ರಾಹುಲ್ ಪ್ರಧಾನಿ ಆಗಲೆಂದು ಹುಚ್ಚನೂ ಬಯಸಲ್ಲ: ಗೋವಿಂದ ಕಾರಜೋಳ

KannadaprabhaNewsNetwork | Published : May 6, 2024 12:30 AM

ಸಾರಾಂಶ

ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ನರೇಂದ್ರ ಮೋದಿಯವರು ಪ್ರಧಾನಿಯಾಗಲಿ ಎಂದು ದೇಶದ ಪ್ರತಿಯೊಬ್ಬರೂ ಬಯಸುತ್ತಾರೆ. ರಾಹುಲ್ ಗಾಂಧಿ ಪ್ರಧಾನಿ ಆಗಲಿ ಎಂದು ಹುಚ್ಚನೂ ಬಯಸುವುದಿಲ್ಲ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ಕನ್ನಡಪ್ರಭವಾರ್ತೆ ಗುಳೇದಗುಡ್ಡ

ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ನರೇಂದ್ರ ಮೋದಿಯವರು ಪ್ರಧಾನಿಯಾಗಲಿ ಎಂದು ದೇಶದ ಪ್ರತಿಯೊಬ್ಬರೂ ಬಯಸುತ್ತಾರೆ. ರಾಹುಲ್ ಗಾಂಧಿ ಪ್ರಧಾನಿ ಆಗಲಿ ಎಂದು ಹುಚ್ಚನೂ ಬಯಸುವುದಿಲ್ಲ. ವಿದ್ಯಾವಂತರಾದ ನೀವು ಹೇಗೆ ರಾಹುಲ್ ಪ್ರಧಾನಿಯಾಗಲಿ ಎಂದು ಬಯಸುತ್ತೀರಿ ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಪ್ರಶ್ನಿಸಿದರು.

ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಪ್ರಚಾರ ನಿಮಿತ್ತ ಭರ್ಜರಿ ರೋಡ್ ಶೋ ನಡೆಸಿದ ಬಳಿಕ ಮಾತನಾಡಿದ ಅವರು, ಮೋದಿಯವರು ಕಳೆದ ಹತ್ತು ವರ್ಷಗಳಲ್ಲಿ ಯಾವುದೇ ಆರೋಪಗಳಿಲ್ಲದೆ ದಕ್ಷ ಹಾಗೂ ಪ್ರಾಮಾಣಿಕ ಆಡಳಿತ ನೀಡಿದ ಪ್ರಧಾನಿಯಾಗಿದ್ದಾರೆ. ರಾಜ್ಯದಲ್ಲಿ ಎರಡು ದೊಡ್ಡ ಪಕ್ಷಗಳು ಒಂದಾದ ಪರಿಣಾಮ ರಾಜ್ಯದ 28 ಕ್ಷೇತ್ರಗಳನ್ನು ಬಿಜೆಪಿ ಬಾಚಿಕೊಳ್ಳಲಿದೆ. ನರೇಂದ್ರ ಮೋದಿಯವರ ಜನಪರ ಕಾರ್ಯ ಯೋಜನೆಗಳು ಗದ್ದಿಗೌಡರ ಅನುಕೂಲವಾಗಲಿವೆ ಎಂದು ಹೇಳಿದರು.

ಕೊರೊನಾ ಸಂದರ್ಭದಲ್ಲಿ ದೇಶ ಒಳಗೊಂಡು ವಿಶ್ವಕ್ಕೆ ಕೋವಿಡ್ ಲಸಿಕೆ ವಿತರಿಸಿ ಇಡೀ ಪ್ರಪಂಚವೇ ಮೆಚ್ಚುವ ರೀತಿಯಲ್ಲಿ ಆಡಳಿತ ನಡೆಸಿದ್ದಾರೆ. ಹಾಗಾಗಿ ಇಡೀ ದೇಶ ಮೋದಿಯವರ ಋಣ ತೀರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಬಿಜೆಪಿಯನ್ನು ಬೆಂಬಲಿಸಿ ಮೋದಿ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಶಾಸಕ ರಾಜಶೇಖರ ಶೀಲವಂತ, ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ, ಮುಖಂಡರಾದ ಸಂಪತ್ ರಾಠಿ, ಕಮಲು ಮಾಲಪಾಣಿ, ಸಂಜೀವ ಕಾರಕೂನ, ಅಶೋಕ ಹೆಗಡೆ, ವಸಂತ ದೋಂಗಡೆ, ವಿಷ್ಣು ಬಳಿಗೇರ, ಮಹೇಶ ಬಿಜಾಪೂರ, ಸಂತೋಷ ನಾಯನೇಗಲಿ, ಭಾಗ್ಯಾ ಉದ್ನೂರ, ಸಂಗಮೇಶ ಕೋಡಬಳಿ, ಪ್ರಕಾಶ ವಾಳದುಂಕಿ, ಪ್ರಶಾಂತ ಜವಳಿ, ಪ್ರಕಾಶ ಕಾವಡೆ, ರಾಜು ಚಿತ್ತರಗಿ, ಸಚಿನ ರಾಂಪೂರ, ಭುವನೇಶ ಪೂಜಾರ, ಸವಿತಾ ಉಂಕಿ, ವಿನೋದ ಗಾಜಿ, ಶಿವು ಬಾದೋಡಗಿ, ಮುತ್ತು ಚಿಕ್ಕನರಗುಂದ, ನಾಗರತ್ನಾ ಎಣ್ಣಿ ಸೇರಿದಂತೆ ಇತರರು ಇದ್ದರು.

ಪಟ್ಟಣದ ಸಾಲೇಶ್ವರ ದೇವಸ್ಥಾನದಿಂದ ರೋಡ್ ಶೋ ಆರಂಭಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ರೋಡ್ ಶೋ ಸಂದರ್ಭದಲ್ಲಿ ಅಪಾರ ಸಂಖ್ಯೆಯ ಯುವಕರು, ಯುವತಿಯರು ತಲೆಗೆ ಕೇಸರಿ ಪೇಟಾ, ಶಾಲು ಧರಿಸಿ ನೃತ್ಯ ಮಾಡಿ ನೋಡುಗರ ಗಮನ ಸೆಳೆದರು. ಇಡೀ ಪಟ್ಟಣ ಕೇಸರಿಮಯವಾಗಿತ್ತು.

Share this article