ಹೊಸಪೇಟೆ: ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಬೇಕು. ತುಂಗಭದ್ರಾ ಜಲಾಶಯದಿಂದ ಎರಡನೇ ಬೆಳೆಗೆ ನೀರು ಒದಗಿಸಬೇಕು ಎಂದು ಒತ್ತಾಯಿಸಿ ವಿಜಯನಗರ ಜಿಲ್ಲಾ ಬಿಜೆಪಿಯಿಂದ ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಮಾಜಿ ಸಚಿವ ರೇಣುಕಾಚಾರ್ಯ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ಭತ್ತ, ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಲು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರೆ, ಸರ್ಕಾರ ವಿಧಾನಸೌಧದಲ್ಲಿ ಶಾಸಕರ ಖರೀದಿ ಕೇಂದ್ರ ಪ್ರಾರಂಭಿಸಿದೆ. ರೈತರ ಹಾಗೂ ರಾಜ್ಯದ ಜನರ ಸಮಸ್ಯೆಗೆ ಈ ಸರ್ಕಾರ ಕಿವಿಗೊಡುತ್ತಿಲ್ಲ. ರೈತ ವಿರೋಧಿ ಸರ್ಕಾರ ಕ್ರಮ ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಡಿ.8ರಂದು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಬ್ರೇಕ್‌ಫಾಸ್ಟ್, ನಾಟಿಕೋಳಿ ಸಾರು, ಮುದ್ದೆ ಅಂತ ಮೆನು ಅನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡ್ತಾರೆ. ಸಿಎಂ, ಡಿಸಿಎಂಗೆ ನಾಚಿಕೆ ಆಗಬೇಕು. ರೈತರ ಹಾಗೂ ಜನರ ಸಮಸ್ಯೆ ಬಗೆಹರಿಸದೇ ಕುರ್ಚಿಗಾಗಿ ಕಿತ್ತಾಡುತ್ತಿದ್ದಾರೆ. ರಾಜ್ಯದಲ್ಲಿ ಸರ್ಕಾರ ಸತ್ತೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮಾಜಿ ಸಚಿವ ಜಿ.ಕರುಣಾಕರ ರೆಡ್ಡಿ ಮಾತನಾಡಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಮುದ್ದೆಯನ್ನಾದ್ರೂ ತಿನ್ನಲಿ, ನಾಟಿಕೋಳಿ ಆದ್ರೂ ತಿನ್ನಲಿ, ಇಡ್ಲಿ ಸಾಂಬಾರ್ ಆದ್ರೂ ತಿನ್ನಲಿ ಮೊದಲು ಜನರ ಪರವಾಗಿ ಕೆಲಸ ಮಾಡಬೇಕು. ರಾಜ್ಯದಲ್ಲಿ ಲಜ್ಜೆಗೆಟ್ಟ ಸರ್ಕಾರ ಇದೆ ಎಂದು ಯಡಿಯೂರಪ್ಪನವರು ಹೇಳುತ್ತಿದ್ದರು. ಕಾಂಗ್ರೆಸ್ ಸರ್ಕಾರಕ್ಕೆ ಆ ಮಾತು ಸರಿ ಹೊಂದಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಕೃಷ್ಣ ನಾಯ್ಕ ಮಾತನಾಡಿ, ರೈತರ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಕಾಳಜಿ ಇಲ್ಲ. ಆ ಪಕ್ಷದ ನಾಯಕರಿಗೆ ಕುರ್ಚಿ ಮೇಲೆ ವ್ಯಾಮೋಹ ಇದೆ. ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ತುಂಗಭದ್ರಾ ಜಲಾಶಯ ವ್ಯಾಪ್ತಿಯ ರೈತರಿಗೆ ಎರಡನೇ ಬೆಳೆಗೆ ನೀರು ಕೊಡಬೇಕು. ಮೆಕ್ಕೆಜೋಳ, ಭತ್ತದ ಬೆಳೆ ಖರೀದಿ ಕೇಂದ್ರ ತೆರೆಯಬೇಕು. ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಬೇಕು ಎಂದು ಆಗ್ರಹಿಸಿದರು.ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ ಶೃತಿ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ವಿಜಯನಗರ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ರೆಡ್ಡಿ, ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್. ರಾಘವೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮಣ್ಣ, ಓದೋ ಗಂಗಪ್ಪ, ಜಿಲ್ಲಾ ಉಪಾಧ್ಯಕ್ಷ ಕೃಷ್ಣ ನಾಯ್ಕ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕಿಚಡಿ ಕೊಟ್ರೇಶ್, ವಿಜಯನಗರ ಮಂಡಳ ಅಧ್ಯಕ್ಷ ಶಂಕರ ಮೇಟಿ ಮತ್ತಿತರರಿದ್ದರು.