ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ, ಅವರು ಸುಳ್ಳು ಹೇಳ್ತಾರೆ, ನೀವು ನಂಬ್ತೀರಿ: ಸಿಎಂ

KannadaprabhaNewsNetwork |  
Published : May 13, 2025, 01:32 AM IST
60 | Kannada Prabha

ಸಾರಾಂಶ

ಬಿಜೆಪಿಯವರು ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳು ಹೇಳ್ತಾರೆ. ಹಾಲಿನ ದರ 4 ರು. ಹೆಚ್ಚು ಮಾಡಿ ಇದರಲ್ಲಿ ಒಂದು ರುಪಾಯಿಯನ್ನೂ ನಾವು ಇಟ್ಟುಕೊಳ್ಳದೆ ಅಷ್ಟನ್ನೂ ರೈತರಿಗೆ, ಗೋ ಸಾಕಾಣಿಕೆದಾರರಿಗೆ ವರ್ಗಾಯಿಸಿದ್ದೇವೆ. ಆದರೆ, ಬಿಜೆಪಿ ಚಿನ್ನ, ಬೆಳ್ಳಿ, ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ, ಬೇಳೆ, ಗೊಬ್ಬರ, ಎಣ್ಣೆ ಕಾಳು ಸೇರಿ ಎಲ್ಲದರ ಬೆಲೆ ಹೆಚ್ಚಿಸಿದ್ದು ಕೇಂದ್ರದ ಬಿಜೆಪಿ ಸರ್ಕಾರ, ಮೋದಿ ಸರ್ಕಾರ.

ಕನ್ನಡಪ್ರಭ ವಾರ್ತೆ ಮೈಸೂರು

ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ. ಅವರು ಸುಳ್ಳು ಹೇಳ್ತಾರೆ, ನೀವು ನಂಬ್ತೀರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕರನ್ನು ಪ್ರಶ್ನಿಸಿದರು.

ಎಚ್.ಡಿ.ಕೋಟೆಯಲ್ಲಿ ಜಿಲ್ಲಾಡಳಿತವು ಸೋಮವಾರ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಮತ್ತು ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಬಳಿ ಅಭಿವೃದ್ಧಿಗೆ ಹಣ ಇಲ್ಲ ಎಂದು ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಇಂದು ಒಂದೇ ದಿನ 140 ಕೋಟಿ ಅಭಿವೃದ್ಧಿ ಕಾರ್ಯಗಳನ್ನು ಎಚ್.ಡಿ.ಕೋಟೆ ಜನಕ್ಕೆ ಅರ್ಪಿಸಿದ್ದೇವೆ ಎಂದು ತಿರುಗೇಟು ನೀಡಿದರು.

ಈ ಬಾರಿ 8000 ಕೋಟಿ ಶಾಸಕರ ಅನುದಾನ, ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಟ್ಟಿದ್ದೇವೆ. 55 ಸಾವಿರ ಕೋಟಿ ಗ್ಯಾರಂಟಿ ಯೋಜನೆಗಳಿಗೆ ತೆಗೆದಿರಿಸಿದ್ದೀವಿ. 80 ಸಾವಿರ ಕೋಟಿ ಬಂಡವಾಳ ವೆಚ್ಚಕ್ಕೆ ಮೀಸಲಿರಿಸಿಟ್ಟೇವೆ. ಈ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.

ಬಿಜೆಪಿಯವರು ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳು ಹೇಳ್ತಾರೆ. ಹಾಲಿನ ದರ 4 ರು. ಹೆಚ್ಚು ಮಾಡಿ ಇದರಲ್ಲಿ ಒಂದು ರುಪಾಯಿಯನ್ನೂ ನಾವು ಇಟ್ಟುಕೊಳ್ಳದೆ ಅಷ್ಟನ್ನೂ ರೈತರಿಗೆ, ಗೋ ಸಾಕಾಣಿಕೆದಾರರಿಗೆ ವರ್ಗಾಯಿಸಿದ್ದೇವೆ. ಆದರೆ, ಬಿಜೆಪಿ ಚಿನ್ನ, ಬೆಳ್ಳಿ, ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ, ಬೇಳೆ, ಗೊಬ್ಬರ, ಎಣ್ಣೆ ಕಾಳು ಸೇರಿ ಎಲ್ಲದರ ಬೆಲೆ ಹೆಚ್ಚಿಸಿದ್ದು ಕೇಂದ್ರದ ಬಿಜೆಪಿ ಸರ್ಕಾರ, ಮೋದಿ ಸರ್ಕಾರ. ಆದ್ದರಿಂದ ಜನಾಕ್ರೋಶ ಇರುವುದು ಬಿಜೆಪಿ ಸರ್ಕಾರದ ಮೋದಿಯ ವಿರುದ್ಧವೇ ಹೊರತು, ನಮ್ಮ ಕಾಂಗ್ರೆಸ್ ಸರ್ಕಾರದ ಮೇಲಲ್ಲ ಎಂದು ಅವರು ಬಿಜೆಪಿಯ ಜನಕ್ರೋಶ ಯಾತ್ರೆ ಬಗ್ಗೆ ವ್ಯಂಗ್ಯವಾಡಿದರು.

