ಹಾವೇರಿಯ ಎಂ.ಎಂ. ವೃತ್ತದಲ್ಲಿ ಹುಬ್ಬಳ್ಳಿ ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿ ದೌರ್ಜನ್ಯ ಎಸಗಿದ ಘಟನೆ ಖಂಡಿಸಿ ಬಿಜೆಪಿ ಜಿಲ್ಲಾ ಘಟಕ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಹಾವೇರಿ: ಹುಬ್ಬಳ್ಳಿಯಲ್ಲಿ ದಲಿತ ಮಹಿಳಾ ಬಿಜೆಪಿ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿ ದೌರ್ಜನ್ಯ ಎಸಗಿದ್ದನ್ನು ಖಂಡಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಶನಿವಾರ ನಗರದ ಹುತಾತ್ಮ ಮೈಲಾರ ಮಹದೇವಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶೋಭಾ ನಿಸ್ಸೀಮಗೌಡ್ರ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಮಹಿಳೆಯರಿಗೆ ರಕ್ಷಣೆಯೇ ಸಿಗುತ್ತಿಲ್ಲ. ಹಾನಗಲ್ಲನಲ್ಲಿ ಯುವತಿಯರ ಅಕ್ರಮವಾಗಿ ಮಾರಾಟ ಮಾಡುವ ಜಾಲದ ಬಗ್ಗೆ ಬಿಜೆಪಿ ಪ್ರತಿಭಟನೆ ನಡೆಸಿತು. ಆದರೆ ಮಹಿಳಾ ಆಯೋಗದ ಅಧ್ಯಕ್ಷೆ ರೀಲ್ಸಗೆ ಸೀಮಿತವಾಗಿದ್ದಾರೆ. ಮಹಿಳಾ ಸಚಿವೆ ಮಹಿಳೆಯರ ಬಗ್ಗೆ ಕಾಳಜಿ ಹೊಂದಿಲ್ಲ. ಒಬ್ಬ ಮಾನಸಿಕ ಅಸ್ವಸ್ಥೆಯಾದರೂ ತಂತಾನೇ ತನ್ನ ಮೈಮೇಲಿನ ಬಟ್ಟೆಗಳನ್ನು ಬಿಚ್ಚಿಕೊಳ್ಳಲ್ಲ. ಆದರೆ ಹುಬ್ಬಳ್ಳಿ ಮಹಿಳೆ ತಾನೇ ಬಟ್ಟೆ ಬಿಚ್ಚಿಕೊಂಡರು ಎಂದು ಆರೋಪಿಸಿದರು. ಪಾಲಿಕೆ ಸದಸ್ಯೆ ಸುವರ್ಣ ಅವರನ್ನು ಫಾರ್ಚುನರ್ ಕಾರಲ್ಲಿ ರಾಜ ಮರ್ಯಾದೆಯಿಂದ ಕರೆತಂದರು. ಆದರೆ ಮಹಿಳೆಗೆ ಈ ರೀತಿಯ ಅಮಾನುಷವಾಗಿ ನಡೆದುಕೊಂಡರು. ಆಕೆಯ ಕುಟುಂಬಕ್ಕೆ ಜೀವ ಬೆದರಿಕೆ ಇದೆ. ಅವರಿಗೆ ರಕ್ಷಣೆ ಕೊಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್‌ನ ಕೈಗೊಂಬೆಯಾಗಿ ಗೃಹ ಇಲಾಖೆ ಕೆಲಸ ಮಾಡುತ್ತಿದೆ. ಹಾನಗಲ್ಲ ಘಟನೆ ಖಂಡಿಸಿ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದ್ದೆವು. ಆ ಕುರಿತು ಸರಿಯಾದ ತನಿಖೆ ನಡೆಸಲಿಲ್ಲ. ಹುಬ್ಬಳ್ಳಿಯ ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡೆ ಪ್ರಕರಣದಲ್ಲಿ ಹೀನಾಯವಾಗಿ ಹಿಂಸೆ ಕೊಟ್ಟಿದ್ದಾರೆ. ಗೃಹ ಸಚಿವರು ಯಾವ ಜಿಲ್ಲೆಗೂ ಪ್ರವಾಸ ಮಾಡುತ್ತಿಲ್ಲ. ಬಹುಶಃ ಮೈಸೂರು-ಬೆಂಗಳೂರು ಭಾಗ ಬಿಟ್ಟರೆ ಬೇರೆ ಯಾವ ಜಿಲ್ಲೆಗೂ ಬರೊಲ್ಲ ಎನಿಸುತ್ತದೆ. ರಾಜ್ಯದಲ್ಲಿ ಏನೇನು ಅಕ್ರಮ ಚಟುವಟಿಕೆಗಳು ನಡೆಯುತ್ತದೆ ಎಂಬುದು ಕಾಣುತ್ತಿಲ್ಲ. ರಾಜ್ಯದ ಜನತೆ ಅಸಮರ್ಥ ಗೃಹ ಸಚಿವರ ಕೈಯಲ್ಲಿ ಇಲಾಖೆ ಕೊಟ್ಟಂತಾಗಿದೆ ಎಂದು ವ್ಯಂಗ್ಯವಾಡಿದರು.ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ಶಿವರಾಜ ಸಜ್ಜನರ, ಅರುಣಕುಮಾರ ಪೂಜಾರ, ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನಂಜುಂಡೇಶ ಕಳ್ಳೇರ, ಡಾ. ಸಂತೋಷ ಆಲದಕಟ್ಟಿ, ಜಿಲ್ಲಾ ಉಪಾಧ್ಯಕ್ಷ ಸುರೇಶ ಹೊಸಮನಿ, ಮುಖಂಡರಾದ ಸಿದ್ದರಾಜ ಕಲಕೋಟಿ, ಮುರಿಗೆಪ್ಪ ಶೆಟ್ಟರ, ನಾಗೇಂದ್ರ ಕಟಕೋಳ, ಕೆ. ಶಿವಲಿಂಗಪ್ಪ, ರುದ್ರೇಶ ಚಿನ್ನಣ್ಣನವರ, ನಿಖಿಲ ಡೊಗ್ಗಳ್ಳಿ, ಮೃತ್ಯುಂಜಯ ಮುಷ್ಠಿ ಸೇರಿದಂತೆ ಜಿಲ್ಲೆಯ ಎಲ್ಲ ಮಂಡಲದ ಅಧ್ಯಕ್ಷರು, ಮೋರ್ಚಾಗಳ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.ಕರ್ನಾಟಕದಲ್ಲಿ ಕಾಂಗ್ರೆಸ್‌ನ ಕರಾಳ ದಿನಗಳು ಪ್ರಾರಂಭವಾಗಿವೆ. ಮಹಿಳೆ ವಿವಸ್ತ್ರ ಘಟನೆ ಬಗ್ಗೆ ಸಿಎಂ ಆ ಹೆಣ್ಣು ಮಗಳದ್ದೇ ತಪ್ಪ್ಪು ಅಂತಾರೆ. ಇದೆನು ಇಸ್ಲಾಮಿಕ್ ದೇಶವೇ? ತಪ್ಪಿದ್ದರೆ ಕಾನೂನು ಪ್ರಕಾರ ಶಿಕ್ಷೆ ಕೊಡಿಸಿ. ಯಾಕೆ ಡಿಫೆಂಡ್ ಮಾಡುತ್ತೀರಿ. ಮಹಿಳಾ ಆಯೋಗದ ಅಧ್ಯಕ್ಷರೂ ಹಾಗೆ ಹೇಳುತ್ತಾರೆ. ಈ ಕಾಂಗ್ರೆಸ್ ಆಧುನಿಕ ದುಶ್ಯಾಸನ ಇದ್ದಂತೆ. ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಇಲ್ಲಸಲ್ಲದ ನೆಪ ನಾಟಕ ಮಾಡುತ್ತಾರೆ. ಕೂಡಲೇ ಸಿಎಂ ಕ್ಷಮೆ ಕೇಳಬೇಕು ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಹೇಳಿದರು.