ದೇಶದಲ್ಲಿ ಬಿಜೆಪಿಯೇ ಅಪಾಯದಲ್ಲಿದೆ: ಹರಿಪ್ರಸಾದ

KannadaprabhaNewsNetwork |  
Published : May 6, 2024 12:30 AM ISTUpdated : May 6, 2024 12:31 AM IST
ಸುದ್ದಿಗೋಷ್ಠಿಯಲ್ಲಿ ಬಿ.ಕೆ. ಹರಿಪ್ರಸಾದ ಮಾತನಾಡಿದರು. | Kannada Prabha

ಸಾರಾಂಶ

ನಾಗಪುರದಲ್ಲಿರುವ ಆರ್.ಎಸ್.ಎಸ್. ಸೂತ್ರದಾರರು ಸಂವಿಧಾನದ ಬದಲಾವಣೆಯನ್ನು ಮೌನವಾಗಿಯೇ ಮಾಡೋಣ ಬಹಿರಂಗವಾಗಿ ಬೇಡ ಎಂದು ಪತ್ರಿಕೆಗಳ ಮೂಲಕ ಹೇಳಿಕೆ ನೀಡುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಪ್ರಸಾದ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಬಿಜೆಪಿಯವರು ದೇಶದಲ್ಲಿ ಹಿಂದೂಗಳು ಅಪಾಯದಲ್ಲಿದ್ದಾರೆ ಎಂದು ಪದೇ ಪದೇ ಹೇಳಿಕೆ ನೀಡಿ ಜನರ ಮನಸ್ಸನ್ನು ಕದಡುವ ಕಾರ್ಯ ಮಾಡುತ್ತಿದ್ದಾರೆ. ಭಾರತದಲ್ಲಿ ಹಿಂದೂ-ಮುಸ್ಲಿಮರು ಚೆನ್ನಾಗಿಯೇ ಇದ್ದಾರೆ. ಅಪಾಯದಲ್ಲಿರುವುದು ಬಿಜೆಪಿ ಮಾತ್ರ ಎಂದು ವಿಪ ಸದಸ್ಯ ಬಿ.ಕೆ. ಪ್ರಸಾದ ಆರೋಪಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಾಧನೆ ಬಗ್ಗೆ ಹೇಳಲು ಏನೂ ಇಲ್ಲದೇ ಜಾತಿ, ಧರ್ಮಗಳ ಮೇಲೆ ಮತಕೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಮೋದಿ ಅಕ್ಕಪಕ್ಕದಲ್ಲಿದ್ದವರೇ ಹೇಳಿಕೆ ನೀಡಿದ್ದಾರೆ. ಪ್ರಧಾನಿಗಳ ಆರ್ಥಿಕ ಸಲಹೆಗಾರರೇ ಈ ಹೇಳಿಕೆ ನೀಡಿದ್ದಾರೆ. ಇನ್ನು ಸಂಸದ ಅನಂತಕುಮಾರ ಹೆಗಡೆ ಸೇರಿದಂತೆ ಹಲವರು ಸಂವಿಧಾನ ಬದಲಾವಣೆಯ ಕುರಿತು ಮಾತನಾಡುತ್ತಾರೆ. ನಾಗಪುರದಲ್ಲಿರುವ ಆರ್.ಎಸ್.ಎಸ್. ಸೂತ್ರದಾರರು ಸಂವಿಧಾನದ ಬದಲಾವಣೆಯನ್ನು ಮೌನವಾಗಿಯೇ ಮಾಡೋಣ ಬಹಿರಂಗವಾಗಿ ಬೇಡ ಎಂದು ಪತ್ರಿಕೆಗಳ ಮೂಲಕ ಹೇಳಿಕೆ ನೀಡುತ್ತಾರೆ ಎಂದರು.

ಸುಳ್ಳಿನ ಫ್ಯಾಕ್ಟರಿ:

ನಮ್ಮ ಪ್ರಣಾಳಿಕೆಯಲ್ಲಿ ಧರ್ಮಾಧಾರಿತ ಮೀಸಲಾತಿ ಕೊಡುವುದಾಗಿ ನಾವು ಎಲ್ಲಿಯೂ ಹೇಳಿಲ್ಲ. ಹಾಗೇನಾದರೂ ಇರುವುದು ಸಾಬೀತು ಪಡಿಸಿದ್ದೇ ಆದಲ್ಲಿ ನಾನು ಬಿಜೆಪಿಯವರ ಗುಲಾಮನಾಗುವೆ. ಬಿಜೆಪಿಯವರದ್ದು ಬರೀ ಸುಳ್ಳಿನ ಫ್ಯಾಕ್ಟರಿ, ಸುಳ್ಳು ಹೇಳಿ ಹೇಳಿ ಅಧಿಕಾರಕ್ಕೆ ಬಂದಿದ್ದಾರೆ ಎಂದರು.

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಪ್ರಕರಣದ ಕುರಿತು ನಾನು ಯಾವುದೇ ಟೀಕೆ, ಟಿಪ್ಪಣಿ ಮಾಡುವುದಿಲ್ಲ. ಈಗಾಗಲೇ ಎಸ್‌ಐಟಿಯಿಂದ ತನಿಖೆ ನಡೆಯುತ್ತಿದೆ. ವರದಿ ಬಂದ ನಂತರ ಮಾತನಾಡುವುದು ಒಳಿತು. ಆದರೆ, ಕರ್ನಾಟಕದ ದುರಂತ ಪೆನ್‌ಡ್ರೈವ್ ಹೊರಗೆ ಬಂದಿದೆ ಎಂದರು.

ಈ ವೇಳೆ ನಗರ ಜಿಲ್ಲಾಧ್ಯಕ್ಷ ಅಲ್ತಾಫ ಹಳ್ಳೂರ, ಎಫ್‌.ಎಚ್‌. ಜಕ್ಕಪ್ಪನವರ, ಮೋಹನ ಹಿರೇಮನಿ, ವಸಂತ ಲದ್ವಾ ಸೇರಿದಂತೆ ಹಲವರಿದ್ದರು.

PREV