ಪೊಲೀಸ್, ಸಾರಿಗೆ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಗಳ ಅನುಮತಿ ಇಲ್ಲದಿದ್ದರೂ, ಬಾದಾಮಿ ತಾಲೂಕಿನ ಪರವಾನಗಿಯನ್ನು ಅಸ್ತ್ರವಾಗಿ ಬಳಸಿಕೊಂಡು ಗದಗ ಜಿಲ್ಲೆಯ ಮೂಲಕ ಹುಬ್ಬಳ್ಳಿ- ಧಾರವಾಡ ಮಹಾಗನರಕ್ಕೆ, ಕಲಘಟಗಿಯವರೆಗೂ ಮರಳು ತಲುಪಿಸಲಾಗುತ್ತಿದೆ.
ಶಿವಕುಮಾರ ಕುಷ್ಟಗಿ
ಗದಗ: ಜಿಲ್ಲೆಯ ಮಲಪ್ರಭಾ ನದಿ ತೀರದ ಪಟ್ಟಾ ಲ್ಯಾಂಡ್ ಗಳಲ್ಲಿ ಮರಳು ಗಣಿಗಾರಿಕೆ ಮಾಡಿ, ಗದಗ ಜಿಲ್ಲೆಯ ಮೂಲಕ ಸಾಗಿಸಿ ಪಕ್ಕದ ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ಕಲಘಟಗಿ ಸೇರಿದಂತೆ ಅನ್ಯ ಜಿಲ್ಲೆಗಳಿಗೆ ಮಾರಾಟ ಮಾಡುವ ವ್ಯವಸ್ಥಿತ ಪ್ರಕ್ರಿಯೆ ಜಿಲ್ಲೆಯ ಎಲ್ಲ ಇಲಾಖೆಗಳ ಹಿರಿಯ ಅಧಿಕಾರಿಗಳ ಕೃಪಾಕಟಾಕ್ಷದಿಂದ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕುವವರೇ ಇಲ್ಲದಂತಾಗಿದೆ. ಸಾಮಾನ್ಯವಾಗಿ ಗಣಿಗಾರಿಕೆ ನಡೆಯುವ ಜಿಲ್ಲೆಯಲ್ಲೇ ಮರಳು ಮಾರಾಟವಾಗಬೇಕು ಎಂಬ ನಿಯಮವಿದೆ. ಗಡಿ ಭಾಗದ ಪ್ರದೇಶವಾಗಿದ್ದರೆ ಪಕ್ಕದ ಜಿಲ್ಲೆಗೆ ಸೀಮಿತ ಪ್ರಮಾಣದಲ್ಲಿ ಮಾರಾಟಕ್ಕೆ ಅವಕಾಶವಿರುತ್ತದೆ. ಆದರೆ, ಮೆಣಸಗಿ ಗ್ರಾಮದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಈ ದಂಧೆಗೆ ಯಾವುದೇ ಭೌಗೋಳಿಕ ಮಿತಿಗಳಿಲ್ಲದಂತಾಗಿದೆ.ಪೊಲೀಸ್, ಸಾರಿಗೆ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಗಳ ಅನುಮತಿ ಇಲ್ಲದಿದ್ದರೂ, ಬಾದಾಮಿ ತಾಲೂಕಿನ ಪರವಾನಗಿಯನ್ನು ಅಸ್ತ್ರವಾಗಿ ಬಳಸಿಕೊಂಡು ಗದಗ ಜಿಲ್ಲೆಯ ಮೂಲಕ ಹುಬ್ಬಳ್ಳಿ- ಧಾರವಾಡ ಮಹಾಗನರಕ್ಕೆ, ಕಲಘಟಗಿಯವರೆಗೂ ಮರಳು ತಲುಪಿಸಲಾಗುತ್ತಿದೆ.125 ಕಿಮೀ ಪ್ರಯಾಣಕ್ಕೆ 5 ತಾಸು: ಮೆಣಸಗಿ ಗ್ರಾಮದಿಂದ ಕಲಘಟಗಿ ಪಟ್ಟಣಕ್ಕೆ ಸುಮಾರು 125 ಕಿಮೀ ದೂರವಿದೆ. ಈ ಮಾರ್ಗದಲ್ಲಿ ಸಾಗಲು ಟಿಪ್ಪರ್‌ಗಳಿಗೆ ನೀಡಲಾಗುತ್ತಿರುವ ಪಾಸ್ ಗಳಲ್ಲಿನ ಸಮಯದ ವ್ಯತ್ಯಾಸವೇ ದೊಡ್ಡ ಹಗರಣದ ಸುಳಿವು ನೀಡುತ್ತಿದೆ. ಗಂಟೆಗೆ 40 ಕಿಮೀ ವೇಗದಲ್ಲಿ ಚಲಿಸಿದರೂ 3 ಗಂಟೆಯಲ್ಲಿ ತಲುಪಬಹುದಾದ ದೂರಕ್ಕೆ ಪಾಸ್‌ನಲ್ಲಿ 5 ಗಂಟೆ ಸಮಯ ನೀಡಲಾಗಿದೆ. ಈ ಹೆಚ್ಚುವರಿ 2 ಗಂಟೆಯ ಅವಧಿಯನ್ನು ಅದೇ ಪಾಸ್ ಬಳಸಿ ಒಂದಕ್ಕಿಂತ ಹೆಚ್ಚು ಬಾರಿ ಮರಳು ಸಾಗಿಸಲು ಅಥವಾ ದಾರಿಯುದ್ದಕ್ಕೂ ಅಕ್ರಮವಾಗಿ ಮರಳು ಇಳಿಸಲು ಬಳಸಿಕೊಳ್ಳಲಾಗುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದ್ದರೂ ಎಲ್ಲರೂ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ.ಅಕ್ರಮಕ್ಕೆ ಲೀಗಲ್ ಪಾಸ್ ಹೇಗೆ?: ಜಿಲ್ಲೆಯ ರೋಣ ಮತ್ತು ನರಗುಂದ ತಾಲೂಕು ವ್ಯಾಪ್ತಿಯಲ್ಲಿ ಹಾಗೂ ಬಾದಾಮಿ ತಾಲೂಕಿನಲ್ಲಿ ನಡೆಯುತ್ತಿರುವ ಮರಳು ಗಣಿಗಾರಿಕೆಯೇ ಅಕ್ರಮ ಎನ್ನುವ ಆರೋಪಗಳು ಆಯಾ ಗ್ರಾಮಗಳ ಸಾರ್ವಜನಿಕರಿಂದಲೇ ಕೇಳಿ ಬರುತ್ತಿವೆ. ಅಕ್ರಮಕ್ಕೆ ಅದೇಗೆ ಲೀಗಲ್ ಪಾಸ್ ಗಳನ್ನು ನೀಡುತ್ತಿದ್ದಾರೆ ಎನ್ನುವುದೇ ಚರ್ಚಿತ ವಿಷಯವಾಗಿದೆ. ಅಕ್ರಮವನ್ನೇ ಸಕ್ರಮ ಎಂದು ಮಾರಾಟ ಮಾಡುತ್ತಿರುವವರ ವಿರುದ್ಧ ತನಿಖೆ ನಡೆಸಬೇಕಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಸಂಶಯಕ್ಕೆ ಕಾರಣ?: ಜಿಲ್ಲೆಯ ಮೂಲಕ ಸಾಗಾಟ ಮಾಡುತ್ತಿರುವ ಅಕ್ರಮ ಮರಳು ಧಾರವಾಡ ಜಿಲ್ಲೆಯ ಕಲಘಟಗಿ ವರೆಗೆ ಸಾಗಾಟಕ್ಕೆ ಅನುಮತಿ ಕೊಟ್ಟಿರುವುದು, ಅಲ್ಲದೇ ಸಧ್ಯ ಸಾಗಾಟ ಮಾಡುತ್ತಿರುವ ಟಿಪ್ಪರ್ ಗಳಲ್ಲಿ 10 ಟನ್ ಮಾತ್ರ ಮರಳು ತುಂಬಿದೆ ಎಂದು ಪಾಸ್ ನಲ್ಲಿ ಉಲ್ಲೇಖಿಸಲಾಗಿದೆ. ಆದರೆ ವಾಸ್ತವದಲ್ಲಿ 15ರಿಂದ 20 ಟನ್ ಮರಳು ತುಂಬಿದ ಟಿಪ್ಪರಗಳು ದಿನನಿತ್ಯವೂ ಪೊಲೀಸ್ ಠಾಣೆಗಳ ಮುಂದೆಯೂ ಹಾಯ್ದು ಹೋಗುತ್ತಿದ್ದರೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಆರಟಿಒ ಇಲಾಖೆ ಅಧಿಕಾರಿಗಳು ಅದ್ಯಾರ ಭಯದಿಂದಾಗಿ ಸುಮ್ಮನೆ ಕುಳಿತಿದ್ದಾರೆ ಎನ್ನುವ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸಬೇಕಿದೆ. ಈ ಕುರಿತು ಪರಿಶೀಲನೆ ನಡೆಸಲು ನಮ್ಮ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅವರ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ನಾಗಭೂಷಣ ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.