ಬಿಸಿಲ ಧಗೆಗೆ ಕಿಮ್ಸ್ ಆಸ್ಪತ್ರೆಯಲ್ಲಿಯೇ ಬೇಯುತ್ತಿರುವ ಕಂದಮ್ಮ, ರೋಗಿಗಳು

KannadaprabhaNewsNetwork |  
Published : Apr 20, 2026, 02:15 AM IST
19ಕೆಪಿಎಲ್21,21ಎ ಕೊಪ್ಪಳ ಕೀಮ್ಸ್ ಆಸ್ಪತ್ರೆಯಲ್ಲಿ ಪ್ಯಾನ್ ಸಹ ಇಲ್ಲದಿರುವುದರಿಂದ ರೋಗಿಗಳ ತಾವೇ ತಂದು ಪ್ಯಾನ್ ಇಟ್ಟುಕೊಂಡಿರುವುದು.19ಕೆಪಿಎಲ್22,22ಎ  ಕೊಪ್ಪಳ ಕೀಮ್ಸ್ ಆಸ್ಪತ್ರೆಯಲ್ಲಿ ಕುಡಿಯಲು ನೀರು ಸಹ ಇಲ್ಲ | Kannada Prabha

ಸಾರಾಂಶ

ಕೊಪ್ಪಳ ಕಿಮ್ಸ್ ಆಸ್ಪತ್ರೆಯಲ್ಲಿ ರೋಗಗಳಿಂದ ಗುಣಮುಖರಾಗಲು ದಾಖಲಾಗಿರುವ ಕಂದಮ್ಮ ಮತ್ತು ರೋಗಿಗಳು ಅಕ್ಷರಶಃ ಬೇಯುತ್ತಿದ್ದಾರೆ.

ಸೋಮರಡ್ಡಿ ಅಳವಂಡಿ ಕೊಪ್ಪಳ

ಐಸಿಯುನಲ್ಲಿರುವ 6 ಕಂದಮ್ಮಗಳಿಗೆ ಎಸಿಯೂ ಇಲ್ಲ, ಪ್ಯಾನ್ ಸಹ ಇಲ್ಲ. ಅವರ ಚಟಪಟಿಕೆ ನೋಡಲಾರದೇ ಪಾಲಕರು ಮನೆಯಿಂದ ಪ್ಯಾನ್ ತಂದಿಟ್ಟಿದ್ದಾರೆ.

ಇನ್ನು ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಂದಮ್ಮಗಳಿಗೂ ಪ್ಯಾನ್ ಇಲ್ಲ. ಅಷ್ಟೇ ಯಾಕೆ ವಾರ್ಡ್‌ನಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವ ರೋಗಿಗಳ ಪಾಡು ಹೇಳತೀರದು.

ಹೀಗಾಗಿ, ಕೊಪ್ಪಳ ಕಿಮ್ಸ್ ಆಸ್ಪತ್ರೆಯಲ್ಲಿ ರೋಗಗಳಿಂದ ಗುಣಮುಖರಾಗಲು ದಾಖಲಾಗಿರುವ ಕಂದಮ್ಮ ಮತ್ತು ರೋಗಿಗಳು ಅಕ್ಷರಶಃ ಬೇಯುತ್ತಿದ್ದಾರೆ.

