ಜಿಲ್ಲಾ ಬಿಜೆಪಿ ಪಾಂಚಜನ್ಯ ಕಚೇರಿಯಲ್ಲಿ 44ನೇ ಭಾರತೀಯ ಜನತಾ ಪಾರ್ಟಿ ಸಂಸ್ಥಾಪನಾ ದಿನಾಚರಣೆ
ಭಾರತೀಯ ಜನತಾ ಪಕ್ಷ ಹಿರಿಯರ ಮಾರ್ಗದರ್ಶನದಲ್ಲಿ ಅನೇಕ ತ್ಯಾಗಮಯಿಗಳಿಂದ, ತತ್ತ್ವ ಸಿದ್ಧಾಂತದ ಮೇಲೆ ಕಟ್ಟಿದ ರಾಜಕೀಯ ಪಕ್ಷವಾಗಿ ದೇಶದಲ್ಲಿ ಬೆಳೆದಿದೆ ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ಪುಷ್ಪರಾಜ್ ಹೇಳಿದರು.
ಜಿಲ್ಲಾ ಬಿಜೆಪಿ ಪಾಂಚಜನ್ಯ ಕಚೇರಿಯಲ್ಲಿ ಶನಿವಾರ ನಡೆದ 44ನೇ ಭಾರತೀಯ ಜನತಾ ಪಾರ್ಟಿಯ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಪಂಡಿತ್ ಜವಾಹರಲಾಲ್ ನೆಹರುರವರ ಸರ್ಕಾರದಲ್ಲಿ ಕೈಗಾರಿಕಾ ಮಂತ್ರಿಗಳಾಗಿದ್ದ ಡಾ. ಶ್ಯಾಮಪ್ರಸಾದ ಮುಖರ್ಜಿ ಕಾಶ್ಮೀರದ ವಿಷಯದ ಬಗ್ಗೆ ನೆಹರುರವರ ಅಭಿಪ್ರಾಯ ಭೇದ ಬಂದಾಗ ಮುಖರ್ಜಿಯವರು ಮಂತ್ರಿ ಮಂಡಲಕ್ಕೆ ರಾಜೀನಾಮೆ ನೀಡಿ, 1951ರಲ್ಲಿ ದೆಹಲಿಯಲ್ಲಿ ದೇಶ ಭಕ್ತರನ್ನು ಒಳಗೊಂಡ ಹೊಸ ರಾಜಕೀಯ ಪಕ್ಷ ಭಾರತೀಯ ಜನ ಸಂಘವನ್ನು ಪ್ರಾರಂಭಿಸಿದರು ಎಂದರು.ಭಾರತೀಯ ಜನಸಂಘ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಇಂದು ಲಕ್ಷಾಂತರ ಕಾರ್ಯಕರ್ತರು ಪಕ್ಷಕ್ಕಾಗಿ ತಮ್ಮ ಸೇವೆ ಮುಡಿಪಾಗಿಟ್ಟಿದ್ದಾರೆ. ಭದ್ರವಾದ ದೇಶ ಕಟ್ಟುವಲ್ಲಿ ಯುವಕರ ಪಾತ್ರ ಬಹಳ ಮುಖ್ಯವಾಗಿದೆ. ಡಾ. ಶ್ಯಾಮಪ್ರಸಾದ ಮುಖರ್ಜಿ ಹಾಗೂ ದೀನದಯಾಳ ಉಪಾಧ್ಯಯರ ತತ್ತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ದೇಶದ ಅಭಿವದ್ಧಿಯಲ್ಲಿ ಒಗ್ಗೂಡಿ ಕೆಲಸ ಮಾಡೋಣ ಎಂದು ಕರೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್‍ಶೆಟ್ಟಿ ಮಾತನಾಡಿ, ಪಕ್ಷಕಿಂತ ದೇಶದ ಅಭಿವೃದ್ಧಿಯೇ ಮೊದಲು ಎಂಬ ಮೂಲ ಸಿದ್ಧಾಂತಕ್ಕೆ ಕಾರ್ಯಕರ್ತರು ಬದ್ಧವಾಗಿ ಶ್ರಮಸುತ್ತಿದ್ದಾರೆ. ಈ ಮೂಲಕ ಬಿಜೆಪಿ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ಪಕ್ಷವನ್ನು ಕಟ್ಟಿದ ಹಿರಿಯ ನಾಯಕರನ್ನು ಸ್ಮರಿಸುತ್ತಾ ಪಕ್ಷವನ್ನು ಮತ್ತಷ್ಟು ಸಂಘಟಿಸೋಣ ಎಂದು ಹೇಳಿದರು.
ಬಿಜೆಪಿ ಚಿತ್ರದುರ್ಗ ಪ್ರಭಾರಿ ಸಿ.ಆರ್.ಪ್ರೇಮ್‍ಕುಮಾರ್ ಮಾತನಾಡಿ, ಕೆಲವು ಪಕ್ಷಗಳಿಂದ ದೇಶ ಅಧೋಗತಿಗೆ ತಲುಪುವ ಸ್ಥಿತಿಯಲ್ಲಿದ್ದಾಗ ಶ್ಯಾಮ್ ಪ್ರಸಾದ್ ಮುಖರ್ಜಿ, ಅಟಲ್ ಬಿಹಾರಿ ವಾಜಪೇಯಿ, ಮುರಳಿ ಮನೋಹರ ಜೋಷಿ, ಲಾಲ್ ಕೃಷ್ಣ ಅಡ್ವಾಣಿ ನಾಯಕರ ಶ್ರಮದಿಂದ ಬಿಜೆಪಿ ಅಧಿಕಾರಕ್ಕೆ ಬಂತು. ಕಾಲಕ್ರಮೇಣ ದೇಶವನ್ನು ಪ್ರಧಾನಿ ಮೋದಿ ಉತ್ತಮ ಹಾದಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದರು.