ಹೊಸಪೇಟೆ: ಕನ್ನಡ ವಿಶ್ವವಿದ್ಯಾಲಯದ ಭೂಮಿಯನ್ನು ಬೇರೆಯವರಿಗೆ ಬಾಡಿಗೆ ನೀಡುವುದು ಮತ್ತು ಪರಭಾರೆ ಮಾಡುವುದನ್ನು ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಸಿಪಿಎಂ ವತಿಯಿಂದ ವಿಜಯನಗರ ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಭೂಮಿಯನ್ನು ಗುತ್ತಿಗೆ ಕೊಡುವ ವಿಷಯದಲ್ಲಿ ಅನೇಕ ಊಹಾಪೋಹಗಳ ಚರ್ಚೆಗೆ ಬಂದಿವೆ. ಇಂಥ ವಿಷಯಗಳು ಚರ್ಚೆಗೆ ಬಂದಿರುವುದು ಖೇದಕರ ಸಂಗತಿಯಾಗಿದೆ. ಕನ್ನಡ ವಿಶ್ವವಿದ್ಯಾಲಯ ತನ್ನ ವಿಶಾಲತೆಯನ್ನು ಹೆಚ್ಚಿಸಿಕೊಳ್ಳಬೇಕಾದಂತ ಅನಿವಾರ್ಯತೆಯು ನಮ್ಮ ನಾಡಿಗಿದೆ. ಇದನ್ನು ಮರೆಮಾಚಿ ಕನ್ನಡ ವಿಶ್ವವಿದ್ಯಾಲಯದ ಒಳಗಡೆ ಇರುವ 100 ಎಕರೆಯಲ್ಲಿ ಕೆಇಬಿ ಸಂಸ್ಥೆಯಿಂದ ಸೋಲಾರ್ ಘಟಕ ಸ್ಥಾಪಿಸಲು ಭೂಮಿಯನ್ನು ಬಾಡಿಗೆ ಪಡೆದು, ಮುಂದೊಂದು ದಿನ ಪರಭಾರೆ ಮಾಡಿಕೊಳ್ಳುವ ಸಂಭವ ಇದೆ ಎನ್ನುವ ಆತಂಕವಿದೆ. ಇದನ್ನು ಸಿಪಿಎಂ ತೀವ್ರವಾಗಿ ಖಂಡಿಸಿದೆ. ಯಾವುದೇ ಕಾರಣಕ್ಕೂ ಭೂಮಿಯನ್ನು ಲೀಜ್ ಅಥವಾ ಬಾಡಿಗೆ ಕೊಡುವ ಪ್ರಯತ್ನ ಮಾಡಬಾರದು ಎಂದು ಸಿಪಿಎಂ ಮುಖಂಡರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಸಿಪಿಎಂ ಪಕ್ಷದ ಮುಖಂಡರಾದ ಆರ್. ಬಾಸ್ಕರ್ ರೆಡ್ಡಿ, ಎನ್. ಯಲ್ಲಾಲಿಂಗ, ವಿ. ಸ್ವಾಮಿ, ಬಿಸಾಟಿ ಮಹೇಶ್ ಇದ್ದರು.