ಹುಲಿಗೆಮ್ಮ ದೇವಸ್ಥಾನ ಸಮಿತಿಯ ಸಭೆ । ಸುದ್ದಿಗೋಷ್ಠಿಯಲ್ಲಿ ಸಚಿವರ ಹೇಳಿಕೆಕನ್ನಡಪ್ರಭ ವಾರ್ತೆ ಕೊಪ್ಪಳ
ರಾಜ್ಯ ಸೇರಿದಂತೆ ನಾನಾ ರಾಜ್ಯದ ಭಕ್ತರನ್ನು ಹೊಂದಿರುವ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಸ್ಥಾನದ ಸಮಗ್ರ ಅಭಿವೃದ್ಧಿಯನ್ನು ಈಗಾಗಲೇ ಸಿದ್ಧಪಡಿಸಲಾಗಿರುವ ಮಾಸ್ಟರ್ ಪ್ಲಾನ್ ಅಡಿಯಲ್ಲಿಯೇ ಮಾಡಲಾಗುವುದು ಎಂದು ಧಾರ್ಮಿಕ ಮತ್ತು ದತ್ತಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶ್ರೀ ಹುಲಿಗೆಮ್ಮ ದೇವಸ್ಥಾನ ಸಮಿತಿಯ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ಮಾಸ್ಟರ್ ಪ್ಲಾನ್ ಅಡಿಯಲ್ಲಿ ಅಭಿವೃದ್ಧಿ ಮಾಡಲಾಗುವುದು. ಆದರೆ, ಕೆಲವೊಂದು ಸಣ್ಣಪುಟ್ಟ ಮಾರ್ಪಾಡುಗಳನ್ನು ಸಮಿತಿಯವರು ಕೋರಿದ್ದು, ಅದನ್ನು ಪರಿಗಣಿಸಿ, ತಿಂಗಳೊಳಗಾಗಿ ಪುನರ್ ಸಿದ್ಧಪಡಿಸಿ, ಮತ್ತೊಂದು ಸಭೆ ಕರೆದು, ಅನುಮೋದನೆ ನೀಡಲಾಗುವುದು ಎಂದರು.ಅಭಿವೃದ್ಧಿಯ ದೃಷ್ಠಿಯಿಂದ ಶ್ರೀ ಹುಲಿಗೆಮ್ಮ ದೇವಸ್ಥಾನದ ಪ್ರಾಧಿಕಾರ ರಚನೆ ಮಾಡಲಾಗಿದೆ. ಆದರೆ, ಕೆಲವರು ಇದಕ್ಕೆ ತಡೆಯಾಜ್ಞೆ ತಂದಿದ್ದರು. ಆದರೆ, ಕೋರ್ಟ್ ಯಥಾಸ್ಥಿತಿ ಕಾಪಾಡುವಂತೆ ಈಗ ಹೇಳಿರುವುದರಿಂದ ಅಭಿವೃದ್ಧಿ ಕಾರ್ಯ ಮುಂದುವರೆಯಲಿದೆ ಎಂದರು. ಶ್ರೀ ಹುಲಿಗೆಮ್ಮ ದೇಗುಲಕ್ಕೆ ಪ್ರತಿ ವರ್ಷ ೮೦ ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುತ್ತಾರೆ. ಇದು ಉತ್ತರ ಕರ್ನಾಟಕದಲ್ಲಿಯೇ ಅತೀ ಹೆಚ್ಚು ಭಕ್ತರು ಬರುವ ದೇವಸ್ಥಾನವಾಗಿದೆ. ಹೀಗಾಗಿ, ಇಲ್ಲಿ ಮೂಲ ಸೌಕರ್ಯ ಒದಗಿಸಬೇಕಾಗಿದೆ. ಈಗಿರುವುದು ಯಾವುದಕ್ಕೂ ಸಾಲದೇ ಇರುವುದರಿಂದ ಭವಿಷ್ಯದ ದಿನಗಳನ್ನು ನೋಡಿಕೊಂಡು ಅಭಿವೃದ್ಧಿ ಮಾಡಲಾಗುತ್ತದೆ ಎಂದರು.
