ಭ್ರಷ್ಟರೆಲ್ಲರೂ ಬಿಜೆಪಿ ಸೇರಿ ಬಿಟ್ಟರೆ ಅವರು ಮಾಡಿದ ಪಾಪ, ಕರ್ಮಗಳೆಲ್ಲವೂ ಕರಗಿ ಹೋಗಿ ಗಂಗಾಸ್ನಾನ ಮಾಡಿದ ಪುಣ್ಯ ಪ್ರಾಪ್ತಿಯಾಗುತ್ತದೆಯೇ? ತನಿಖಾ ಸಂಸ್ಥೆಗಳನ್ನೆಲ್ಲ ತನ್ನ ಸ್ವಾರ್ಥಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಿಜೆಪಿ ವಿರೋಧ ಪಕ್ಷದ ನಾಯಕರಿಗೆ ಕಿರುಕುಳ ನೀಡಿ, ಶಕ್ತಿ ಕುಂದಿಸಲೆತ್ನಿಸುತ್ತಿದ್ದು, ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಶಾಸಕ ಶ್ರೀನಿವಾಸ ಮಾನೆ ವಾಗ್ದಾಳಿ ನಡೆಸಿದರು.
ಹಾನಗಲ್ಲ: ಭ್ರಷ್ಟರೆಲ್ಲರೂ ಬಿಜೆಪಿ ಸೇರಿ ಬಿಟ್ಟರೆ ಅವರು ಮಾಡಿದ ಪಾಪ, ಕರ್ಮಗಳೆಲ್ಲವೂ ಕರಗಿ ಹೋಗಿ ಗಂಗಾಸ್ನಾನ ಮಾಡಿದ ಪುಣ್ಯ ಪ್ರಾಪ್ತಿಯಾಗುತ್ತದೆಯೇ? ತನಿಖಾ ಸಂಸ್ಥೆಗಳನ್ನೆಲ್ಲ ತನ್ನ ಸ್ವಾರ್ಥಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಿಜೆಪಿ ವಿರೋಧ ಪಕ್ಷದ ನಾಯಕರಿಗೆ ಕಿರುಕುಳ ನೀಡಿ, ಶಕ್ತಿ ಕುಂದಿಸಲೆತ್ನಿಸುತ್ತಿದ್ದು, ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಶಾಸಕ ಶ್ರೀನಿವಾಸ ಮಾನೆ ವಾಗ್ದಾಳಿ ನಡೆಸಿದರು.ತಾಲೂಕಿನ ಕಂಚಿನೆಗಳೂರು ಗ್ರಾಮದಲ್ಲಿ ನಡೆದ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅರವಿಂದೋ ಫಾರ್ಮಾ ಎನ್ನುವ ಔಷಧ ಕಂಪನಿಯ ನಿರ್ದೇಶಕ ಪಿ. ಶರತ್‌ಚಂದ್ರ ರೆಡ್ಡಿ ಎಂಬುವರ ಹೇಳಿಕೆ ಆಧರಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಜೈಲಿಗೆ ಕಳುಹಿಸಲಾಗಿದೆ. ಇದೇ ಪಿ. ಶರತ್‌ಚಂದ್ರ ರೆಡ್ಡಿ ಅವರನ್ನು ಕಳೆದ ವರ್ಷ ನ. ೧೦ರಂದು ಬಂಧಿಸಲಾಗಿತ್ತು. ನ. ೧೫ ರಂದು ಅರವಿಂದೋ ಫಾರ್ಮಾ ೫ ಕೋಟಿ ರು. ಎಲೆಕ್ಟ್ರೋಲ್ ಬಾಂಡ್ ಖರೀದಿಸಿದೆ. ಆ ಬಾಂಡನ್ನು ಬಿಜೆಪಿ ನ. ೨೧ರಂದು