದ್ರಪ್ಪ, ಪೌರ ಕಾರ್ಮಿಕರ ಸಂಘದ ಜಿ. ನೀಲಕಂಠ, ನಗರಸಭೆ ಸದಸ್ಯರು, ನೌಕರರು, ಸಿಬ್ಬಂದಿ, ಪೌರ ಕಾರ್ಮಿಕರು ಮತ್ತಿತರರಿದ್ದರು.

ಹೊಸಪೇಟೆಯಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್. ಆಂಜನೇಯ ಮಾತನಾಡಿದರು.

Share this article