ಹಗರಿಬೊಮ್ಮನಹಳ್ಳಿ: ಬೆರಳಣಿಕೆಯಷ್ಟು ಜನರಿಂದ ಆರಂಭವಾದ ಬಿಜೆಪಿ ಇಂದು ವಿಶ್ವದಲ್ಲಿಯೇ 12 ಕೋಟಿಗೂ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಾರ್ಯಕರ್ತರ ಪರಿಶ್ರಮದಿಂದ ರಾಷ್ಟ್ರ ಮಟ್ಟದಲ್ಲಿ ಅಧಿಕಾರ ಪಡೆದಿರುವ ಬಿಜೆಪಿ ಶೂನ್ಯದಿಂದ ಶಿಖರಕ್ಕೇರಿದಂತಾಗಿದೆ ಎಂದು ನಗರ ಘಟಕದ ಅಧ್ಯಕ್ಷ ಮಂಜುನಾಥ ಹಿರೇಮಠ ಪ್ರತಿಪಾದಿಸಿದರು.
ದೇಶವು ಸಂಕಷ್ಟದಲ್ಲಿದ್ದಾಗ, ದೇಶ ಪ್ರೇಮದ ಕಿಚ್ಚನ್ನು ಜನರಲ್ಲಿ ಮೂಡಿಸಿದ ಪರಿಣಾಮವಾಗಿಯೇ ಪಕ್ಷದ ಮೇಲೆ ಜನರಲ್ಲಿ ವಿಶ್ವಾಸ ಮೂಡಿದೆ. ಸ್ವಾತಂತ್ರ್ಯಾ ನಂತರ ಆಸ್ತಿತ್ವಕ್ಕೆ ಬಂದಿರುವ ಯಾವ ಪಕ್ಷಗಳೂ ಇಷ್ಟು ಕಡಿಮೆ ಆವಧಿಯಲ್ಲಿ ವ್ಯಾಪಕವಾಗಿ ಬೆಳೆದಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.
ರಾಷ್ಟ್ರೀಯ ಚಿಂತನೆಗಳ ಮೂಲಕ ದೇಶದ ಅಭಿವೃದ್ಧಿಯ ಪಥಕ್ಕೆ ನಾಂದಿ ಹಾಡಿದ ಪಕ್ಷದ ಹಿರಿಯರಾದ ವಾಜಪೇಯಿ, ಅಡ್ವಾಣಿ ಹಾಗೂ ನರೇಂದ್ರ ಮೋದಿ ಮತ್ತಿತರೇ ನಾಯಕರನ್ನು ಸ್ಮರಿಸಿಕೊಳ್ಳುವ ಜೊತೆಗೆ ತಳಮಟ್ಟದಿಂದ ಪಕ್ಷವನ್ನು ಬಲಪಡಿಸುತ್ತಿರುವ ಕಾರ್ಯಕರ್ತರ ಶ್ರಮವನ್ನೂ ಗೌರವಿಸಬೇಕು ಎಂದು ಅಭಿಪ್ರಾಯಪಟ್ಟರು.ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರ ಹಾಗೂ ದುರಾಡಳಿತ ಮಿತಿ ಮೀರಿದೆ. ಬಿಜೆಪಿ ಕಾರ್ಯಕರ್ತರು ಸಿಡಿದೆದ್ದಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ. ಬಿಜೆಪಿ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.