ಪ್ರಾಧಿಕಾರ ರಚನೆಯಾದ ಮೇಲೆ ಮೊದಲ ಬಾರಿಗೆ ಸಭೆ ನಡೆಸಿದ್ದೇವೆ. ಸದಸ್ಯರು ಅನೇಕ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸೂಚಿಸಿದ್ದಾರೆ. ಅವುಗಳೆಲ್ಲವನ್ನು ಗಂಭೀರವಾಗಿ ಪರಿಗಣಿಸಿ, ಅಳವಡಿಸಲಾಗಿದೆ. ದೇವಸ್ಥಾನಕ್ಕೆ ಏಕಕಾಲಕ್ಕೆ ಲಕ್ಷಾಂತರ ಭಕ್ತರು ಹಲವು ಬಾರಿ ಬರುವುದರಿಂದ ಈಗಿರುವ ರಸ್ತೆ ಸಾಲದಾಗಿದೆ. ಹೀಗಾಗಿ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಆಗುತ್ತದೆ. ಇದನ್ನು ನೀಗಿಸಲು೧೦೦ ಅಡಿ ರಸ್ತೆ ನಿರ್ಮಾಣ ಮಾಡಬೇಕಿದೆ. ಈಗ ದೇವಸ್ಥಾನದಲ್ಲಿ ೫೭ ಎಕರೆ ಭೂಮಿ ಇದೆ. ಇನ್ನೂ ೫೦ ಎಕರೆ ಭೂಮಿ ಗುರುತಿಸಲಾಗಿದೆ. ಒಂದು ವರ್ಷಕ್ಕೆ ಮಳಗಿಗಳಿಗೆ ಶೇ. ೨೦ರಷ್ಟು ಬಾಡಿಗೆ ಹೆಚ್ಚು ಮಾಡಿ ಮುಂದಿನ ವರ್ಷದಿಂದ ೫ ವರ್ಷಕ್ಕೆ ಬಾಡಿಗೆ ನಿಗಿದಿ ಮಾಡಲಾಗುವುದು ಎಂದರು.
ದೇವಸ್ಥಾನಗಳಿಗೆ ವಸ್ತ್ರ ಸಂಹಿತೆ ಜಾರಿ ಮಾಡುವ ಉದ್ದೇಶವಿಲ್ಲ. ಪ್ರಸ್ತುತ ₹೭೦ ಕೋಟಿ ಹಣವು ದೇವಸ್ಥಾನದ ಬಳಿ ಇದ್ದು, ಇದು ಸಾಲುವುದಿಲ್ಲ, ಹೀಗಾಗಿ, ಸರ್ಕಾರದ ನೆರವಿನೊಂದಿಗೆ ಮಾಸ್ಟರ್ ಪ್ಲಾನ್ ಅಡಿಯಲ್ಲಿಯೇ ಅಭಿವೃದ್ಧಿ ಮಾಡಲಾಗುವುದು ಎಂದರು.ದೇವಸ್ಥಾನದ ಹೆಸರಿಗೆ ಕೆಲವು ಆಸ್ತಿಗಳು ಇನ್ನು ನೊಂದಣಿಯಾಗಿಲ್ಲ. ಕೆಲವು ಪಾವತಿ ಬಾಕಿ ಇದ್ದ ಕಾರಣ ಅದನ್ನು ಪಾವತಿ ಮಾಡಿ ದೇವಸ್ಥಾನದ ಹೆಸರಿಗೆ ಖಾತಾ ಮಾಡಿಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದರು.
ಹುಲಿಗೆಮ್ಮ ದೇವಸ್ಥಾನಕ್ಕೆ ಭಕ್ತರಿಂದ ೨೦೦ ಕೆಜಿಗೂ ಹೆಚ್ಚಿನ ತೂಕದಷ್ಟು ಬೆಳ್ಳಿ ಬಂದಿದೆ. ಆ ಬೆಳ್ಳಿಯಲ್ಲಿ ಬೆಳ್ಳಿ ತೇರು ಮಾಡುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.ಟ್ರಾಫಿಕ್ ಸಮಸ್ಯೆಯನ್ನು ನೀಗಿಸಲು ರಿಂಗ್ ರಸ್ತೆ ನಿರ್ಮಾಣ ಮಾಡಲಾಗುವುದು. ಇದರ ಯೋಜನೆಯನ್ನು ರೂಪಿಸಿ, ಜಾರಿ ಮಾಡಲಾಗುವುದು ಎಂದರು.
ಸಂಸದ ರಾಜಶೇಖರ ಹಿಟ್ನಾಳ, ಎಂಎಲ್‌ಸಿ ಹೇಮಲತಾ ನಾಯಕ್, ಡಿಸಿ ನಲಿನ್ ಅತುಲ್, ದೇವಸ್ಥಾನದ ಇಒ ಪ್ರಕಾಶರಾವ್, ಮಾಜಿ ಸಚಿವ ಅಮರೇಗೌಡ ಬಯ್ಯಾಪೂರ ಉಪಸ್ಥಿತರಿದ್ದರು.