ದಲಿತರ ಕೇರಿಗಳಿಗೆ ಮೂಲಸೌಕರ್ಯ ಕಲ್ಪಿಸಿದ್ದೇ ಬಿಜೆಪಿ

KannadaprabhaNewsNetwork |  
Published : Mar 08, 2024, 01:54 AM IST
ಪೊಟೋ: 7ಎಸ್‌ಎಂಜಿಕೆಪಿ03ಶಿವಮೊಗ್ಗ  ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಬಿಜೆಪಿ ಎಸ್.ಸಿ. ಮೋರ್ಚಾ ನೂತನ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಹಲವರನ್ನು ಬಿಜೆಪಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.   | Kannada Prabha

ಸಾರಾಂಶ

ಕಾಂಗ್ರೆಸ್‌ನವರು ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯವನ್ನು ಓಟಿಗಾಗಿ ಬಳಸಿಕೊಂಡಿದ್ದು ಬಿಟ್ಟರೆ, ದಲಿತರ ಕಲ್ಯಾಣಕ್ಕೆ ಏನೂ ಮಾಡಿಲ್ಲ. ಸ್ವಾತಂತ್ರ್ಯ ಬಂದಾಗಿನಿಂದ ದಲಿತರ ಕೇರಿಗಳ ಉದ್ಧಾರ ಆಗಿದೆಯಾ? ಮೂಲಸೌಕರ್ಯ ಕಲ್ಪಿಸಿದ್ದು ಯಾರು ಎಂದು ದಲಿತ ಬಂಧುಗಳು ಚಿಂತಿಸಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಾಂಗ್ರೆಸ್‌ನವರು ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯವನ್ನು ಓಟಿಗಾಗಿ ಬಳಸಿಕೊಂಡಿದ್ದು ಬಿಟ್ಟರೆ, ದಲಿತರ ಕಲ್ಯಾಣಕ್ಕೆ ಏನೂ ಮಾಡಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆರೋಪಿಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಬಿಜೆಪಿ ಎಸ್.ಸಿ. ಮೋರ್ಚಾ ನೂತನ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿ, ಸ್ವಾತಂತ್ರ್ಯ ಬಂದಾಗಿನಿಂದ ದಲಿತರ ಕೇರಿಗಳ ಉದ್ಧಾರ ಆಗಿದೆಯಾ? ಮೂಲಸೌಕರ್ಯ ಕಲ್ಪಿಸಿದ್ದು ಯಾರು ಎಂದು ದಲಿತ ಬಂಧುಗಳು ಚಿಂತಿಸಬೇಕು. ಎಸ್.ಸಿ. ಮೋರ್ಚಾ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ದಲಿತರಿಗೆ ನೀಡಿದ ಸೌಲಭ್ಯಗಳನ್ನು ಮನೆ ಮನೆಗೆ ತೆರಳಿ ಮನದಟ್ಟು ಮಾಡಿಸಬೇಕು ಎಂದು ಕರೆ ನೀಡಿದರು.

ಬಿಜೆಪಿ ಎಲ್ಲಾ ವರ್ಗದ ಜನರ ಪಕ್ಷವಾಗಿದ್ದು, ಎಲ್ಲಿಯೂ ಜಾತಿ ನೋಡಲ್ಲ. ಕಾಂಗ್ರೆಸ್‌ನವರು ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಪಾರ್ಟಿ ಎಂದು ಬಿಂಬಿಸುತ್ತಾ ಸುಳ್ಳು ಹೇಳಿಕೊಂಡು ಬಂದಿದ್ದಾರೆ. ಒಂದು ಕಾಲದಲ್ಲಿ ಬಿಜೆಪಿ ಬ್ರಾಹ್ಮಣರ ಪಕ್ಷ ಎಂದಿತ್ತು. ಆದರೆ, ಈಗ ಪಾರ್ಟಿ ವಿಶ್ವದಲ್ಲೇ ಅತಿ ದೊಡ್ಡ ಪಕ್ಷವಾಗಿ ಬೆಳೆದಿದೆ. ಎಲ್ಲ ಜಾತಿ -ಧರ್ಮದವರಿಗೆ ಆದ್ಯತೆ ನೀಡಿದೆ. ಹಿಂದುಳಿದ ವರ್ಗದ ಕೋವಿಂದ್ ಅವರನ್ನು ರಾಷ್ಟ್ರಪತಿ ಮಾಡಿದ್ದು, ಡಾ. ಅಬ್ದುಲ್ ಕಲಾಂ ಅವರನ್ನು ಹಾಗೂ ಗುಡ್ಡಗಾಡು ಜನಾಂಗದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಮಾಡಿದ್ದು ನಮ್ಮ ಬಿಜೆಪಿ ಸರ್ಕಾರ ಎಂದು ತಿಳಿಸಿದರು.

