ಪಾಲಾಕ್ಷ ಬಿ.ತಿಪ್ಪಳ್ಳಿ ಯಲಬುರ್ಗಾ
ಸತತ ಪ್ರಯತ್ನದಿಂದ ಸಾಧನೆಯ ಹಾದಿ ಸುಗಮ ಎಂಬುದನ್ನು ಸಾಧಿಸುವ ಮೂಲಕ ತೋರಿಸಿದ್ದಾನೆ. ಕರಣ್ ಅವರ ತಂದೆ ಸುಭಾಷ್ ಬೆಟಗೇರಿ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದರು. ಕ್ರೀಡೆಯಲ್ಲಿ ತಮ್ಮ ಮಗನನ್ನು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿಸುವ ಸಲುವಾಗಿ ನೌಕರಿಯನ್ನೇ ಬಿಟ್ಟು ಬಂದಿದ್ದಾರೆ. ಮಗನನ್ನು ಆ್ಯಕ್ಷನ್ ಸ್ಟಾರ್ ಮಾಡಿಸುವ ಮಹಾದಾಸೆ ಹೊಂದಿದ್ದರು. ಹಿಂದುಳಿದ ಗ್ರಾಮೀಣ ಪ್ರದೇಶದ ಬಾಲಕನ ಪ್ರತಿಭೆ ರಾಷ್ಟ್ರಮಟ್ಟದಲ್ಲಿ ಅನಾವರಣವಾಗಿದ್ದು, ಸಾಧನೆಗೆ ಬಡತನ ಅಡ್ಡಿಯಾಗದು ಎಂಬುದಕ್ಕೆ ಸಾಕ್ಷಿಯಾಗಿದೆ.
ಈ ಮುಂಚೆ ಕರಣ್ ಹತ್ತು ವರ್ಷದ ಮಗು ಇದ್ದಾಗ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಆಗಿದ್ದ. ಉತ್ತರಾಖಂಡದಲ್ಲಿ ನಡೆದ ಟೇಕ್ವಾಂಡೋ ಸ್ಪರ್ಧೆಯಲ್ಲಿ ಜ್ಯೂನಿಯರ್ ನ್ಯಾಷನಲ್‌ನಲ್ಲಿ ಸಿಲ್ವರ್ ಮೆಡಲ್, ೨೦೨೫ರಲ್ಲಿ ನಡೆದ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಮೊದಲ ಸ್ಥಾನ ಪಡೆದಿದ್ದಾನೆ. ಟೇಕ್ವಾಂಡೋ ಓಲಂಪಿಕ್ ಆಟಗಳಲ್ಲಿ ಒಂದಾಗಿದ್ದು, ಬೆಂಗಳೂರು, ಹರಿಯಾಣದ ಗುರುಗ್ರಾಮ್, ದೆಹಲಿ ಮತ್ತು ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಕರಣ್ ತರಬೇತಿ ಪಡೆದಿದ್ದಾನೆ.ಅರುಣಾಚಲ ಪ್ರದೇಶದ ಇಟಾನಗರದಲ್ಲಿ (ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ) ಎಸ್‌ಜಿಎಫ್‌ಐ ವತಿಯಿಂದ ಆಯೋಜಿಸಿದ್ದ ೬೯ನೇ ರಾಷ್ಟ್ರಮಟ್ಟದ ೧೭ ವರ್ಷ ವಯೋಮಿತಿಯ ಬಾಲಕರ ಟೇಕ್ವಾಂಡೋ ೪೮ ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಮೊದಲ ಸ್ಥಾನ ಪಡೆದು, ಸಾಧನೆ ಮಾಡುವ ಮೂಲಕ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾನೆ. ದೇಶದ ನಾನಾ ಕಡೆ ತರಬೇತಿ ಪಡೆದ ಮಗನಿಗೆ ತಂದೆ ಸುಭಾಷ್ ಕೂಡ ಮನೆಯಲ್ಲಿಯೇ ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದಾರೆ.
ನಮ್ಮ ಮಗ ಟೇಕ್ವಾಂಡೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿರುವುದು ಸಂತಸ ತಂದಿದೆ. ಆತನನ್ನು ಓಲಿಂಪಿಕ್ ಆಟಗಳಲ್ಲಿ ಭಾಗವಹಿಸಲು ಸಾಕಷ್ಟು ಪ್ರೋತ್ಸಾಹ ನೀಡಲಾಗುತ್ತಿದೆ. ಕರಾಟೆ ಮತ್ತು ಟೇಕ್ವಾಂಡೋದಲ್ಲಿ ಸುದೀರ್ಘ ೧೨ ವರ್ಷ ಅಭ್ಯಾಸ ಮಾಡಿದ್ದಾನೆ. ಸರ್ಕಾರಗಳು ವರ್ಲ್ಡ್ ಕ್ಲಾಸ್ ಸೆಂಟರ್‌ಗಳಲ್ಲಿ ತರಬೇತಿ ಪಡೆಯಲು ಸಹಾಯ ಮಾಡಬೇಕು. ಮಕ್ಕಳಲ್ಲಿರುವ ಪ್ರತಿಭೆ ಅನಾವರಣಕ್ಕೆ ಪ್ರೋತ್ಸಾಹದ ಅಗತ್ಯವಿದೆ ಎಂದು ಕರಣ್ ಅವರ ತಂದೆ ಸುಭಾಷ್ ಬೆಟಗೇರಿ ಹೇಳಿದ್ದಾರೆ.