ಜಿಲ್ಲಾ ಕೇಂದ್ರ ಕೊಪ್ಪಳ ನಗರದಲ್ಲಿ ತಾಪಮಾನ 39-40 ಆಸುಪಾಸು ಇದೆ. ಹೀಗಾಗಿ ಸಾಮಾನ್ಯರೇ ಈ ಝಳಕ್ಕೆ ಚಡಪಡಿಸುತ್ತಿದ್ದಾರೆ. ಅಂಥದ್ದರಲ್ಲಿ ನಾನಾ ರೋಗದಿಂದ ಬಲಳುತ್ತಿರುವ ಕಂದಮ್ಮ ಚಿಕಿತ್ಸೆಗಾಗಿ ಕೊಪ್ಪಳ ಕಿಮ್ಸ್ (ಮೆಡಿಕಲ್ ಕಾಲೇಜು ಬೋಧಕ ಆಸ್ಪತ್ರೆ)ಯಲ್ಲಿ ದಾಖಲಾಗಿದ್ದರೆ ಐಸಿಯು ಕೊಠಡಿಯಲ್ಲಿನ ಎಸಿ ಕೆಟ್ಟು ಹೋಗಿದೆ. ಹೀಗಾಗಿ, ಕೇವಲ 1 ಪ್ಯಾನ್ ಹಾಕಿದ್ದಾರೆ. ಇದರಿಂದ ಐಸಿಯುನಲ್ಲಿರುವ ಮಕ್ಕಳಿಗೆ ಗಾಳಿಯೂ ಬಾರದೆ ರೋದಿಸುತ್ತಿವೆ. ಐಸಿಯುನಲ್ಲಿರುವ ಮಕ್ಕಳಿಗೆ ವಿಶೇಷ ನಿಗಾ ಬೇಕು. ಆದರೆ, ಕನಿಷ್ಠ ತಂಪಾದ ವಾತಾವರಣವೂ ಇಲ್ಲದೆ ಹೇಗೆ ತಾನೇ ಆ ಮಕ್ಕಳು ಚಿಕಿತ್ಸೆಯಿಂದ ಗುಣಮುಖರಾಗಲು ಸಾಧ್ಯ ಎನ್ನುವುದು ಪಾಲಕರ ಅಂಬೋಣ.

ಇದರಿಂದ ವಿಧಿಯಿಲ್ಲದೆ ಅನೇಕ ಪಾಲಕರು ತಾವೇ ಮನೆಯಿಂದ ಪ್ಯಾನ್ ತಂದು ಹಾಕಿಕೊಂಡು ಮಕ್ಕಳನ್ನು ಸಂರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ. ಇದು ಕೊಪ್ಪಳ ಕಿಮ್ಸ್ ಆಸ್ಪತ್ರೆಯ ವಾಸ್ತವ ಚಿತ್ರಣ ಮತ್ತು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ ಎನಿಸುತ್ತದೆ.

ಅಷ್ಟೇ ಅಲ್ಲ, ಅಲ್ಲಿ ಕುಡಿವ ನೀರಿನ ಸಮಸ್ಯೆಯೂ ಇದೆ. ಹೀಗಾಗಿ, ಅನೇಕರು ಮನೆಯಿಂದ ಇಲ್ಲವೇ ಹೊರಗೆ ಹೋಟೆಲ್ ನಿಂದ ನೀರು ತಂದು ಕುಡಿಯುತ್ತಿದ್ದಾರೆ. ನೀರು ಸಹ ತಂದು ಕುಡಿಯಬೇಕೆಂದರೆ ಹೇಗೆ ಸಾರ್ ಎನ್ನುವುದು ಅನೇಕರ ಪ್ರಶ್ನೆಯಾಗಿದೆ.

ಮೊದಲೇ ವಿಪರೀತ ಬಿಸಿಲು, ಇದರಿಂದ ಪ್ಯಾನ್ ಇಲ್ಲದೆ ಇರಲು ಆಗುವುದಿಲ್ಲ. ಅಂಥದ್ದರಲ್ಲಿ ಆಸ್ಪತ್ರೆಯಲ್ಲಿಯೇ ಸರಿಯಾದ ವ್ಯವಸ್ಥೆ ಇರದಿದ್ದರೆ ಹೇಗೆ ಎನ್ನುವುದಕ್ಕೆ ಅಧಿಕಾರಿಗಳೇ ಉತ್ತರಿಸಬೇಕಾಗಿದೆ.

ಕೊಪ್ಪಳ ಕಿಮ್ಸ್ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ರೋಗಿಗಳು ಚಿಕಿತ್ಸೆಗೆಂದು ಬಂದು ಗುಣಮುಖವಾಗುವ ಬದಲು ಮತ್ತಷ್ಟು ಸುಸ್ತಾಗುತ್ತಿದ್ದಾರೆ. ಅದರಲ್ಲೂ ಹಸುಗೂಸು ಪಡುವ ಯಾತನೆ ಆ ದೇವರಿಗೆ ಪ್ರೀತಿ.

ದುರಸ್ತಿ ಮಾಡಿಸಿಲ್ಲ: ಎಸಿ ಕೆಟ್ಟಿದ್ದರೂ ಅದನ್ನು ತುರ್ತಾಗಿ ದುರಸ್ತಿ ಮಾಡಿಸಬೇಕಾದವರು ಮಾಡಿಸಿಲ್ಲ. ಈ ಕುರಿತು ಕೇಳಿದರೂ ಯಾರೂ ಸ್ಪಂದಿಸುತ್ತಿಲ್ಲ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಸಿ ಸರ್ವಿಸ್ ಮಾಡಬೇಕಾಗಿದ್ದರಿಂದ ಸಮಸ್ಯೆಯಾಗಿದೆ. ಇದನ್ನು ಸರಿಪಡಿಸಲು ಸೂಚಿಸಲಾಗಿದೆ. ರೋಗಿಗಳಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ವಹಿಸಲಾಗಿದೆ ಎಂದು ಕೊಪ್ಪಳ ಕಿಮ್ಸ್‌ ನಿರ್ದೇಶಕ ವಿಜಯಕುಮಾರ ಇಟಗಿ ತಿಳಿಸಿದ್ದಾರೆ.

ಅಯ್ಯೋ ನಮ್ಮ ಕಂದಮ್ಮನನ್ನು ಚಿಕಿತ್ಸೆಗೆಂದು ದಾಖಲಿಸಿದೆ. ಆದರೆ, ಇಲ್ಲಿ ಬಿಸಿಲಿನ ಝಳಕ್ಕೆ ಫ್ಯಾನ್ ಸಹ ಇಲ್ಲದಿರುವುದರಿಂದ ಮನೆಯಿಂದ ತಂದು ಹಾಕಿದ್ದೇವೆ. ಮಕ್ಕಳು ಪಡುವ ಯಾತನೆ ನೋಡಿದರೆ ಕಣ್ಣೀರು ಬರುತ್ತದೆ ಎಂದು ರೋಗಿಯ ಸಂಬಂಧಿ ಹುಲಗಪ್ಪ ತಿಳಿಸಿದ್ದಾರೆ.

ನಮ್ಮ ದೊಡ್ಡಮ್ಮನ ಮಗನನ್ನು ಆಡ್ಮಿಶನ್ ಮಾಡಿದ್ದೇವೆ. ಮಗು ಮೊದಲೇ ಸಮಸ್ಯೆಯಿಂದ ಬಳಲುತ್ತಿದೆ. ಅಂಥದ್ದರಲ್ಲಿ ಫ್ಯಾನ್ ಸಹ ಇಲ್ಲದಿರುವ ವಾರ್ಡ್ ನಲ್ಲಿ ಸಮಸ್ಯೆಯಾಯಿತು. ಹೀಗಾಗಿ ಮನೆಯಿಂದ ಫ್ಯಾನ್‌ ತಂದು ಹಾಕಿದ್ದೇವೆ ಎಂದು ರೋಗಿ ಸಂಬಂಧಿ ಕಿರಣ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕ ಶ್ರೀನಿವಾಸ ಮಾನೆಗೆ ಸಚಿವ ಸ್ಥಾನ ನೀಡಲು ಆಗ್ರಹ
ಬೀದಿ ನಾಯಿಗಳ ಸಂತಾನ ಹರಣ ಕಾರ್ಯಕ್ರಮದಲ್ಲಿ ಪ್ರಗತಿ ಸಾಧಿಸಿ