ಇನ್ನು ಮುಂದೆ ದೇಶದಲ್ಲಿ ದಲಿತ, ಹಿಂದುಳಿದ ವರ್ಗಕ್ಕೆ ಕಾಂಗ್ರೆಸ್‌ನಿಂದ ಮೋಸ ಮಾಡಲು ಆಗುವುದಿಲ್ಲ. ಬಜೆಟ್‌ನಲ್ಲಿ ದಲಿತರಿಗೆ ಇಟ್ಟ ಹಣ ಗ್ಯಾರಂಟಿಗಳಿಗೆ ಉಪಯೋಗಿಸಿ, ಮುಸ್ಲಿಮರಿಗೆ ನೀಡಿದ್ದು, ಇದು ಯಾವ ನ್ಯಾಯ? ಬಿಜೆಪಿಯ ಎಸ್.ಸಿ. ಮೋರ್ಚಾ ಹಾಗೂ ಇನ್ನಿತರ ಎಲ್ಲ ಮೋರ್ಚಾಗಳು ಸದೃಢವಾಗಿವೆ. ತಲೆ ಎತ್ತಿ 10 ವರ್ಷದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮನೆ ಮನೆಗೆ ತಿಳಿಸಿ ಎಂದು ಕರೆ ನೀಡಿದರು.

ಹಿಂದೆ ಹಳ್ಳಿಗಳಿಗೆ ಮೂಲಸೌಲಭ್ಯ ಇಲ್ಲ, ನೀರು ತರಲು ಮೈಲುಗಟ್ಟಲೇ ಹೋಗಬೇಕು ಎಂದು ಹೆಣ್ಣು ಕೊಡುತ್ತಿರಲಿಲ್ಲ. ಆದರೆ, ಮೋದಿ ಸರ್ಕಾರ ಬಂದ ಮೇಲೆ ಪ್ರತಿ ಹಳ್ಳಿಗಳಿಗೆ ಗಂಗಾ ಕಲ್ಯಾಣ, ಹರ್ ಘರ್ ಮೆ ಜಲ್ ಯೋಜನೆಯಡಿ ನೀರು, ಸೋಲಾರ್ ವಿದ್ಯುತ್, ವಸತಿ, ಅನೇಕ ಸೌಲಭ್ಯ ನೀಡಿದೆ. ನಾವೆಲ್ಲರೂ ಹಿಂದೂಗಳು. ಸಮಾಜವನ್ನು ಒಟ್ಟು ಮಾಡಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕಿದೆ ಎಂದು ಹೇಳಿದರು.

ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷ ರಾಮ ನಾಯ್ಕ್ ಕೋಹಳ್ಳಿ ಪ್ರಾಸ್ತವಿಕವಾಗಿ ಮಾತನಾಡಿ, ದೀನದಯಾಳ್ ಬೆಳಕು, ಸುಕನ್ಯಾ ಸಮೃದ್ಧಿ, ಪ್ರಧಾನ್ ಮಂತ್ರಿ ಆವಾಸ್ ಯೋಜನೆ, ಉದ್ಯೋಗ ಖಾತ್ರಿ ಯೋಜನೆ, ಜಲ ಜೀವನ್ ಮಿಷನ್, ಆಯುಷ್ಮಾನ್ ಭಾರತ್, ಡಿಜಿಟಲ್ ಇಂಡಿಯಾ, ಉಚಿತ ಔಷಧಿ ವಿತರಣೆ, ಸ್ವಚ್ಛ ಭಾರತ್ ಮಿಷನ್, ಗ್ರಾಮಗಳಿಗೆ ಕಸ ವಿಲೇವಾರಿ ಘಟಕಗಳು, ಸ್ತ್ರೀ ಶಕ್ತಿ ಸಂಘಗಳಿಗೆ ಬಡ್ಡಿ ರಹಿತ ಸಾಲ, ರೈತರಿಗೆ 6 ಸಾವಿರ ರೂ. ಸಹಾಯಧನ, ಎಲ್ಲಾ ವರ್ಗದ ಜನರಿಗೆ ಸಮುದಾಯ ಭವನಗಳು, ರಸ್ತೆಗಳು, ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮೋದಿ ಸರ್ಕಾರ ಮಾಡಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವಾಗ ಅನೇಕ ಕಾರ್ಯಗಳನ್ನು ಮಾಡಿದ್ದು, ದೊಡ್ಡ ಪಟ್ಟಿಯೇ ಇದೆ. ಕಾರ್ಯಕರ್ತರು ಇದನ್ನು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಮುಖರಾದ ಶಿವರಾಜ್, ವೀರಭದ್ರಪ್ಪ ಪೂಜಾರ್, ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ಮಾಜಿ ಮೇಯರ್ ಶಿವಕುಮಾರ್, ಬಸವರಾಜಪ್ಪ, ದೇವರಾಜ ನಾಯ್ಕ್ ಮಹದೇವಪ್ಪ, ವಿನ್ಸೆಂಟ್ ರೋಡ್ರಿಗಸ್, ರಾಜು, ಮೂರ್ತಿ, ಎಚ್.ಎನ್. ಮಂಜುನಾಥ್, ಮತ್ತಿತರರು ಇದ್ದರು.