ನಮ್ಮ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ ಮತ್ತು ಸಂವಿಧಾನದ ಆಶಯಗಳ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಜಾತಿ- ಧರ್ಮದ ಸಹಿಷ್ಣುತೆ ಇರುವ, ಸರ್ವರನ್ನೂ ಒಳಗೊಳ್ಳುವ ಪರಂಪರೆ ನಮ್ಮದು. ಮನುಷ್ಯರನ್ನು ಜಾತಿ- ಧರ್ಮದ ನೆಪದಲ್ಲಿ ವಿರೋಧಿಸುವವರು, ಪ್ರಾಣಿಗಳನ್ನು ಪ್ರೀತಿಸುತ್ತಾರೆ. ಪ್ರಾಣಿಗಳನ್ನು ಪ್ರೀತಿಸುವುದು ತಪ್ಪಲ್ಲ, ಆದರೆ, ಮನುಷ್ಯರನ್ನು ವಿರೋಧಿಸುವುದು ತಪ್ಪು ಎಂದರು.

ಆರ್ಥಿಕವಾಗಿ ಸರ್ವರಿಗೂ ಶಕ್ತಿ ಬಂದರೆ ಜಾತಿ ಹೋಗುತ್ತದೆ. ಬುದ್ದ, ಬಸವ ಅವರು ಜಾತಿ ಹೋಗಬೇಕೆಂದು ಹೋರಾಟ ಮಾಡಿದರೂ ಇನ್ನೂ ಜಾತಿ ಹೋಗಿಲ್ಲ. ಬಸವಣ್ಣರನ್ನು ಪ್ರೀತಿಸ್ತೀವಿ, ಪೂಜಿಸ್ತೀವಿ. ಆದರೆ ಬಸವಣ್ಣರನ್ನು ಪಾಲಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಬಿಜೆಪಿ, ಜೆಡಿಎಸ್ ನವರು ಇದು ಪಾಪರ್ ಸರ್ಕಾರ ಅಂತಾರೆ. ಗ್ಯಾರಂಟಿ ಕೊಟ್ಟು ದಿವಾಳಿ ಮಾಡಿದ್ದಾರೆ ಅಂತಾರೆ. ಆದರೆ, ಎಲ್ಲಾ ಭಾಗ್ಯಗಳ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೇವೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆದಿದೆ.

- ಕೆ.ವೆಂಕಟೇಶ್, ಪಶುಸಂಗೋಪನಾ ಸಚಿವ

ನಾನು ಅಕ್ಷರ ಕಲಿಯದಿದ್ದರೇ ಚಡ್ಡಿ ಹಾಕೊಂಡು ಕುರಿ ಕಾಯ್ತಿದ್ದೆ, ಜಾಸ್ತಿ ಅಂದರೆ ಹೊಲ ಉಳುತ್ತಿದ್ದೆ ಅಷ್ಟೇ. ನನ್ನ ಜೊತೆ ವೀರ‌ ಮಕ್ಕಳ ಕುಣಿತ ಕುಣಯುತ್ತಿದ್ದ ಇಬ್ಬರು ಮಾತ್ರ ಓದಿದರು. ಉಳಿದವರು ಓದಲಿಲ್ಲ. ನಾನು ಓದಿದ ಕಾರಣ ಇಲ್ಲಿಯ ತನಕ ಬಂದೆ. ನನ್ನ ಅಣ್ಣ, ತಮ್ಮ, ಅಕ್ಕಂದಿರು ಯಾರು ಕೂಡ ಓದಲಿಲ್ಲ. ಅವರೆಲ್ಲಾ ಅಲ್ಲೇ ಉಳಿದು ಬಿಟ್ಟರು. ಯಾವುದಕ್ಕೂ ಹಣೆ ಬರಹ, ಪೂರ್ವಜನ್ಮದ ಪಾಪಪುಣ್ಯ ಎಂದು ನಂಬಬೇಡಿ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