ಕನ್ನಡಪ್ರಭ ವಾರ್ತೆ ವಿಜಯಪುರ
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಜಯಪುರ ಜಿಲ್ಲಾಡಳಿತ, ಗುಡ್ಡಾಪುರ ದಾನಮ್ಮದೇವಿ ದೇವಸ್ಥಾನ ಮಹಾರಾಷ್ಟ್ರ ಕರ್ನಾಟಕ ರಾಜ್ಯಗಳ ಕನ್ನಡ ಸಂಘಟನೆಗಳ ಸಹಯೋಗದಲ್ಲಿ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಗುಡ್ಡಾಪುರದಲ್ಲಿ ಸೋಮವಾರ ನಡೆದ ಕರ್ನಾಟಕ ಸಂಭ್ರಮ-50, ಗಡಿನಾಡ ಚೇತನ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮತ್ತು ಕರ್ನಾಟಕ ಗಡಿ ಪ್ರಾಧಿಕಾರದ ಲಾಂಛನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಭಾಗದಲ್ಲಿ ಪರಸ್ಪರ ಅನ್ಯೂನ್ಯ, ಪ್ರೀತಿ, ವಿಶ್ವಾಸ ಬೆಳೆಸಿ, ಉಭಯ ರಾಜ್ಯದ ಜನರು ಸಾಮರಸ್ಯದಿಂದ ಬದುಕಲು ಗಡಿಭಾಗದಲ್ಲಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಗಡಿ ಭಾಗದ ಪ್ರತಿಯೊಬ್ಬ ಕನ್ನಡಿಗರ ಸಮಸ್ಯೆಗಳಿಗೆ ಸರ್ಕಾರ ನಿರಂತರವಾಗಿ ಸ್ಪಂದಿಸುತ್ತಿದೆ. ಜನರ ಸಮಸ್ಯೆಗಳನ್ನು ಆಲಿಸಿ, ಸಮಸ್ಯೆಗಳನ್ನು ಬಗೆಹರಿಸಲು ನಮ್ಮ ಸರ್ಕಾರ ಪ್ರಯತ್ನಿಸಲಿದೆ. ನಾನು ಇಲ್ಲಿಯ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ, ಮೂಲ ಸೌಕರ್ಯಗಳಾದ ರಸ್ತೆ, ನೀರು, ಶಿಕ್ಷಣ ಸೇರಿದಂತೆ ಅಗತ್ಯ ಸೌಲಭ್ಯ ದೊರಕಿಸಲು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವನಾದ ಮೇಲೆ ಗುಡ್ಡಾಪುರದಲ್ಲಿ ಇಂತಹ ಸಾಮರಸ್ಯದ ಪ್ರತೀಕವಾದ ಕನ್ನಡ ಸಮಾವೇಶ ಹಮ್ಮಿಕೊಂಡಿರುವುದು ಅತೀವ ಸಂತಸ ತಂದಿದೆ. ಗುಡ್ಡಾಪುರ ದಾನಮ್ಮ ದೇವಸ್ಥಾನಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕರ್ನಾಟಕ ಜನರು ಬರುವುದರಿಂದ ಈ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಅಗತ್ಯ ಅನುದಾನವನ್ನು ನಮ್ಮ ಸರ್ಕಾರದಿಂದ ಒದಗಿಸಲಾಗುವುದು. ಕನ್ನಡ ನಾಡು-ನುಡಿ, ಸಂಸ್ಕೃತಿ, ಸಾಹಿತ್ಯ, ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿದ ಗಡಿನಾಡ ಚೇತನರನ್ನು ಗುರುತಿಸಿ ಪ್ರಶಸ್ತಿ ನೀಡುವ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ-50 ವರ್ಷ ಹಿನ್ನೆಲೆಯಲ್ಲಿ ನ.1ರಂದು 69 ಜನರಿಗೆ ರಾಜ್ಯ ಪ್ರಶಸ್ತಿ ನೀಡಿ, ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಾಡಿನ ಸಾಂಸ್ಕೃತಿಕ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.ಜವಳಿ, ಕಬ್ಬು ಮತ್ತು ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸಾಕ್ಷ್ಯಚಿತ್ರಕ್ಕೆ ಚಾಲನೆ ನೀಡಿ ಮಾತನಾಡಿ, ಬಹಳ ದಿನಗಳ ನಂತರ ಗಡಿಭಾಗದಲ್ಲಿ ಸಾಮರಸ್ಯ ಮೂಡಿಸುವ ಐತಿಹಾಸಿಕ ಕಾರ್ಯಕ್ರಮ ಆಯೋಜಿಸಿದೆ. ಭಾಷೆ ಬೇರೆ- ಬೇರೆಯಾಗಿದ್ದರೂ ಮನಸು ಒಂದೇ ಆಗಿದೆ. ಪ್ರತಿಯೊಬ್ಬರು ನಾವು ಭಾರತೀಯರು ಎಂಬ ಸಂದೇಶ ಸಾರಬೇಕು. ಕನ್ನಡಿಗರು ಸೋಲಾಪುರ, ಸಾಂಗ್ಲಿ ಸೇರಿದಂತೆ ದೇಶದ ಯಾವ ಮೂಲೆಯಲ್ಲಾದರೂ ವಾಸಿಸಿದರೂ ಕನ್ನಡಿಗರ ಸಮಸ್ಯೆಗಳಿಗೆ ನಮ್ಮ ಸರ್ಕಾರ ಸದಾ ಸ್ಪಂದಿಸಲಿದೆ ಎಂದರು.
ಜತ್ತ ಶಾಸಕ ವಿಕ್ರಮಸಿಂಹ ಬಾಳಾಸಾಹೇಬ ಸಾವಂತ ಮಾತನಾಡಿದರು. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾವೇಶದಲ್ಲಿ ಕನ್ನಡ ಶಾಲೆ ವಿದ್ಯಾರ್ಥಿಗಳಿಗೆ ನಲಿ-ಕಲಿ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರ ಹೊರ ತಂದ ಗಡಿಯಲ್ಲಿ ಭಾಷಾ ಸಾಮರಸ್ಯ ಪುಸ್ತಕ ಬಿಡುಗಡೆ ಮಾಡಲಾಯಿತು. 2023-24ನೇ ಸಾಲಿನ ಹಾಗೂ 2024-25ನೇ ಸಾಲಿನ ಗಡಿ ಪ್ರಾಧಿಕಾರದಿಂದ ನೀಡುವ ಗಡಿನಾಡ ಚೇತನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕೌಶಲ್ಯಾಭಿವೃದ್ದಿ ನಿಗಮದ ಅಧ್ಯಕ್ಷೆ ಕಾಂತಾ ನಾಯ್ಕ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಪಂ ಸಿಇಒ ರಿಷಿ ಆನಂದ, ಕರ್ನಾಟಕ ಗಡಿ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ, ದಾನಮ್ಮದೇವಿ ಟ್ರಸ್ಟ್ ಅಧ್ಯಕ್ಷ ವಿಜುಗೌಡ ಪಾಟೀಲ, ಎಂ.