- - - ಬಾಕ್ಸ್‌ಕೇಂದ್ರ ಸಂಪುಟದಲ್ಲಿ 10 ಜನ ದಲಿತ, 37 ಜನ ಹಿಂದುಳಿದ ವರ್ಗದ ಮಂತ್ರಿಗಳಿದ್ದಾರೆ. ಅಯೋಧ್ಯೆಯಲ್ಲಿ ರಾಮಮೂರ್ತಿ ಪ್ರತಿಷ್ಠಾ ಕಾರ್ಯಕ್ರಮಕ್ಕೆ ದಲಿತರಿಗೆ ಆಹ್ವಾನ ನೀಡಿಲ್ಲ ಎಂದು ಕಾಂಗ್ರೆಸ್‌ನವರು ಆರೋಪ ಮಾಡಿದರು. ಆದರೆ, ಇಟ್ಟಿಗೆ ಶಂಕುಸ್ಥಾಪನೆ ಮಾಡಿದ್ದೇ ದಲಿತ ನಾಯಕರು. ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್‌ನವರು ನಿಸ್ಸೀಮರು ಎಂದು ಕೆ.ಎಸ್‌.ಈಶ್ವರಪ್ಪ ಕುಟುಕಿದರು.

ಶ್ರೀ ರಾಮ ಮಂದಿರ ಉದ್ಘಾಟನಾ ಸಮಾರಂಭದಲ್ಲಿ ಮಾದಾರ ಚನ್ನಯ್ಯ ಶ್ರೀಗಳು, ಕಾಗಿನೆಲೆ ಶ್ರೀಗಳು ಸೇರಿದಂತೆ ಹಲವಾರು ಹಿಂದುಳಿದ ವರ್ಗದ ಮಠಾಧೀಶರು ಭಾಗವಹಿಸಿ, ಧನ್ಯತಾ ಮನೋಭಾವದಿಂದ ಹೇಳಿಕೆ ನೀಡಿದ್ದರು. ಆದರೂ, ಕೂಡ ಕಾಂಗ್ರೆಸ್‌ನವರು ಸುಳ್ಳು ಹೇಳುವುದನ್ನು ಬಿಟ್ಟಿಲ್ಲ. ಕಾಂಗ್ರೆಸ್ ದೇಶದಲ್ಲಿ ಎಲ್ಲಿದೆ ಎಂಬುದನ್ನು ಹುಡುಕಬೇಕಾಗಿದೆ. ಈಗಾಗಲೇ ಎಲ್ಲಾ ಸಮೀಕ್ಷೆಗಳು ಮೋದಿ ಸರ್ಕಾರ 400ಕ್ಕೂ ಹೆಚ್ಚು ಸ್ಥಾನ ಗಳಿಸುತ್ತದೆ. ಕಾಂಗ್ರೆಸ್ 35 ಸ್ಥಾನ ದಾಟುವುದಿಲ್ಲ ಎಂದು ತಿಳಿಸಿವೆ ಎಂದರು.

- - -

ಬಾಕ್ಸ್‌-2 ಪರಮೇಶ್ವರ್ ಸಿಎಂ ಎಂದು ಘೋಷಿಸಿ ನೋಡೋಣಮಾತೆತ್ತಿದರೆ ಅಂಬೇಡ್ಕರ್ ಎಂದು ಹೇಳುವ ಕಾಂಗ್ರೆಸ್ ನವರು ಅವರ ಸೋಲಿಗೆ ಕಾರಣರಾಗಿದ್ದರು ಎಂಬುದನ್ನು ಮರೆಯಬಾರದು. ಸಾಮಾಜಿಕ ನ್ಯಾಯ ಕೊಡಿಸುವುದೇ ಬಿಜೆಪಿಯ ಅಜೆಂಡಾ. ಚುನಾವಣೆ ಬಂದಾಗ ಕಾಂಗ್ರೆಸ್ ನವರಿಗೆ ದಲಿತರ ನೆನಪಾಗುತ್ತದೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಎಂದು ಕೆಲವರು ಧ್ವನಿ ಎತ್ತಿದರೆ ಕೂಡಲೇ ದಲಿತರನ್ನು ಮುಖ್ಯಮಂತ್ರಿ ಮಾಡಿ ಎಂದು ಮಹದೇವಪ್ಪನವರ ಮೂಲಕ ಸಿದ್ದರಾಮಯ್ಯ ಹೇಳಿಸುತ್ತಾರೆ. ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಎಂದು ಘೋಷಿಸಲಿ ನೋಡೋಣ ಎಂದು ಈಶ್ವರಪ್ಪ ಸವಾಲು ಹಾಕಿದರು.

- - - -7ಎಸ್‌ಎಂಜಿಕೆಪಿ03:

ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಬಿಜೆಪಿ ಎಸ್.ಸಿ. ಮೋರ್ಚಾ ನೂತನ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಹಲವರನ್ನು ಬಿಜೆಪಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''