ಕನ್ನಡಪ್ರಭ ವಾರ್ತೆ ವಿಜಯಪುರ
ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ಆಡಳಿತ ಹಾಗೂ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ನೀತಿ ಖಂಡಿಸಿ ಜಿಲ್ಲಾ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.ನಗರದ ಗಾಂಧಿ ವೃತ್ತದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ವರೆಗೆ ಜಿಲ್ಲಾ ಬಿಜೆಪಿ ಘಟಕದಿಂದ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು. ಪೆಟ್ರೋಲ್ ಡಿಸೈಲ್ ದರ ಏರಿಕೆಗೆ ಖಂಡನೆ ವ್ಯಕ್ತಪಡಿಸಿ ರಾಜ್ಯ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಲಾಯಿತು. ಮಹಾತ್ಮಾಗಾಂಧಿ ಚೌಕ್ ನಿಂದ ಡಾ.ಅಂಬೇಡ್ಕರ್ ವೃತ್ತದ ವರೆಗೆ ಬೈಕ್‌ಗೆ ಹಗ್ಗ ಕಟ್ಟಿ ಎಳೆದು ಅಣಕು ಪ್ರದರ್ಶನ ಮಾಡುವ ಮೂಲಕ ಇಂಧನ ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ವೇಳೆ ಮಾತನಾಡಿದ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್, ರಾಜ್ಯ ಸರ್ಕಾರ ಪೆಟ್ರೋಲ್, ಡಿಸೇಲ್ ದರ ಏರಿಕೆ ಮಾಡಿ ಜನರಿಗೆ ಬರೆ ಹಾಕುತ್ತಿದೆ. ಇದರಿಂದ ಅವಶ್ಯಕ ವಸ್ತುಗಳ ಬೆಲೆ ಏರಿಕೆಯಾಗುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಕೂಡಲೇ ತೈಲ ಬೆಲೆ ಏರಿಕೆ ಕಡಿಮೆ ಮಾಡಬೇಕೆಂದು ಆಗ್ರಹಿಸಿದರು.ಮುಖಂಡ ಕಾಸುಗೌಡ ಬಿರಾದಾರ ಮಾತನಾಡಿ, ರಾಜ್ಯ ಸರ್ಕಾರಕ್ಕೆ ಬಡವರು ಹಾಗೂ ಮಧ್ಯಮ ವರ್ಗದವರ ಮೇಲೆ ಕಾಳಿಜಿಯೇ ಇಲ್ಲ. ತಾವು ನೀಡಿರುವ ಐದು ಗ್ಯಾರಂಟಿಗಳನ್ನು ಸರಿದೂಗಿಸಲು ಜನರ ಜೀವ ಹಿಂಡುತ್ತಿದೆ. ಪ್ರತಿದಿನ 300ರಿಂದ 500ರಷ್ಟು ದುಡಿದು ಜೀವನ ಮಾಡುವ ಕುಟುಂಬಗಳಿಗೆ ಇದು ಹೊರೆಯಾಗಲಿದೆ. ತಕ್ಷಣ ಬೆಲೆ ಏರಿಕೆಯನ್ನು ಹಿಂಪಡೆದು ಬಡವರು ಮತ್ತು ಮಧ್ಯಮ ವರ್ಗದವರಿಗೆ ಅನುಕೂಲ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಮುಖಂಡರಾದ ಸುರೇಶ ಬಿರಾದಾರ, ಚಂದ್ರಶೇಖರ ಕವಟಗಿ, ಮಹಾನಗರ ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ಶಿವರುದ್ರ ಬಾಗಲಕೋಟ, ರಾಹುಲ್ ಜಾಧವ್, ಸ್ವಪ್ನಾ ಕಣಮುಚನಾಳ ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.-------------------------------------
ಬಾಕ್ಸ್ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಗೆ ಮಸಿಬಿನಾಳ ವಿರೋಧ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿವಿಧಾನಸಭೆ ಚುನಾವಣೆಯಲ್ಲಿ ಗೆಲವು ಸಾಧಿಸುವ ಉದ್ದೇಶದಿಂದ ಮುಂದಾಲೋಚನೆ ಇಲ್ಲದೆ ಬಿಟ್ಟಿ ಭಾಗ್ಯಗಳನ್ನ ಘೋಷಿಸಿ ಇಂದು ಜನಸಾಮಾನ್ಯರ ಮೇಲೆ ತೆರಿಗೆ ಹೊರೆ ಹೇರುವ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿ ಖಂಡನೀಯ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಮೇಶ ಮಸಿಬಿನಾಳ ಡಿಸೈಲ್ ಮತ್ತು ಪೆಟ್ರೋಲ ದರ ಏರಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬರಗಾಲವಿದ್ದರು ರೈತರಿಗೆ ಸಹಾಯ ಮಾಡದೇ ಕಿಸಾನ್ ಸಮ್ಮಾನದ ರಾಜ್ಯ ಸರ್ಕಾರದ 4ಸಾವಿರ ಸಹಾಯಧನ ಕಿತ್ತುಕೊಂಡರು. ಕಂದಾಯ ಮತ್ತು ಮುದ್ರಾಂಕ ಶುಲ್ಕವನ್ನು ಹೆಚ್ಚಿಸುವ ಮೂಲಕ ಜನರ ಜೇಬಿಗೆ ಕತ್ತರಿ ಹಾಕಿತ್ತು. ರೈತ ಮಕ್ಕಳ ವಿದ್ಯಾಸಿರಿ ಕಸಿದು ಬಿತ್ತನೆ ಬೀಜದ ದರ ದುಪ್ಪಟ್ಟು ಮಾಡಿ ರೈತರ ಜೀವನದ ಮೇಲೆ ಬರೆ ಎಳೆಯಲಾಗಿದೆ. ಈಗ ಡಿಸೇಲ್, ಪೆಟ್ರೋಲ್ ಬೆಲೆಯನ್ನು ₹ 3.50 ಹಾಗೂ ಪೆಟ್ರೋಲ್ ದರ ₹ 3 ಹೆಚ್ಚಳ ಮಾಡಿರುವುದು ಖಂಡನೀಯ. ಇದರಿಂದ ಎಲ್ಲ ವಸ್ತುಗಳ ಹಾಗೂ ಸೇವೆಯ ಬೆಲೆ ಏರಿಕೆಗೆ ಹಾದಿ ಮಾಡಿಕೊಟ್ಟಂತಾಗುತ್ತದೆ. ಕಾಂಗ್ರೆಸ್ ಸರ್ಕಾರ ತನ್ನ ಬೆಲೆ ಏರಿಕೆಯ ನೀತಿಯಿಂದ ಹಿಂದೆ ಸರಿಯದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ವೇಳೆ ಬಿಜೆಪಿ ಜಿಲ್ಲಾ ಒಬಿಸಿ ಘಟಕದ ಅಧ್ಯಕ್ಷ ಸಿದ್ದು ಬುಳ್ಳಾ, ಮಂಡಲದ ಮಾಜಿ ಅಧ್ಯಕ್ಷ ಭೀಮನಗೌಡ ಸಿದರಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಕಾಶ ಪಡಶೆಟ್ಟಿ, ಮಂಡಲದ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಬಿರಾದಾರ, ಯುವ ಮೋರ್ಚಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಡೋಣೂರಮಠ, ಮುಖಂಡರಾದ ಸೋಮು ದೇವೂರ, ಶಿವರಾಜ ತಳವಾರ, ಪಿಂಟು ಭಾಸುತ್ಕಕರ ಸೇರಿ ಇತರರು ಇದ್ದರು.