ರಾಣಿಬೆನ್ನೂರು: ಮಹಿಳಾ ಮೀಸಲಾತಿ ಮಸೂದೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ 2023ರಲ್ಲಿಯೇ ಅಂಗೀಕಾರವಾಗಿದೆ. ಪ್ರಸ್ತುತ ಕ್ಷೇತ್ರ ಮರುವಿಂಗಡನೆಯನ್ನು ಅದಕ್ಕೆ ಸೇರಿಸಿ ಮಂಡಿಸಿದ್ದಾರೆ. ಮಹಿಳಾ ಮೀಸಲಾತಿಗೆ ನಮ್ಮ ವಿರೋಧವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ನಗರದ ದೊಡ್ಡ ಕೆರೆ ಪ್ರದೇಶದಲ್ಲಿ ಭಾನುವಾರ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ, ಸಂವಿಧಾನದ 73, 74ನೇ ತಿದ್ದುಪಡಿಗಳನ್ನು ರಾಜೀವ್ ಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದರು. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ಶೇ. 33 ಮೀಸಲಾತಿ ನೀಡಬೇಕೆಂದು ಬಿಜೆಪಿ ಎಂದಿಗೂ ಒತ್ತಾಯಿಸಿಲ್ಲ. ಈಗ ಮಾತ್ರ ಮಹಿಳಾ ಮೀಸಲಾತಿಗೆ ಒತ್ತಾಯಿಸಿ ರಾಜಕೀಯ ಮಾಡುತ್ತಿದ್ದಾರೆ. ಕ್ಷೇತ್ರ ಮರುವಿಂಗಡನೆಯಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ. ದಕ್ಷಿಣದಲ್ಲಿ ಶೇ. 50 ಮಾಡಿದರೆ ಕರ್ನಾಟಕದಲ್ಲಿ 42 ಸ್ಥಾನಗಳಾಗುತ್ತವೆ. ಉತ್ತರ ಭಾರತದಲ್ಲಿ ಸ್ಥಾನಗಳು ಹೆಚ್ಚಾಗುವುದರ ಬಗ್ಗೆ ನಮ್ಮ ವಿರೋಧವೇ ಹೊರತು ಮಹಿಳಾ ಮೀಸಲಾತಿಗೆ ವಿರೋಧವಿಲ್ಲ. ಅದರ ಪರವಾಗಿದ್ದೇವೆ. ಸಂವಿಧಾನ ತಿದ್ದುಪಡಿಗೆ ಮೂರನೇ ಎರಡರಷ್ಟು ಬಹುಮತ ಲೋಕಸಭೆಯಲ್ಲಿ ಇರಬೇಕು. ಶೇ. 50ರಷ್ಟು ರಾಜ್ಯಗಳು ಇದಕ್ಕೆ ಒಪ್ಪಿಗೆ ನೀಡಬೇಕು. ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ಒಕ್ಕೂಟದಿಂದ ಕ್ಷೇತ್ರ ಮರು ವಿಂಗಡಣೆಗೆ ವಿರೋಧ ಮಾಡಿದ್ದೇವೆಯೇ ಹೊರತು ಮಹಿಳಾ ಮೀಸಲಾತಿಗೆ ನಮ್ಮ ವಿರೋಧವಿಲ್ಲ. 450 ಮತಗಳನ್ನು ಪಡೆದು ಅಂಗೀಕಾರವಾಗಿರುವ ಮಸೂದೆಯನ್ನು ಮೋದಿಯವರು ಏಕೆ ಜಾರಿ ಮಾಡಲಿಲ್ಲ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ, ಕ್ಷೇತ್ರ ಮರುವಿಂಗಡನೆಯನ್ನು ಬೇರ್ಪಡಿಸಿ ಮಸೂದೆ ತಂದಿದ್ದರೆ ಯಾರೂ ವಿರೋಧಿಸುತ್ತಿರಲಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮಿಳುನಾಡು, ಪಶ್ಚಿಮ ಬಂಗಾಳದ ಚುನಾವಣೆ ಇರುವುದರಿಂದ ಮಹಿಳಾ ಮೀಸಲಾತಿ ಮಸೂದೆ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದರು. ಶಾಸಕ ಪ್ರಕಾಶ ಕೋಳಿವಾಡ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ 2025-26ನೇ ಸಾಲಿನಲ್ಲಿ ಸ್ಥಳೀಯ ವಿಧಾನಸಭಾ ಕ್ಷೇತ್ರವ್ಯಾಪ್ತಿಯು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ಡಿಜಿಟಲ್ ಲೈಬ್ರರಿ ಒಳಗೊಂಡ ಟ್ಯಾಬ್‌ಗಳನ್ನು ಮುಖ್ಯಮಂತ್ರಿಗಳು ವಿತರಿಸಿದರು.ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ, ಶಾಸಕರಾದ ಬಸವರಾಜ ಶಿವಣ್ಣನವರ, ಯು.ಬಿ. ಬಣಕಾರ, ಹಾವೇಮುಲ ಅಧ್ಯಕ್ಷ ಮಂಜನಗೌಡ ಪಾಟೀಲ, ಜಿಲ್ಲಾಧಿಕಾರಿ ಡಾ. ವಿಜಯಪ್ರಕಾಶ ದಾನಮ್ಮನವರ, ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ, ಜಿಪಂ ಸಿಇಒ ರುಚಿ ಬಿಂದಲ್ ಮತ್ತಿತರರಿದ್ದರು.