ವಿಘ್ನೇಶ್ ಎಂ. ಭೂತನಕಾಡು
ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವಕ್ಕೆ ಅ.3ರಂದು ನಗರದಲ್ಲಿ ನಾಲ್ಕು ಶಕ್ತಿ ದೇವತೆಗಳ ಕರಗಗಳು ನಗರ ಸಂಚಾರ ಆರಂಭಿಸುವ ಮೂಲಕ ದಸರೆ ಆರಂಭವಾಗಲಿದೆ.
ಆದರೆ ರಾಜ್ಯ ಸರ್ಕಾರದಿಂದ ಬಿಡುಗಡೆಯಾಗದ ಅನುದಾನ, ನಗರದಲ್ಲಿ ದುರಸ್ತಿಗೊಳ್ಳದ ರಸ್ತೆಗಳು ನಡುವೆ ಈ ಬಾರಿಯ ಮಡಿಕೇರಿ ದಸರಾ ಕತೆ ಏನಪ್ಪಾ ಎಂಬ ಬೇಸರದ ಭಾವನೆ ಜನಸಾಮಾನ್ಯರಲ್ಲಿ ಮೂಡಿಸಿದೆ.ಮಡಿಕೇರಿಯ ಪಂಪಿನ ಕೆರೆಯಿಂದ ಅ.3ರಂದು ಸಂಜೆ ನಗರದ ನಾಲ್ಕು ಶಕ್ತಿ ದೇವತೆಗಳಾದ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ, ಕೋಟೆ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕಂಚಿ ಕಾಮಾಕ್ಷಿ ದೇವರ ಕರಗಗಳು ನಗರ ಸಂಚಾರ ಆರಂಭಿಸುವ ಮೂಲಕ ಮಡಿಕೇರಿ ದಸರಾ ಆರಂಭಗೊಳ್ಳಲಿದೆ. ಈಗಾಗಲೇ ಪಂಪಿನಕೆರೆಯ ಬಳಿ ಸ್ವಚ್ಛತಾ ಕಾರ್ಯ ನಡೆದಿದ್ದು, ಕರಗ ಉತ್ಸವಕ್ಕೆ ತಯಾರಾಗಿದೆ. ಇದಕ್ಕೆ ದೇವಾಲಯದ ಸಮಿತಿಗಳು ಕೂಡ ಸಿದ್ಧತೆ ಮಾಡಿಕೊಂಡಿದ್ದಾರೆ.
ಗುಂಡಿಬಿದ್ದಿರುವ ರಸ್ತೆಗಳು: ದಸರಾ ಆರಂಭಕ್ಕೆ ಎರಡು ದಿನ ಮಾತ್ರ ಬಾಕಿ ಇದ್ದು, ಇನ್ನೂ ಕೂಡ ಮಡಿಕೇರಿ ನಗರದ ರಸ್ತೆಗಳ ದುರಸ್ತಿ ಕಾರ್ಯ ನಡೆದಿಲ್ಲ. ಪ್ರಮುಖವಾಗಿ ರಾಜಾಸೀಟಿಗೆ ತೆರಳುವ ರಸ್ತೆ ಕೂಡ ಹದಗೆಟ್ಟಿದೆ. ಈ ಬಗ್ಗೆ ತಿಂಗಳ ಹಿಂದೆಯೇ ಮಡಿಕೇರಿ ದಸರಾ ದಶಮಂಟಪ ಸಮಿತಿಯ ಪ್ರಮುಖರು ಶಾಸಕರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಆದರೆ ಮಳೆ ಕಾರಣದಿಂದಾಗಿ ರಸ್ತೆ ದುರಸ್ತಿ ಕಾಮಗಾರಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕಾರಣ ನೀಡಲಾಗುತ್ತಿದೆ. ಇನ್ನೂ ದಸರಾ ಆರಂಭ ಆದ ಬಳಿಕ ರಸ್ತೆ ದುರಸ್ತಿ ಮಾಡಲಾಗುತ್ತದೆ ಎಂದು ಪ್ರಮುಖರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಟಪ ಕಾರ್ಯ ಬಿರುಸು: ಮಡಿಕೇರಿ ದಸರಾ ಹಿನ್ನೆಲೆಯಲ್ಲಿ ದಸರಾದ ಕೊನೆಯ ದಿನ ಶೋಭಾಯಾತ್ರೆ ಜರುಗಲಿದೆ. ಇದು ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಯಾಗಿದೆ. ನಗರದ ಹತ್ತು ದೇವಾಲಯಗಳ ಹತ್ತು ಮಂಟಪಗಳ ಕೆಲಸ ಬಿರುಸಿನಿಂದ ಸಾಗಿದೆ. ಈಗಾಗಲೇ ದೇವಾಲಯ ಸಮಿತಿಯವರು ತಮ್ಮ ಮಂಟಪದಲ್ಲಿ ಪ್ರದರ್ಶನ ಮಾಡಲು ಕಥಾ ಸಾರಾಂಶವನ್ನು ಆಯ್ಕೆ ಮಾಡಿಕೊಂಡಿದ್ದು, ಮಂಟಪದ ಕಲಾಕೃತಿಗಳ ಕೆಲಸ ನಡೆಯುತ್ತಿದೆ. ಈ ಬಾರಿಯೂ ಕೂಡ ಮಂಟಪಗಳು ಪ್ರಶಸ್ತಿ ಪಡೆಯುವ ನಿಟ್ಟಿನಲ್ಲಿ ವಿಭಿನ್ನವಾಗಿ ಕೆಲಸ ಮಾಡುತ್ತಿವೆ.