ಕನ್ನಡಪ್ರಭ ವಾರ್ತೆ ಮೂಡಿಗೆರೆ
ದೇಶದ ಜನ ಎಚ್ಚೆತ್ತುಕೊಂಡಿದ್ದಾರೆ. ಬದಲಾವಣೆ ಬಯಸುತ್ತಿದ್ದಾರೆ. ಸಂಕಷ್ಟಗಳನ್ನು ಎದುರಿಸುತ್ತಿದ್ದ ಜನರಿಗೆ ಈಗ ಅರಿವಾಗಿದೆ. ಸುಳ್ಳು ಮಾರಾಟವಾಗವುದಿಲ್ಲ ಎಂಬುದು ಬಿಜೆಪಿಗೂ ಗೊತ್ತಾಗಿದೆ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದ್ದಾರೆ.ಮೂಡಿಗೆರೆಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರೆಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡುತ್ತಿರುವ ಬಿಜೆಪಿಯೇ ಈಗ ಗ್ಯಾರೆಂಟಿ ಯೋಜನೆಗಳನ್ನು ನಕಲು ಮಾಡುತ್ತಿದೆ. ಬಿಜೆಪಿಯ ಸುಳ್ಳಿನ ಸರಕುಗಳು ಈಗ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿಲ್ಲ. ಜನರು ಪ್ರಶ್ನೆ ಮಾಡಲು ಆರಂಭಿಸಿದ್ದಾರೆ. ಯೋಚಿಸಲು ಆರಂಭಿಸಿದ್ದಾರೆ. ರೈತರ ಸಾಲಮನ್ನಾ ಮಾಡಿದರೆ ಸರ್ಕಾರ ದೀವಾಳಿಯಾಗುತ್ತದೆ ಎನ್ನುವ ಬಿಜೆಪಿಗರು ಕಾರ್ಪೋರೆಟ್ ಕುಳಗಳ 11 ಲಕ್ಷ ಕೋಟಿ ರು. ಸಾಲ ಮನ್ನಾ ಮಾಡಿದರೆ ದೇಶ ದೀವಾಳಿ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಮಾತನಾಡಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗ್ಯಾರೆಂಟಿ ಯೋಜನೆ ಪಡೆದ ಮಹಿಳೆಯರು ಹಾದಿ ತಪ್ಪುತ್ತಾರೆ ಎಂದಿದ್ದಾರೆ, ಇದು ಅತ್ಯಂತ ನಾಚಿಕೆಗೇಡಿನ ಸಂಗತಿ, ಇದು ರಾಜ್ಯದ ಮಹಿಳೆಯರಿಗೆ ಮಾಡಿದ ಅವಮಾನ, ನಮ್ಮ ರಾಜ್ಯದ ಮಹಿಳೆಯರು ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. ಹುಂಡಿಗೂ ಹಣ ಹಾಕಿದ್ದಾರೆ, ಇದರಿಂದ ಅವರ ಮನಸ್ಸಿಗೂ ನೆಮ್ಮದಿ ಸಿಕ್ಕಿದೆ. ಕುಮಾರಸ್ವಾಮಿಯ ಈ ಹೇಳಿಕೆಗೆ ಇದೇ ತಿಂಗಳ 26ರಂದು ತಕ್ಕ ಉತ್ತರ ನೀಡಬೇಕಾಗಿದೆ ಎಂದು ಕರೆ ನೀಡಿದರು.ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಸೇರಿರುವ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಮಾತನಾಡಿ, ಬಿಜೆಪಿಯ ವೈಫಲ್ಯವನ್ನು ಕಂಡು, ಯುವ ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ. ದೇಶದ ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ಜನರು ಇಂದು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕಾದ ಅನಿವಾರ್ಯತೆ ಇದೆ ಎಂದರು.
ಉಡುಪಿ-ಚಿಕ್ಕಮಗಳೂರು ಲೋಕಸಭೆಯ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಈ ಹಿಂದೆಯೂ ಅವಕಾಶ ನೀಡಿದ್ದೀರಿ, ಆಗ ಅಲ್ಪ ಅವಧಿಯಲ್ಲಿಯೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವೆ. ಈಗ ಮತ ಕೇಳಲು ಹೋದಾಗ ಜನ ಅತ್ಯಂತ ಪ್ರೀತಿಯಿಂದ ಸ್ವಾಗತಿಸುತ್ತಿದ್ದಾರೆ. ಜನರು ಬದಲಾವನೆ ಬಯಸಿದ್ದಾರೆ. ಎಲ್ಲರೂ ಒಮ್ಮತದಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕಾದ ಅಗತ್ಯ ಎದುರಾಗಿದೆ ಎಂದರು.