ಪಶ್ಚಿಮ ಪದವೀಧರ ಮತದಾರರ ಕ್ಷೇತ್ರದಲ್ಲಿ 88 ಸಾವಿರ ಮತದಾರರು ಮಾತ್ರ ನೊಂದಣಿ ಮಾಡಿಸಿಕೊಂಡಿದ್ದಾರೆ. ಈ ಕ್ಷೇತ್ರದಲ್ಲಿ 3-4 ಲಕ್ಷಕ್ಕೂ ಅಧಿಕ ಪದವೀಧರರಿದ್ದಾರೆ.
ಕನ್ನಡಪ್ರಭ ವಾರ್ತೆ ಯಲ್ಲಾಪುರ
ಪಶ್ಚಿಮ ಪದವೀಧರ ಮತದಾರರ ಕ್ಷೇತ್ರದಲ್ಲಿ 88 ಸಾವಿರ ಮತದಾರರು ಮಾತ್ರ ನೊಂದಣಿ ಮಾಡಿಸಿಕೊಂಡಿದ್ದಾರೆ. ಈ ಕ್ಷೇತ್ರದಲ್ಲಿ 3-4 ಲಕ್ಷಕ್ಕೂ ಅಧಿಕ ಪದವೀಧರರಿದ್ದಾರೆ. ಅಂತವರನ್ನು ನಮ್ಮ ಕಾರ್ಯಕರ್ತರು ಮನೆ ಮನೆಗೆ ತೆರಳಿ ನೋಂದಾಯಿಸುವ ಮೂಲಕ ಪಕ್ಷಕ್ಕೆ ಶಕ್ತಿ ತುಂಬಬೇಕಾಗಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಹೇಳಿದರು.ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.ಯಲ್ಲಾಪುರದಲ್ಲಿ ಕೇವಲ 1028 ಮತದಾರರು ಮಾತ್ರ ನೋಂದಣಿ ಮಾಡಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ 15171 ನೋಂದಣಿ ಆಗಿದೆ. ಜಿಲ್ಲೆಗೆ ಸುಶಿಕ್ಷಿತರ ಜಿಲ್ಲೆ ಎಂದು ಹೆಸರಿದೆ. ಜಿಲ್ಲೆ ಅತಿ ಹೆಚ್ಚು ವಿಧಾನಸಭಾ ಸದಸ್ಯರನ್ನು ಹೊಂದಿದೆ. ನಮಗೆ ಮತದಾರರ ಬಳಿ ಮತಕೇಳುವ ನೈತಿಕತೆ ಇದೆ. ನಮ್ಮ ಸರ್ಕಾರ ಪದವೀಧರರಿಗೆ ₹3000 ನೀಡುತ್ತಿದೆ. ಅದರಲ್ಲೂ ವಿಶೇಷವಾಗಿ ಉಪ ಮುಖ್ಯಮಂತ್ರಿಗಳು, ಕಂದಾಯ ಸಚಿವರು ಆಸಕ್ತಿ ವಹಿಸಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳಿಗೆ ನೋಂದಣಿ ಮಾಡಲು ನಿರ್ದೇಶಿಸಿದ್ದಾರೆ. ಆಶ್ಚರ್ಯದ ಸಂಗತಿ ಎಂದರೆ ಯಲ್ಲಾಪುರದಲ್ಲಿ 7 ವಕೀಲರು, 2 ವೈದ್ಯರು ಮಾತ್ರ ನೋಂದಣಿ ಮಾಡಿಸಿಕೊಂಡಿದ್ದಾರೆ. 1984ರಿಂದ ಸತತವಾಗಿ 6 ಬಾರಿ ಎಚ್.ಕೆ. ಪಾಟೀಲರು ಆರಿಸಿ ಬಂದಿದ್ದರು. ನಾನು 2008ರಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದೆ. ನಂತರದ ಎರಡು ಅವಧಿಗೆ ಸಂಕನೂರು ಆಯ್ಕೆಯಾದರು. 2023ರಲ್ಲಿ ಪದವೀಧರರಾಗಿದ್ದರೂ 8000 ಮತ ಕುಲಗೆಟ್ಟಿದೆ. ಹಾಗಾಗಿ ಕಾರ್ಯಕರ್ತರು ಪ್ರತಿ ಪಂಚಾಯಿತಿ ಹಂತದಲ್ಲಿಯೂ ನೋಂದಣಿ ಮಾಡಬೇಕು. ಪದವಿ ಕಾಲೇಜನ್ನು ಸಂಪಕಿ೯ಸಿ ಪದವೀಧರರ ಯಾದಿ ಪಡೆದು ಮತದಾರರ ನೋಂದಣಿ ಮಾಡಬೇಕು ಎಂದು ತಿಳಿಸಿದರು.ಮಾಜಿ ಶಾಸಕ ವಿ.ಎಸ್. ಪಾಟೀಲ ಮಾತನಾಡಿ, ಈ ಹಿಂದೆ ಬಿಜೆಪಿಯ ವ್ಯಕ್ತಿ ಆರಿಸಿ ಬಂದಿದ್ದರು. ಈ ಸಲ ನಮ್ಮ ಪಕ್ಷದ ಅಭ್ಯರ್ಥಿ ಆರಿಸಿ ಬರುವಂತೆ ನಾವು ಶ್ರಮಿಸೋಣ. ಅರ್ಹರನ್ನು ಮತದಾರರ ಪಟ್ಟಿಗೆ ಸೇರಿಸೋಣ ಎಂದರು. ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಉಲ್ಲಾಸ ಶಾನಭಾಗ ಮಾತನಾಡಿದರು.ಜಿಲ್ಲಾ ಕಾರ್ಯದರ್ಶಿ ಎನ್.ಕೆ. ಭಟ್ಟ ಮೆಣಸುಪಾಲ, ಪ್ರಮುಖರಾದ ನರಸಿಂಹ ನಾಯ್ಕ, ನರ್ಮದಾ ನಾಯ್ಕ, ಲಾರೆನ್ಸ್ ಸಿದ್ದಿ ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್. ಭಟ್ಟ ಸ್ವಾಗತಿಸಿದರು. ಸುಬ್ಬಣ್ಣ ಕುಂಟೆಗಳಿ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.