ಕನ್ನಡಪ್ರಭ ವಾರ್ತೆ ಆಳಂದ
ದೇಶದಲ್ಲಿ ಮೊದಲ ಹಂತದ ಚುನಾವಣೆ ಮತದಾನದ ಬಳಿಕ ಬಿಜೆಪಿಗೆ ಸೋಲಿನ ಭೀತಿ ಆವರಿಸಿದ್ದು, ಪ್ರಧಾನಿಯಾದಿಯಾಗಿ ಎಲ್ಲರೂ ಸುಳ್ಳು ಹೇಳುತ್ತಿದ್ದಾರೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದ್ದಾರೆ.ಕಲಬುರ್ಗಿ ಜಿಲ್ಲೆ ಆಳಂದದಲ್ಲಿಂದು ನಡೆದ ಪ್ರಜಾಧ್ವನಿ -2 ಚುನಾವಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೋಲಿನ ಭಯ ಬಂದಿರುವ ಕಾರಣದಿಂದಲೇ ನಮ್ಮ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಇಲ್ಲದ ವಿಷಯಗಳ ಬಗ್ಗೆಯೂ ಬಿಜೆಪಿಯವರು ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಸಮ ಸಮಾಜದ ಕಲ್ಪನೆಯನ್ನು ಕಟ್ಟಿಕೊಟ್ಟ ಬಸವಾದಿ ಶರಣರ ಈ ನಾಡಿನಲ್ಲಿ ಕೋಮುವಾದಿಗಳನ್ನು ತಿರಸ್ಕರಿಸಿ ಎಂದು ಕರೆ ನೀಡಿದ ಈಶ್ವರ ಖಂಡ್ರೆ, ಇದು ಭಾವನೆ ಮತ್ತು ಬದುಕಿನ ನಡುವೆ ನಡೆಯುತ್ತಿರುವ ಚುನಾವಣೆಯಾಗಿದೆ. ಬೀದರ್ ಲೋಕಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಿಸುವಂತೆ ಮನವಿ ಮಾಡಿದರು.ಬಿಜೆಪಿ ಕಳೆದ 10 ವರ್ಷದಿಂದ ಬರಿ ಸುಳ್ಳುಗಳನ್ನೇ ಹೇಳಿ ಜನತೆಯನ್ನು ನಂಬಿಸಿ ಮೋಸ ಮಾಡುತ್ತಿದೆ. ಕಳೆದ 10 ವರ್ಷದಲ್ಲಿ ರೈತರ ಆದಾಯ ದುಪ್ಪಟ್ಟಾಗಲಿಲ್ಲ, ರೈತರಿಗೆ ಬೆಳೆ ಪರಿಹಾರವೂ ಸಿಗುತ್ತಿಲ್ಲ, ಯುವಕರಿಗೆ ಉದ್ಯೋಗವೂ ದೊರಕುತ್ತಿಲ್ಲ, ಸರ್ವರಿಗೂ ಸೂರು ಸಿಗಲಿಲ್ಲ. ಬರೀ ಸುಳ್ಳು ಹೇಳಿ ಜನರಿಗೆ ಮಂಕು ಬೂದಿ ಎರಚುತ್ತಿದ್ದಾರೆ ಎಂದರು.
ಎರಡು ಬಾರಿ ಸಂಸತ್ ಸದಸ್ಯರಾಗಿರುವ ಭಗವಂತ ಖೂಬಾ ನಿಮ್ಮ ಕ್ಷೇತ್ರಕ್ಕೆ ಬಂದಿದ್ದಾರಾ, ಕೈಗಾರಿಕೆ ಸ್ಥಾಪಿಸಿದ್ದಾರಾ, ಉದ್ಯೋಗ ಸೃಷ್ಟಿಸಿದ್ದಾರಾ, ಮನೆ ಕೊಡಿಸಿದ್ದಾರಾ. ನಿಮ್ಮ ಕ್ಷೇತ್ರದ ಅಭಿವೃದ್ಧಿಗೆ ಏನು ಕೊಡುಗೆ ನೀಡಿದ್ದಾರೆ ಎಂದು ಕೇಳಿದಾಗ, ಸೇರಿದ್ದ ಸಹಸ್ರಾರು ಜನರು ಏನೂ ಇಲ್ಲ ಎಂದರು.ಆಳಂದ ಸೇರಿದಂತೆ ಬೀದರ್ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಕಾಂಗ್ರೆಸ್ ಗೆಲ್ಲಿಸುವಂತೆ ಮತ್ತು ಸಾಗರ್ ಈಶ್ವರ್ ಖಂಡ್ರೆ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು. ಸಾಗರ್ ಗೆದ್ದು ಸಂಸತ್ ಸದಸ್ಯರಾದರೂ 24x7 ಜನತೆಯ ಸೇವೆ ಮಾಡಲಿದ್ದಾರೆ. ರಾಜಕೀಯದಲ್ಲಿ ಹೊಸ ಚಿಂತನೆ, ಹೊಸ ಆಲೋಚನೆ, ಹೊಸ ದೃಷ್ಟಿಕೋನ ಬರಬೇಕು. ಈ ಹಿನ್ನೆಲೆಯಲ್ಲಿ ಹಸ್ತದ ಗುರುತಿಗೆ ಮತ ನೀಡಿ ಎಂದು ಮನವಿ ಮಾಡಿದರು.