ಕಾಂಗ್ರೆಸ್‌ ವಿರುದ್ಧ ಹುಬ್ಬಳ್ಳಿಯಲ್ಲಿ ಬಿಜೆಪಿ ಬೃಹತ್‌ ಪ್ರತಿಭಟನೆ

KannadaprabhaNewsNetwork |  
Published : May 02, 2026, 02:00 AM IST
ಬಿಜೆಪಿ ಪ್ರತಿಭಟನೆ | Kannada Prabha

ಸಾರಾಂಶ

ಲೋಕಸಭೆಯಲ್ಲಿ ನಾರಿಶಕ್ತಿ ವಂದನಾ ಬಿಲ್‌ ಸೋಲಿಸಿದ ಕಾಂಗ್ರೆಸ್‌ ನಡೆ ಖಂಡಿಸಿ ಇಲ್ಲಿನ ನೆಹರು ಮೈದಾನದಲ್ಲಿ ಶುಕ್ರವಾರ ಬಿಜೆಪಿಯಿಂದ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಲೋಕಸಭೆಯಲ್ಲಿ ನಾರಿಶಕ್ತಿ ವಂದನಾ ಬಿಲ್‌ ಸೋಲಿಸಿದ ಕಾಂಗ್ರೆಸ್‌ ನಡೆ ಖಂಡಿಸಿ ಇಲ್ಲಿನ ನೆಹರು ಮೈದಾನದಲ್ಲಿ ಶುಕ್ರವಾರ ಬಿಜೆಪಿಯಿಂದ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ನಗರದ ಅಂಬೇಡ್ಕರ್‌ ವೃತ್ತದಲ್ಲಿ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಿಜೆಪಿ ನಾಯಕರು, ಬಳಿಕ, ಪ್ರತಿಭಟನಾ ಮೆರವಣಿಗೆ ಮೂಲಕ ನೆಹರು ಮೈದಾನ ತಲುಪಿದರು. ಅಲ್ಲಿ ಪ್ರತಿಭಟನಾ ಸಮಾವೇಶ ನಡೆಸಲಾಯಿತು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಮಹಿಳಾ ಮೀಸಲಾತಿ ಬಿಲ್‌ನ್ನು ಸಂಸತ್ ಅಧಿವೇಶನದಲ್ಲಿ ಕಾಂಗ್ರೆಸ್ ವಿರೋಧಿಸಿದ್ದು, ಅದೊಂದು ಕರಾಳ ದಿನವಾಗಿದೆ. ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಹಾಗೂ ಮುಂಚೂಣಿಗೆ ಬರುವುದು ಕಾಂಗ್ರೆಸ್ ಪಕ್ಷದ ನಾಯಕರಿಗೆ ಮೊದಲಿನಿಂದಲೂ ಇಷ್ಟವಿಲ್ಲ. ಆ ಒಂದು ಕಾರಣಕ್ಕೆ ಮಹಿಳೆಯರ ಪರವಾದ ಮೀಸಲಾತಿ ಬಿಲ್ ಸಂಸತ್‌ನಲ್ಲಿ ಪಾಸ್ ಆಗದಂತೆ ಷಡ್ಯಂತ್ರ ಮಾಡಿದೆ ಎಂದು ದೂರಿದರು.

ಮಹಿಳಾ ವಿರೋಧಿ ನಡೆಯನ್ನು ಅನುಸರಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಮಹಿಳೆಯರು ತಕ್ಕ ಪಾಠ ಕಲಿಸಲಿದ್ದಾರೆ. ಕಾಂಗ್ರೆಸ್ ಪಕ್ಷದ ಎಲ್ಲ ಬಂಡವಾಳವನ್ನು ಬಯಲು ಮಾಡುವ ನಿಟ್ಟಿನಲ್ಲಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಹಾಗೂ ಜನಾಕ್ರೋಶ ರ್‍ಯಾಲಿ ಹಮ್ಮಿಕೊಂಡಿದೆ. ಆ ಮೂಲಕ ರಾಜ್ಯದ ಜನತೆಗೆ ಸತ್ಯವನ್ನು ಬಹಿರಂಗಪಡಿಸುವ ಕೆಲಸ ಮಾಡಲಾಗುವುದು ಎಂದರು.

ಕೇಂದ್ರ ಕಾರ್ಮಿಕ, ಉದ್ಯೋಗ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಕ್ಷೇತ್ರ ಪುನರ್‌ವಿಂಗಡಣೆ ವಿಷಯವನ್ನಿಟ್ಟುಕೊಂಡು ದೇಶವನ್ನು ಉತ್ತರ, ದಕ್ಷಿಣ ಎಂದು ಇಬ್ಭಾಗ ಮಾಡುವ ಷಡ್ಯಂತ್ರವನ್ನು ಕಾಂಗ್ರೆಸ್‌ ಮಾಡುತ್ತಿದೆ. ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಬಾರದೆಂಬ ಉದ್ದೇಶದಿಂದಲೇ 2011ರ ಜನಗಣತಿ ಪ್ರಕಾರ ಕ್ಷೇತ್ರ ಪುನರ್‌ ವಿಂಗಡಣೆ ಮಾಡಲು ಬಿಜೆಪಿ ಹೊರಟಿತ್ತು. ಲೋಕಸಭಾ ಕ್ಷೇತ್ರಗಳ ಸಂಖ್ಯೆ 850ಕ್ಕೇರಿಸಲು ನಿರ್ಧರಿಸಲಾಗಿತ್ತು. ಆದರೆ, ಹೊಸ ಜನಗಣತಿ ಆಧಾರದ ಮೇಲೆ ಕ್ಷೇತ್ರಗಳ ಸಂಖ್ಯೆ ಹೆಚ್ಚಳ ಮಾಡಬೇಕೆಂದು ಕಾಂಗ್ರೆಸ್‌ ಒತ್ತಾಯಿಸುತ್ತಿದೆ. ಈಗಿನ ಕ್ಷೇತ್ರಗಳಿಗೆ ಮೀಸಲಾತಿ ನೀಡಿ ಎಂದು ಹೇಳುತ್ತಿದೆ. ಹಾಗೆ ನೀಡಿದರೆ ಪುರುಷರಿಗೆ ಅನ್ಯಾಯವಾಗುತ್ತದೆ. ಪುರುಷ-ಮಹಿಳೆಯರಿಗೆ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ 2011ರ ಜನಗಣತಿ ಮೂಲಕ ಕ್ಷೇತ್ರ ಪುನರ್‌ವಿಂಗಡಣೆ ಮಾಡಲು ಸರ್ಕಾರ ಹೊರಟಿತ್ತು ಎಂದು ಸ್ಪಷ್ಟಪಡಿಸಿದರು.

ಮಹಿಳೆಯರಿಗೆ ಧ್ವನಿಯಿದೆ. ಆದರೆ, ಅದಕ್ಕೆ ಶಕ್ತಿ ತುಂಬಬೇಕಿದೆ. ಆ ಶಕ್ತಿ ತುಂಬುವ ಕೆಲಸವನ್ನು ಬಿಜೆಪಿ ಮಾಡಲು ಹೊರಟಿತ್ತು. ಅದನ್ನು ವಿಫಲಗೊಳಿಸಿರುವ ಕಾಂಗ್ರೆಸ್‌ ಹಾಗೂ ಮಿತ್ರ ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಗುಡುಗಿದರು. ಮುಂದೆ ಮಹಿಳಾ ಮೀಸಲಾತಿ ತರುವುದು ಗ್ಯಾರಂಟಿ ಎಂದ ಅವರು, ಪ್ರತಿಯೊಬ್ಬ ಮಹಿಳೆಯೂ ಈ ಬಗ್ಗೆ ಕಾಂಗ್ರೆಸ್ಸಿಗರನ್ನು ಪ್ರಶ್ನಿಸಬೇಕು ಎಂದರು.ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರು ನಿರ್ಣಯ ತೆಗೆದುಕೊಳ್ಳುವ ಸ್ಥಾನದಲ್ಲಿ ಇರಬೇಕು ಎನ್ನುವ ಸದುದ್ದೇಶ ಪ್ರಧಾನಿ ನರೇಂದ್ರ ಮೋದಿ ಅವರದು. ಅದಕ್ಕಾಗಿ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತರಲು ಮುಂದಾಗಿದ್ದರು. ಜಾತಿ, ಧರ್ಮದ ನಡುವೆ ಒಡೆದಾಳುವ ನೀತಿಯ ಮೂಲಕ ರಾಜಕಾರಣ ಮಾಡುತ್ತಾ ಬಂದ ಕಾಂಗ್ರೆಸ್‌, ಇದೀಗ ಮಹಿಳಾ ಮೀಸಲಾತಿ, ಕ್ಷೇತ್ರಗಳ ಪುನರ್ ವಿಂಗಡಣೆ ನೆಪದಲ್ಲಿ ದೇಶ ಒಡೆಯುವ ಜತೆಗೆ ಹೆಣ್ಣು-ಗಂಡೆಂದು ಒಡೆಯುವ ಯತ್ನಕ್ಕೆ ಕೈಹಾಕಿದೆ ಎಂದು ಗಂಭೀರ ಆರೋಪ ಮಾಡಿದರು.ಮತ್ತೆ ಮಹಿಳಾ ಮಸೂದೆ ಮಂಡನೆ:

ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಮಾತನಾಡಿ, ಮುಂದಿನ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಮಹಿಳಾ ಮೀಸಲಾತಿ ಮಸೂದೆ ಮಂಡಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅಲ್ಲಿಯವರೆಗೂ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.ಎಚ್.ಡಿ.ದೇವೇಗೌಡ ಅವರು ಪ್ರಧಾನ ಮಂತ್ರಿಯಾಗಿದ್ದ ಸಂದರ್ಭದಲ್ಲಿಯೂ ಮಹಿಳಾ ಮೀಸಲಾತಿ ಮಸೂದೆ ಮಂಡಿಸಲಾಗಿತ್ತು. ಆಗಲೂ ಅಂದಿನ ಕಾಂಗ್ರೆಸ್ ಅದಕ್ಕೆ ಸಹಕಾರ ನೀಡಿರಲಿಲ್ಲ. ಇದೀಗ ಈಗಿನ ಕಾಂಗ್ರೆಸ್ ಮತ್ತು‌ ಅದರ ಮಿತ್ರಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಹಿಂದಿನಿಂದಲೂ ಕಾಂಗ್ರೆಸ್ ಮಹಿಳಾ ವಿರೋಧಿಯೇ ಆಗಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೆಸ್ಕಾಂ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 10 ಪೈಸೆ ಮರುಪಾವತಿ
ಕಾರ್ಮಿಕರ ಭದ್ರತೆಗೆ ಕೇಂದ್ರ ಸರ್ಕಾರ ಬದ್ಧ: ಸಚಿವೆ ಶೋಭಾ ಕರಂದ್ಲಾಜೆ