ನಗದಾಗಿಸಿಕೊಂಡಿದೆ. ಅರವಿಂದ ಕೇಜ್ರಿವಾಲ್ ವಿರುದ್ಧ ಯಾವುದೇ ಪುರಾವೆಗಳಿಲ್ಲದಿದ್ದರೂ ಅವರನ್ನು ಬಂಧಿಸಲಾಗಿದೆ. ನಿಜವೆಂದರೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಜೈಲಿಗೆ ಕಳಿಸಬೇಕಿತ್ತು. ಸಾಕ್ಷಿ, ಪುರಾವೆಗಳಿದ್ದರೂ ಮೌನ ವಹಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಶ್ರೀನಿವಾಸ ಮಾನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಸಾಮರಸ್ಯ, ಪ್ರೀತಿ, ವಿಶ್ವಾಸದ ಪರಿಕಲ್ಪನೆ ಹೊಂದಿರುವ ಸರ್ಕಾರದ ಅಗತ್ಯವಿದೆ. ಸ್ವಾರ್ಥ ಸಾಧನೆಗೆ ಸಮಾಜ ಒಡೆದು ಆಳುವ ಸರ್ಕಾರವನ್ನು ಜನ ತಿರಸ್ಕರಿಸಬೇಕಿದೆ. ಪ್ರತಿ ಕುಟುಂಬಗಳನ್ನೂ ಆರ್ಥಿಕವಾಗಿ ಸಬಲರನ್ನಾಗಿಸಿ ಸಮೃದ್ಧ, ಸಶಕ್ತ, ಸದೃಢ ಭಾರತ ನಿರ್ಮಿಸಬೇಕಿದೆ. ಇದಕ್ಕಾಗಿ ಕಾಂಗ್ರೆಸ್ ಬೆಂಬಲಿಸಬೇಕಿದೆ. ಮುಂದಿನ ೪೦ ದಿನಗಳ ಕಾಲ ನಡೆಯಲಿರುವ ಬಿಜೆಪಿ ವಿರುದ್ಧದ ಹೋರಾಟದಲ್ಲಿ ಪ್ರತಿಯೊಬ್ಬರೂ ಭಾಗಿಗಳಾಗಬೇಕಿದೆ. ಈ ಹೋರಾಟದಲ್ಲಿ ದೇಶದ ಉತ್ತಮ ಭವಿಷ್ಯಕ್ಕಾಗಿ ಸಂವಿಧಾನ ಗೆಲ್ಲಬೇಕಿದ್ದು, ಬಿಜೆಪಿ ಸೋಲಬೇಕಿದೆ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಗ್ರಾಪಂ ಅಧ್ಯಕ್ಷೆ ರಾಧಾ ಇಂಗಳಕಿ, ತಾಪಂ ಮಾಜಿ ಸದಸ್ಯೆ ಶಕುಂತಲಾ ತಳವಾರ, ಮುಖಂಡರಾದ ವಿರೂಪಾಕ್ಷ ತಳವಾರ, ಕವಿತಾ ಬಾರ್ಕಿ, ಚೈತ್ರಾ ಭೈರಕ್ಕನವರ, ಅಬ್ದುಲ್‌ಖಾದರ ಮೂಲಿಮನಿ, ಖಾಜಾಸಾಬ ದ್ವಾರಳ್ಳಿ, ಹಸನಸಾಬ ಹೊಂಡದ, ಸನಾವುಲ್ಲಾ ಮುಲ್ಲಾ, ಮಹೇಶ ಗಿರಿಯಣ್ಣನವರ, ಶಶಿಧರ ಭೈರಕ್ಕನವರ, ಮಾಲತೇಶ ವರ್ದಿ, ರುದ್ರಗೌಡ ಹಕ್ಕಲಮನಿ, ಲಲಿತಾ ಪತ್ತಾರ, ಚನ್ನಬಸಪ್ಪ ಹಾವಣಗಿ ಈ ಸಂದರ್ಭದಲ್ಲಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.