ಬೇಡಿಕೆ ಕುಸಿದ ಪರಿಣಾಮ ಸಮಾನ ಮನಸ್ಕರ ತಂಡದಿಂದ ಅಭಿಯಾನ ಮಾಡಿದ್ದು, ಇದೇ ಮೊದಲ ಬಾರಿಗೆ ಆನ್‌ಲೈನ್ ಖರೀದಿಗೂ ವ್ಯವಸ್ಥೆ ಮಾಡಲಾಗಿದೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ: ಖಾದಿ ರಾಷ್ಟ್ರಧ್ವಜ ಖರೀದಿಗೆ ಬೇಡಿಕೆ ಕುಸಿದ ಪರಿಣಾಮವಾಗಿ ದೇಶದ ಏಕೈಕ ಅಧಿಕೃತ ರಾಷ್ಟ್ರಧ್ವಜ ತಯಾರಿಸುವ ಇಲ್ಲಿನ ಬೆಂಗೇರಿಯಲ್ಲಿನ ಖಾದಿ ಗ್ರಾಮೋದ್ಯೋಗವೂ ರಾಷ್ಟ್ರಧ್ವಜ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಆದರೆ, ಸಮಾನ ಮನಸ್ಕರ ಸ್ನೇಹಿತರ ತಂಡವೊಂದು ವ್ಯಾಟ್ಸ್‌ಆ್ಯಪ್ ಗ್ರೂಪ್ ಮಾಡಿಕೊಂಡು, ಖಾದಿ ಧ್ವಜ ಖರೀದಿಸಲು ಪ್ರೇರೇಪಿಸುತ್ತಿದೆ. ಜತೆಗೆ ಆನ್‌ಲೈನ್ ಖರೀದಿಗೂ ವ್ಯವಸ್ಥೆ ಮಾಡುವ ಮೂಲಕ ಹೊಸತನಕ್ಕೆ ನಾಂದಿ ಹಾಡಿದೆ.ಆಗಿರುವುದೇನು?
ಧ್ವಜ ಸಂಹಿತೆ ತಿದ್ದುಪಡಿಯಾಗಿದ್ದರಿಂದ ಪಾಲಿಸ್ಟರ್ ಧ್ವಜಗಳ ಮಾರಾಟ ಹೆಚ್ಚಾಗುತ್ತಿದೆ. ಖಾದಿ ಧ್ವಜ ಖರೀದಿಸುವವರ ಸಂಖ್ಯೆ ಕಡಿಮೆಯಾಗಿ ಬೇಡಿಕೆ ಕುಸಿಯಿತು. ಪ್ರತಿವರ್ಷ ಕನಿಷ್ಠವೆಂದರೆ ₹3.5ಯಿಂದ ₹4 ಕೋಟಿ ವರೆಗೂ ಧ್ವಜ ಮಾರಾಟ ಆಗುತ್ತಿತ್ತು. 2025-26ರ ಆರ್ಥಿಕ ವರ್ಷದ ತ್ರೈಮಾಸಿಕ ಅವಧಿಯಲ್ಲಿ ಆಗಿರುವುದು ಬರೀ ₹65 ಲಕ್ಷ ಅಷ್ಟೇ.ಸ್ಥಗಿತಗೊಂಡ ಉತ್ಪಾದನೆ
ಬರೋಬ್ಬರಿ ₹2 ಕೋಟಿಗೂ ಅಧಿಕ ಮೌಲ್ಯದ ಧ್ವಜಗಳು ಸಿದ್ಧವಾಗಿ ಮಾರಾಟವಾಗದೇ ಹಾಗೆ ಉಳಿದಿವೆ. ಹೀಗಾಗಿ, ಅಲ್ಲಿನ ಕಾರ್ಮಿಕರಿಗೆ ಇದೀಗ ಧ್ವಜ ತಯಾರಿಕೆಯ ಕೆಲಸ ಬಿಟ್ಟು, ಬ್ಯಾಗ್ ಸೇರಿದಂತೆ ಮತ್ತಿತರ ಕೆಲಸ ಮಾಡಲು ಹೇಳಲಾಗುತ್ತಿದೆ. ರಾಷ್ಟ್ರಧ್ವಜ ತಯಾರಿಕಾ ಘಟಕದಲ್ಲೇ ಧ್ವಜ ತಯಾರಿಕೆ ಸ್ಥಗಿತಗೊಂಡಿದಂತಾಗಿದೆ.ಉತ್ತೇಜನಕ್ಕೆ ಗ್ರೂಪ್
