ಬಿಜೆಪಿಗರಿಗೆ ಜನರ ಮತ ಕೇಳುವ ಹಕ್ಕಿಲ್ಲ : ಡಿಕೆಶಿ

KannadaprabhaNewsNetwork |  
Published : Jul 27, 2026, 02:15 AM IST
DK Shivakumar

ಸಾರಾಂಶ

ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರು. ಪ್ರಕಟಿಸಿದ್ದರು. ಆದರೆ, ಆ ಹಣ ಇದುವರೆಗೂ ಬರಲೇ ಇಲ್ಲ. ನುಡಿದಂತೆ ನಡೆಯದ ಬಿಜೆಪಿಯವರಿಗೆ ಜನರ ಮುಂದೆ ನಿಂತು ಮತ ಕೇಳುವ ನೈತಿಕ ಹಕ್ಕಿಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

  ಹಿರಿಯೂರು:  ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರು. ಪ್ರಕಟಿಸಿದ್ದರು. ಆದರೆ, ಆ ಹಣ ಇದುವರೆಗೂ ಬರಲೇ ಇಲ್ಲ. ನುಡಿದಂತೆ ನಡೆಯದ ಬಿಜೆಪಿಯವರಿಗೆ ಜನರ ಮುಂದೆ ನಿಂತು ಮತ ಕೇಳುವ ನೈತಿಕ ಹಕ್ಕಿಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ನಗರದ ನೆಹರೂ ಮೈದಾನಲ್ಲಿ ಭಾನುವಾರ ಆಯೋಜಿಸಿದ್ದ ಮಾಜಿ ಸಚಿವ ದಿವಂಗತ ಡಿ.ಸುಧಾಕರ್ ನುಡಿನಮನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸುಧಾಕರ್‌ಗೆ ಕ್ಷೇತ್ರದ ರೈತರ ಬದುಕು ಹಸಿರಾಗಬೇಕು ಎಂಬ ದೊಡ್ಡ ಕನಸಿತ್ತು. ತಾಲೂಕಿನ 16 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುಮತಿ ನೀಡಬೇಕೆಂದು ಅವರು ನನ್ನ ಬಳಿ ಸದಾ ಮನವಿ ಮಾಡುತ್ತಿದ್ದರು. ಅವರ ಆಶಯದಂತೆ ಹಾಗೂ ನೀಡಿದ ಮಾತಿನಂತೆ ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ 244 ಕೋಟಿ ರು.ವೆಚ್ಚದ ಈ ನೀರಾವರಿ ಯೋಜನೆಗೆ ಅನುಮೋದನೆ ನೀಡಲಾಗಿದೆ. ಜೆಡಿಎಸ್ ಮತ್ತು ಬಿಜೆಪಿಯವರು ತಮ್ಮ ಆಡಳಿತಾವಧಿಯಲ್ಲಿ ಇಂತಹ ಕಲ್ಯಾಣ ಕಾರ್ಯಕ್ರಮಗಳನ್ನು ನೀಡಲೇ ಇಲ್ಲ. ಆದರೆ, ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಜಿಲ್ಲೆಯ ನೀರಾವರಿ ಯೋಜನೆಗಳು ಹಾಗೂ ಜನರ ಬದುಕಿನ ಸುಧಾರಣೆಗೆ ನಮ್ಮ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಹೇಳಿದರು.

