ರಾಜ್ಯದಲ್ಲಿ 120 ಅಲೆಮಾರಿ ಸಮುದಾಯಗಳು ಈಗಲೂ ಭಿಕ್ಷಾಟನೆ ಸೇರಿದಂತೆ ಸಣ್ಣಪುಟ್ಟ ಕಸಬು ಮಾಡುತ್ತಿವೆ.
ಹೊಸಪೇಟೆ: ಈ ಬಾರಿ ರಾಜ್ಯದ ಅಲೆಮಾರಿ, ಅರೆ ಅಲೆಮಾರಿ ಸಮುದಾಯವು ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಅಲೆಮಾರಿ ಸಮುದಾಯದ ಮುಖಂಡ ಲೋಹಿತ್ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯಕ್ಕೆ ಕಳೆದ 10 ವರ್ಷದಲ್ಲಿ ಬಿಜೆಪಿ ಆತ್ಮವಿಶ್ವಾಸ ತುಂಬಿದೆ. ರಾಜ್ಯದಲ್ಲಿ 120 ಅಲೆಮಾರಿ ಸಮುದಾಯಗಳು ಈಗಲೂ ಭಿಕ್ಷಾಟನೆ ಸೇರಿದಂತೆ ಸಣ್ಣಪುಟ್ಟ ಕಸಬು ಮಾಡುತ್ತಿವೆ. ಈ ಸಮುದಾಯಗಳಿಗೆ ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆ ಸೇರಿದಂತೆ ಹಲವು ಯೋಜನೆಗಳ ಲಾಭವಾಗಿದೆ. ಈ ಅಲೆಮಾರಿಗಳ ಗುಡಾರ, ಗುಡಿಸಲು ಮಾಯವಾಗಿ ಅವರಿಗೆ ಸ್ವಂತದೊಂದು ಸೂರು ಒದಗಿಸಲು ಮತ್ತೊಮ್ಮೆ ಮೋದಿ ಅವರು ಪ್ರಧಾನಿ ಆಗಬೇಕು ಎಂದರು.
ಅಲೆಮಾರಿ ಸಮುದಾಯದ ಜನರು ಸ್ವಾಭಿಮಾನಿಗಳು, ಸಣ್ಣಪುಟ್ಟ ಕಸಬು, ಭಿಕ್ಷಾಟನೆ ಮಾಡುತ್ತಾರೆ. ಆದರೆ, ಪೊಲೀಸರು ಬ್ರಿಟಿಷ್‌ರಂತೆ ಅವರ ಮೇಲೆ ಕಳ್ಳತನದ ಸುಳ್ಳು ಆರೋಪ ಹೊರಿಸಿ ಜೈಲಿಗಟ್ಟುವುದು ಸರಿಯಲ್ಲ. ಇಂತಹ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಿವೆ. ಇದಕ್ಕೆ ಕಡಿವಾಣ ಬಿದ್ದು, ಅವರು ಕೂಡ ನಾಗರಿಕ ಸಮಾಜದಲ್ಲಿ ಬದುಕು ನಡೆಸಬೇಕು. ಇದಕ್ಕಾಗಿ ಬಿಜೆಪಿ ಈಗಾಗಲೇ ಸಮಾಜವನ್ನು ಗುರುತಿಸಿದೆ. ಸಮಾಜದ ಅಭಿವೃದ್ಧಿಗಾಗಿ ಸಮಗ್ರ ಸಮೀಕ್ಷೆಯೂ ನಡೆಯಬೇಕಿದೆ. 2023ರ ಫೆಬ್ರವರಿಯಲ್ಲಿ ರಾಜ್ಯದಲ್ಲಿ ಎಸ್ಸಿ, ಎಸ್ಟಿ ಅಲೆಮಾರಿ ಅಭಿವೃದ್ಧಿ ನಿಗಮ ಕೂಡ ಸ್ಥಾಪಿಸಲಾಗಿದೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.