ಎಸ್.ಮದಭಾವಿ, ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಸೇರಿದಂತೆ ವಿವಿಧ ಅಕಾಡೆಮಿಗಳ ಅಧ್ಯಕ್ಷರು, ಸದಸ್ಯರು, ಇತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣಿದೇವಿ ಮಾಲಗತ್ತಿ ಸ್ವಾಗತಿಸಿದರು.ಕೋಟ್
ಕರ್ನಾಟಕ- ಆಂಧ್ರ ಹಾಗೂ ಮಹಾರಾಷ್ಟ್ರ ರಾಜ್ಯಗಳು ಒಂದಾಗಿ ಸಮನ್ವಯತೆಯಿಂದ ನಿರ್ಧಾರ ಕೈಗೊಂಡು ಕೃಷ್ಣಾ ನೀರನ್ನು ಬಳಕೆ ಮಾಡಿಕೊಂಡಲ್ಲಿ ದೇಶಕ್ಕೆ ಮಾದರಿಯಾಗಲಿದೆ. ಪ್ರತಿ ವರ್ಷ 300 ರಿಂದ 500 ಟಿಎಂಸಿ ಸಮುದ್ರ ಪಾಲಾಗುವ ನೀರನ್ನು ಬಳಕೆ ಮಾಡಿಕೊಂಡರೆ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲಿದೆ. ಈ ನಿಟ್ಟಿನಲ್ಲಿ ಮೂರು ಸರ್ಕಾರಗಳು ಚಿಂತನೆ ನಡೆಸುವ ಅವಶ್ಯಕತೆ ಇದೆ.ಶಿವಾನಂದ ಪಾಟೀಲ, ಕೃಷಿ ಮಾರುಕಟ್ಟೆ ಸಚಿವ
ಬಾಕ್ಸ್ಮಹಾ ಕನ್ನಡಿಗರ ಬೇಡಿಕೆಗಳೇನು..?
ಈ ಸಮಾವೇಶದಲ್ಲಿ ಮಹಾರಾಷ್ಟ್ರ ಕನ್ನಡಿಗರಿಂದ ಬೇಡಿಕೆಗಳನ್ನು ಸಲ್ಲಿಸಿ, ಉದ್ಯೋಗದಲ್ಲಿ ಭದ್ರತೆ, ಅಂಗನವಾಡಿಗಳಲ್ಲಿ ಕನ್ನಡ ಆದ್ಯತೆ, ಸರ್ಕಾರಿ ಪ್ರೌಢಶಾಲೆ ಆರಂಭ, ಗಡಿ ಭಾಗದ-ಮಹಾರಾಷ್ಟ್ರದ ಕನ್ನಡ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ನೇಮಕ, ಕನ್ನಡದಲ್ಲಿ ಟಿಇಟಿ ಪರೀಕ್ಷೆ ಬರೆಯಲು ಅವಕಾಶ ನೀಡಲು ಮಹಾರಾಷ್ಟ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು, ಕನ್ನಡ ಶಾಲೆಗಳಿಗೆ ಕನ್ನಡ ಸಾಹಿತ್ಯ ಪುಸ್ತಕಗಳು, ಪರಿಕರಗಳನ್ನು ಒದಗಿಸುವುದು, ಮಹಾರಾಷ್ಟ್ರ ರಾಜ್ಯದ ವಿವಿಧ ನಗರಗಳಲ್ಲಿ ಕನ್ನಡ ಭವನ ನಿರ್ಮಾಣ, ನವೋದಯ, ಮೊರಾರ್ಜಿ ಶಾಲೆಗಳಲ್ಲಿ ಗಡಿ ಕನ್ನಡಿಗರ ಪ್ರವೇಶಕ್ಕೆ ಆದ್ಯತೆ, ಉಚಿತ ಸಾರಿಗೆ ಸೌಕರ್ಯ ಸೇರಿದಂತೆ ಗಡಿನಾಡಿನಲ್ಲಿ ಕನ್ನಡ, ಕಲೆ, ಸಾಹಿತ್ಯ, ಸಂಸ್ಕೃತಿ ಪ್ರೋತ್ಸಾಹಿಸಲು ಸಚಿವರಿಗೆ ಮನವಿ ಮಾಡಿಕೊಂಡರು. ಇದಕ್ಕೆ ಈ ಎಲ್ಲ ಬೇಡಿಕೆಗಳನ್ನು ಹಂತ-ಹಂತವಾಗಿ ಈಡೇರಿಸಲು ಭರವಸೆಯನ್ನು ಸಚಿವರು ನೀಡಿದರು.