ಡಿ.ಸುಧಾಕರ್ ಅವರ ಗುಣಗಾನ ಮಾಡಿದ ಸಿಎಂ

ಇದೇ ವೇಳೆ, ಡಿ.ಸುಧಾಕರ್ ಅವರ ಗುಣಗಾನ ಮಾಡಿದ ಸಿಎಂ, ಸುಧಾಕರ್‌ ಅವರು ಎಂದಿಗೂ ಜಾತಿ ಆಧಾರದ ಮೇಲೆ ರಾಜಕಾರಣ ಮಾಡಿದವರಲ್ಲ. ನೀತಿ, ಮಾನವೀಯತೆ ಹಾಗೂ ಸಿದ್ಧಾಂತಗಳನ್ನೇ ಉಸಿರಾಗಿಸಿಕೊಂಡು ಬದುಕಿದ ಸರಳ ಸಜ್ಜನ ರಾಜಕಾರಣಿಯಾಗಿದ್ದರು ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಮಾಜಿ ಸಚಿವ ಡಿ.ಸುಧಾಕರ್ ಅವರು ಎಲ್ಲ ಜಾತಿ-ಧರ್ಮಗಳ ಜನರನ್ನು ಪ್ರೀತಿಸುವ, ಜಾತ್ಯತೀತ ಮನೋಭಾವನೆಯ ಜನಪ್ರಿಯ ನಾಯಕರಾಗಿದ್ದರು. ಹಿರಿಯೂರು ಕ್ಷೇತ್ರದಲ್ಲಿ ಜೈನ ಸಮುದಾಯದ ಮತಗಳು ಕೇವಲ 200 ರಿಂದ 250 ಮಾತ್ರ ಇವೆ. ಆದಾಗ್ಯೂ ಸುಧಾಕರ್ ಅವರು ಈ ಕ್ಷೇತ್ರದಲ್ಲಿ ಸತತವಾಗಿ ಗೆದ್ದು ಬಂದಿದ್ದಾರೆ ಎಂದರೆ ಅವರು ಜಾತಿ ಆಧಾರದ ಮೇಲೆ ಮತ ಕೇಳಲಿಲ್ಲ. ಜಾತ್ಯತೀತವಾಗಿ ಎಲ್ಲ ವರ್ಗದ ಜನರ ಪ್ರೀತಿ ಗಳಿಸಿದ್ದರು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ನುಡಿದರು.

ಸುಧಾಕರ್‌ ಪುತ್ರ ಸುಹಾಸ್‌ಗೆ ಟಿಕೆಟ್ ನೀಡುವಂತೆ ಅಭಿಮಾನಿಗಳ ಒತ್ತಾಯ:

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಾಷಣ ಮಾಡುವಾಗ ನೂರಾರು ಜನರು ಡಿ.ಸುಧಾಕರ್ ಪುತ್ರ ಸುಹಾಸ್ ಸುಧಾಕರ್ ಅವರ ಫೋಟೋ ಹಿಡಿದು ಅವರಿಗೆ ಟಿಕೆಟ್ ನೀಡಬೇಕು ಎಂದು ಕೂಗುತ್ತಿದ್ದ ಸನ್ನಿವೇಶ ಕಂಡು ಬಂತು. ಜನರ ಕೂಗಾಟಕ್ಕೆ ಬೇಸರ ಮಾಡಿಕೊಳ್ಳದ ಸಿದ್ದರಾಮಯ್ಯನವರು ನಿಮ್ಮ ಮನವಿಯನ್ನು ಹೈಕಮಾಂಡ್ ಗಮನಕ್ಕೆ ತರುತ್ತೇನೆ ಎಂದು ನಗು ನಗುತ್ತಲೇ ಹೇಳಿ ಜನರನ್ನು ಸುಮ್ಮನಿರಿಸಿದರು. ನಂತರ ಡಿ.ಕೆ.ಶಿವಕುಮಾರ್ ಮಾತಿಗೆ ನಿಂತಾಗಲೂ ಸಹ ಜನರು ಸುಹಾಸ್ ಪರ ಘೋಷಣೆ ಕೂಗಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಶಂಕೆ ಗಂಭೀರವಾಗಿದ್ದರೂ ಸಾಕ್ಷಿ ಆಗಲ್ಲ: ಹೈಕೋರ್ಟ್‌
ಶಿವರಾಮ ಕಾರಂತ ಲೇಔಟ್‌ ಸೈಟ್‌ಗೆ ಅರ್ಜಿ ಸಲ್ಲಿಕೆ ವಿಸ್ತರಣೆ?