ಕನ್ನಡಪ್ರಭ ವಾರ್ತೆ ಬೆಳಗಾವಿ
ಬಿ.ವೈ.ವಿಜಯೇಂದ್ರನಿಂದಲೇ ರಾಜ್ಯದಲ್ಲಿ ಬಿಜೆಪಿ ಹಾಳಾಗುತ್ತಿದೆ. ಇದರ ಬಗ್ಗೆ ನಮಗೂ ನೋವಿದೆ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಆರೋಪಿಸಿದರು.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ನಾವೆಂದಿಗೂ ಮಾತನಾಡಿಲ್ಲ. ಆದರೆ, ಅವರ ಪುತ್ರ ವಿಜಯೇಂದ್ರ ವಿರುದ್ಧ ದನಿ ಎತ್ತಿದ್ದೇವೆ. ಅವರ ಬದಲಾವಣೆ ಮಾಡುವ ಹೋರಾಟದ ಬಗ್ಗೆ ಮಾಧ್ಯಮದ ಮುಂದೆ ಚರ್ಚೆ ಮಾಡುವುದಿಲ್ಲ ಎಂದರು.
ಬಿಜೆಪಿಯಿಂದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉಚ್ಚಾಟನೆಗೊಂಡು 8 ತಿಂಗಳು ಕಳೆದಿವೆ. ಯತ್ನಾಳ ಅವರು ರಾಜ್ಯ ರಾಜಕಾರಣದಲ್ಲಿ ಮೇಲೆ ಬಂದಿದ್ದಾರೆ. ಆದರೆ, ವಿಜಯೇಂದ್ರ ಕೆಳಗೆ ಬಂದಿದ್ದಾನೆ ಎಂಬುವುದರ ಕುರಿತು ತುಲನೆ ಮಾಡಿ ಪಕ್ಷದ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಬೇಕು. ವಿಜಯೇಂದ್ರ ಮುಂದುವರೆಸಿದರೆ ಮಾತ್ರ ಬೇರೆ ಪಕ್ಷ ಕಟ್ಟುವುದಾಗಿ ಯತ್ನಾಳ ಹೇಳಿಕೆ ಕೊಟ್ಟಿದ್ದಾರೆ ಎಂದರು.ಪಕ್ಷಕ್ಕೆ ಯಾರು ಅನಿವಾರ್ಯ ಅಲ್ಲ. ಯತ್ನಾಳ ದೊಡ್ಡಮಟ್ಟದಲ್ಲಿ ಬೆಳೆಯುತ್ತಿದ್ದಾರೆ. ಆದರೆ, ಯತ್ನಾಳ ಅವರನ್ನು ಬಿಜೆಪಿ ಕಳೆದುಕೊಳ್ಳಬಾರದು. ನಾನು ಯತ್ನಾಳ ವಾರಕ್ಕೊಮ್ಮೆ ಸೇರುತ್ತೇವೆ. ಮೊನ್ನೆ ಮಾಧ್ಯಮದಲ್ಲಿ ಭೇಟಿ ಬಗ್ಗೆ ಚರ್ಚೆಗೆ ಬಂದಿದೆ. ಆರಂಭದಿಂದಲೂ ಯತ್ನಾಳರನ್ನು ಬಿಜೆಪಿಗೆ ಮರಳಿ ಕರೆದುಕೊಂಡು ಬರಲು ಪ್ರಯತ್ನ ನಡೆದಿದೆ. ಯತ್ನಾಳ ಉಚ್ಚಾಟನೆಯಾದ ದಿನದಿಂದಲೇ ಈ ಪ್ರಯತ್ನ ಮಾಡುತ್ತಿದ್ದೇವೆ. ಬಿಹಾರ ಚುನಾವಣೆ, ಆರ್‌ಎಸ್ಎಸ್ ಶತಮಾನೋತ್ಸವದಲ್ಲಿ ಹೈಕಮಾಂಡ್ ನಾಯಕರು ಬಿಜಿ ಇದ್ದಾರೆ. ಸತತವಾಗಿ ಯತ್ನಾಳ ವಾಪಸ್ ಕರೆದುಕೊಂಡು ಬರಲು ಪ್ರಯತ್ನ ಮಾಡುತ್ತಿದ್ದೇವೆ ಎಂದರು.ರೈತರ ಕಬ್ಬಿಗೆ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಬೇಕು. ನಾನು ರೈತರ ಪರವಾಗಿದ್ದೇನೆ. ರೈತರಿಗೆ ನ್ಯಾಯ ಸಿಗಬೇಕು. ಸರ್ಕಾರ ಕೂಡಲೇ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.ಕಾಂಗ್ರೆಸ್ ನವೆಂಬರ್ ಕ್ರಾಂತಿಯ ಬಗ್ಗೆ ನಮ್ಮ ಪಕ್ಷದವರು ಏಕೆ ಚರ್ಚೆ ಮಾಡುತ್ತಿದ್ದಾರೆ ಎಂಬುವುದು ನನಗೆ ತಿಳಿಯುತ್ತಿಲ್ಲ. ಡಿ.ಕೆ.ಶಿವಕುಮಾರ ಅವರನ್ನಾದರೂ ಸಿಎಂ ಮಾಡಲಿ ಅಥವಾ ಸಿದ್ದರಾಮಯ್ಯ ಅವರೇ ಮುಂದುವರೆಯಲಿ ನಮಗೆ ಯಾಕೆ ಬೇಕು? ನಾವು ವಿರೋಧ ಪಕ್ಷ ಕೆಲಸ ಮಾಡಿಕೊಂಡು ಹೋದರೆ ಸಾಕು ಎಂದರು.ಲಕ್ಷ್ಮಣ ಸವದಿ ಸೋಲಿಸಲು ಶಪಥ: ಮುಂಬರುವ 2028ರ ವಿಧಾನಸಭೆ ಚುನಾವಣೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಅವರನ್ನು ಸೋಲಿಸಿಯೇ ತೀರುತ್ತೇನೆ ಎಂದು ರಮೇಶ ಜಾರಕಿಹೊಳಿ ಶಪಥ ಮಾಡಿದರು.ಅಥಣಿ ಸಹಕಾರ ಕ್ಷೇತ್ರದಲ್ಲಿ ಸೋಲಾಗುತ್ತದೆ ಎಂದು ನಮಗೆ ಮೊದಲೇ ಗೊತ್ತಿತ್ತು. ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 18 ಸಾವಿರ ಮತಗಳಿದ್ದವು. ಅದನ್ನು ಈಗ ಸವದಿ ಐದೂವರೆ ಸಾವಿರಕ್ಕೆ ತಂದಿಟ್ಟಿದ್ದಾರೆ. ಅದರ ಬಗ್ಗೆ ಯಾರೂ ಪ್ರಶ್ನೆ ಮಾಡುತ್ತಿಲ್ಲ ಎಂದು ಕಿಡಿಕಾರಿದರು.ಮಾಜಿ ಸಂಸದ ರಮೇಶ ಕತ್ತಿ ಇಂದಿಗೂ ನನ್ನ ಆತ್ಮೀಯ. ಅವನಿಗೂ, ನನಗೂ ಯಾವುದೇ ವೈಷಮ್ಯ ಇಲ್ಲ. ಆದರೆ, ವಾಲ್ಮೀಕಿ ಸಮಾಜದ ಬಗ್ಗೆ ಮಾತನಾಡಿದ್ದಕ್ಕೆ ನನಗೆ ಬೇಜಾರಾಗಿದೆ. ಮನಸಿಗೆ ಬಂದಂತೆ ಕತ್ತಿ ಮಾತನಾಡಬಾರದಿತ್ತು. ನಾನು ಹುಕ್ಕೇರಿ ವಿದ್ಯುತ್ ಸಹಕಾರಿ ಕ್ಷೇತ್ರದ ಚುನಾವಣೆ ಮಾಡಬೇಡಿ ಎಂದಿದ್ದೆ. ಆದರೆ, ಚುನಾವಣೆ ನಡೆಯಿತು. ನಾನು ವಿದೇಶಿ ಪ್ರವಾಸದಲ್ಲಿದ್ದೆ. ದಯವಿಟ್ಟು ರಮೇಶ ಕತ್ತಿ ಅವರು ತಮ್ಮ ಮಾತಿನ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳಬೇಕು. ಇಲ್ಲದಿದ್ದರೇ ರಾಜಕೀಯ ಜೀವನದಲ್ಲಿ ಸಾಕಷ್ಟು ಹೊಡೆತ ಬೀಳುತ್ತದೆ ಎಂದರು.ಒಂದೇ ಸಮಾಜದಿಂದ ಗೆಲ್ಲಲು ಆಗುವುದಿಲ್ಲ. ನಾನು ಉಮೇಶ್ ಕತ್ತಿ ಪರಸ್ಪರ ಮಾತಾಡುವ ಭಾಷೆ ಕೇಳಿದರೆ ನೀವು ಓಡಿ ಹೋಗುತ್ತಿದ್ರಿ. ಅಷ್ಟು ಕೆಟ್ಟದಾಗಿ ದೋಸ್ತಿಯಲ್ಲಿ ನಾವು ಮಾತಾಡ್ತಿದ್ದೆವು. ಸಾರ್ವಜನಿಕ ಜೀವನದಲ್ಲಿ ಒಂದು ಸಮಾಜವನ್ನು ಬೈಯ್ಯುವುದು ತಪ್ಪು. ಹುಕ್ಕೇರಿ ಮತಕ್ಷೇತ್ರದ ಹಿಂದುಳಿದವರು ಬಹುಸಂಖ್ಯಾತರು ಇದ್ದಾರೆ. ನಾಳೆ ನಿಖಿಲ್ ಕತ್ತಿಗೆ ರಾಜಕೀಯ ಹೊಡೆತ ಬೀಳುತ್ತದೆ ಎಂದು ತಿಳಿಸಿದರು.