ಕನ್ನಡಪ್ರಭ ವಾರ್ತೆ ಕಾರವಾರ
ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಶಾಲೆಗೆ ಅಗತ್ಯವಿರುವ ಶೌಚಾಲಯ, ಆಟದ ಮೈದಾನ, ಅಂಗನವಾಡಿ ಕಟ್ಟಡ, ಮಳೆ ನೀರಿನ ಕೊಯ್ಲು, ಕಾಂಪೌಂಡ್, ಹಾಗೇ ಅಡುಗೆ ಕೋಣೆ, ಭೋಜನಾಲಯದಂತಹ ಅನೇಕ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ಇದರಿಂದ ಗ್ರಾಮೀಣ ಶಾಲೆಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳು ಒಂದೊಂದಾಗಿ ಪೂರೈಸಲ್ಪಡುತ್ತಿವೆ.
ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಗ್ರಾಪಂನ ಮುಠ್ಠಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಶಾಲೆಗೆ ಸುಭದ್ರ ಕಾಂಪೌಂಡ್ ನಿರ್ಮಿಸಲಾಗಿದೆ. ಇದಕ್ಕೆ ಪೂರಕವಾಗಿ ಸ್ಥಳೀಯರ ಸಹಕಾರದೊಂದಿಗೆ ಈ ಕಾಂಪೌಂಡ್ ಹಸೆಮಣೆ ಚಿತ್ತಾರಗಳಿಂದ ಕಂಗೊಳಿಸುತ್ತಿದ್ದು, ದಾರಿಹೋಕರ ಕಣ್ಮನ ಸೆಳೆಯುತ್ತಿದೆ. ಅಂದಾಜು ಮೊತ್ತ 3 ಲಕ್ಷದ 52 ಸಾವಿರ ರು. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾದ ಈ ಕಾಮಗಾರಿಯು ಶಾಲೆಗೆ ಸುಭದ್ರತೆ ಕಲ್ಪಿಸಿದೆ.ಇನ್ನೂ ಈ ಶಾಲೆಯಲ್ಲಿ ದಾಸೋಹ ಕೊಠಡಿಯೂ ಶಿಥಿಲಗೊಂಡು ನಾಶದಂಚಿನಲ್ಲಿತ್ತು. ಇದನ್ನರಿತ ಗ್ರಾಪಂ ಸುಮಾರು ₹7 ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾದ ಅಡುಗೆ ಕೋಣೆ ನಿರ್ಮಿಸಲಾಗಿದ್ದು ಶಾಲೆಯ ದಾಸೋಹ ತಯಾರಿಕೆಗೆ ಅನುಕೂಲವಾಗಿದೆ.
ನಮ್ಮ ಗ್ರಾಪಂನಲ್ಲಿ ಶಾಲೆಗಳಿಗೆ ಅನುಕೂಲವಾದ ಕಾಮಗಾರಿಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದೇವೆ. ಜೊತೆಗೆ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಯ ಆಶಯದೊಂದಿಗೆ ಸ್ಥಳೀಯರ ಸಹಕಾರದೊಂದಿಗೆ ನರೇಗಾ ಯೋಜನೆಯು ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ರಾಜೇಶ್ ನಾಯ್ಕ ತಿಳಿಸಿದ್ದಾರೆ.