ಇದನ್ನು ಅರಿತ ಹುಬ್ಬಳ್ಳಿ ಸಮಾನ ಮನಸ್ಕರ ತಂಡವು ಖಾದಿಧ್ವಜ ಖರೀದಿಗೆ ಉತ್ತೇಜನ ನೀಡಲು ವ್ಯಾಟ್ಸ್‌ಆ್ಯಪ್ ಗ್ರೂಪ್ ಮಾಡಿಕೊಂಡಿದೆ. ಗ್ರೂಪ್‌ಗೆ "ಖಾದಿ ರಾಷ್ಟ್ರಧ್ವಜ ಉತ್ತೇಜನ ಅಭಿಯಾನ " ಎಂದು ಹೆಸರಿಡಲಾಗಿದೆ. ಬೇರೆ ಬೇರೆ ಜಿಲ್ಲೆಯ ವೈದ್ಯರು, ಉದ್ಯಮಿಗಳು, ಸಾಹಿತಿಗಳು, ಚಿಂತಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿ 260ಕ್ಕೂ ಹೆಚ್ಚು ಜನರಿದ್ದಾರೆ. ಖಾದಿ ರಾಷ್ಟ್ರಧ್ವಜ ಖರೀದಿಗೆ ಏನೆಲ್ಲ ಮಾಡಬಹುದು ಎಂಬ ಬಗ್ಗೆ ಗ್ರೂಪ್‌ನಲ್ಲಿ ಚರ್ಚೆ ಆಗುತ್ತಿರುತ್ತದೆ.ತಿರಂಗಾ ಮೆರವಣಿಗೆ, ಖಾದಿ ರಾಷ್ಟ್ರಧ್ವಜದ ಮಹತ್ವ ತಿಳಿಯಪಡಿಸುವುದು ಅಭಿಯಾನದ ಮುಖ್ಯ ಉದ್ದೇಶ. ಇನ್‌ಸ್ಟಾಗ್ರಾಮ್. ಫೇಸ್‌ಬುಕ್, ಎಕ್ಸ್‌ನಲ್ಲಿ ರೀಲ್ಸ್ ಮತ್ತು ಜಾಗೃತಿ ಸಂದೇಶ, ಧ್ವಜ ಖರೀದಿಸಿ ಶಾಲಾ-ಕಾಲೇಜುಗಳಿಗೆ ವಿತರಿಸುವುದು. ಕರಪತ್ರ ಮುದ್ರಿಸಿ ಹಂಚುವುದು, ಸಾಕ್ಷ್ಯಚಿತ್ರ ತಯಾರಿ, ಜಾಲತಾಣದಲ್ಲಿ ಅಭಿಪ್ರಾಯ ಸಂಗ್ರಹ, ಸರ್ಕಾರಿ ನೌಕರರಿಗೆ ಧ್ವಜ ಮಾರಾಟ ಹೀಗೆ ಬಗೆಬಗೆಯ ಚಟುವಟಿಕೆ ನಡೆಸಲಾಗುತ್ತಿದೆ.
ಆನ್‌ಲೈನ್ ಖರೀದಿಇದೇ ಗುಂಪಿನಲ್ಲಿರುವ ಕೆಲ ಸಾಪ್ಟ್‌ವೇರ್ ಎಂಜಿನಿಯರ್‌ಗಳು ಧ್ವಜ ಖರೀದಿ ಆನ್‌ಲೈನ್ ವೇದಿಕೆ ಸಿದ್ಧಪಡಿಸಿರುವುದುಂಟು. ಗೂಗಲ್ ಫಾರ್ಮ್ ಸಿದ್ಧಪಡಿಸಿದ್ದು, ಅದರಲ್ಲಿ ಖಾದಿ ಧ್ವಜಗಳು ಯಾವ್ಯಾವ ಸೈಜ್‌ನಲ್ಲಿ ಸಿಗುತ್ತವೆ. ಯಾವ ಧ್ವಜಕ್ಕೆ ಎಷ್ಟು ದರ ಎಂಬುದು ಅದರಲ್ಲಿ ನಮೂದಾಗಿರುತ್ತದೆ. ವಿವರ ಹಾಕಿದರೆ ಗೂಗಲ್ ಪೇ ಮೂಲಕ ಪೇಮೆಂಟ್ ಮಾಡಿದರೆ ಮುಗಿತು. ಅದರ ಮಾಹಿತಿ ಖಾದಿ ಗ್ರಾಮೋದ್ಯೋಗಕ್ಕೆ ಲಭ್ಯವಾಗುತ್ತದೆ. ವಿಳಾಸಕ್ಕೆ ಕೋರಿಯರ್ ಮೂಲಕ ಧ್ವಜ ರವಾನಿಸುವ ವ್ಯವಸ್ಥೆ ಮಾಡಲಾಗಿದೆ. ಆನ್‌ಲೈನ್ ಮಾರಾಟ ಆರಂಭವಾಗಿ ಎರಡು ದಿನದಲ್ಲಿ 25 ಆರ್ಡರ್‌ಗಳು ಬಂದಿವೆಯಂತೆ.
ಇನ್ನು ಮುಂದೆ ಅಮೆಜಾನ್ ಜತೆಗೆ ಒಪ್ಪಂದ ಮಾಡಿಕೊಳ್ಳುವ ಯೋಜನೆಯೂ ಇದೆ ಎಂದು ಖಾದಿ ಗ್ರಾಮೋದ್ಯೋಗದ ಮೂಲಗಳು ತಿಳಿಸುತ್ತವೆ. ಜತೆಗೆ ಧ್ವಜ ಸಂಹಿತೆಯನ್ನು ಮತ್ತೆ ತಿದ್ದುಪಡಿ ಮಾಡಿ ಖಾದಿ ಧ್ವಜ ಖರೀದಿಯನ್ನಷ್ಟೇ ಪ್ರೋತ್ಸಾಹಿಸುವಂತೆ ