ಕನ್ನಡಪ್ರಭ ವಾರ್ತೆ ಬೆಳಗಾವಿಸವದತ್ತಿ ಕ್ಷೇತ್ರದಾದ್ಯಂತ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಶನಿವಾರ ಭರ್ಜರಿ ಪ್ರಚಾರ ಕೈಗೊಂಡರು. ಮುನವಳ್ಳಿ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಬಳಿಕ ಕಿಟಧಾಳ, ಅರಟಗಲ್ ಹಾಗೂ ಬಸರಗಿ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್ ಪರ ಮತ ಯೋಚಿಸಿದರು.
ಮೇ.15 ರಿಂದ 21ರವರೆಗೆ ನಡೆಯುವ ಅರಟಗಲ್ ಗ್ರಾಮದ ಗ್ರಾಮದೇವತೆ ಜಾತ್ರಾ ಮಹೋತ್ಸವದಲ್ಲಿ ಒಂದು ದಿನ ಅನ್ನ ದಾಸೋಹ ನೀಡುವುದಾಗಿ ಗ್ರಾಮಸ್ಥರಿಗೆ ಸಚಿವರಿಗೆ ಭರವಸೆ ನೀಡಿದರು.
ಬಸರಗಿ ಗ್ರಾಮದಲ್ಲಿ ಗ್ರಾಮಸ್ಥರನ್ನು ಭೇಟಿಯಾಗಿ ಮತ ಯಾಚಿಸಿದರು. 2014ರ ಚುನಾವಣೆಯಲ್ಲಿ ನಾನು ಸೋತ ಕ್ಷೇತ್ರದಲ್ಲೆ ಮಗನ ಮೂಲಕ ಗೆಲುವು ಸಾಧಿಸಬೇಕು. ಬೆಳಗಾವಿ ಕ್ಷೇತ್ರವನ್ನು ಕಾಂಗ್ರೆಸ್ ಮರಳಿ ವಶಕ್ಕೆ ಪಡೆಯಬೇಕು. ಇದಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಿದ್ದು, ಕಾರ್ಯಕರ್ತರ ಉತ್ಸಾಹ ನೋಡಿದರೇ ಕಾಂಗ್ರೆಸ್ ಗೆಲುವು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಪ್ರಧಾನಿ ನರೇಂದ್ರ ಮೋದಿ ಕೇವಲ ಆಶ್ವಾಸನೆಗಷ್ಟೆ ಸೀಮಿತವಾಗಿದ್ದರೇ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದಂತೆ ನಡೆಯುವ ವ್ಯಕ್ತಿ. ಸದಾ ಬಡವರ ಪರ ಯೋಚಿಸುವ ವ್ಯಕ್ತಿ. ಬೆಳಗಾವಿಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಿಸಿ, ಸಿದ್ದರಾಮಯ್ಯನವರ ಕೈಬಲಪಡಿಸೋಣ ಎಂದು ಮನವಿ ಮಾಡಿದರು.
ಈ ವೇಳೆ ಸವದತ್ತಿ ಶಾಸಕ ವಿಶ್ವಾಸ್ ವೈದ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ.ಟೋಪೋಜಿ, ಉಮೇಶ್ ಬಾಳಿ, ಮಹಾರಾಜ ಗೌಡರು, ಶಿವಾನಂದ ಪಟ್ಟಣಶೆಟ್ಟಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.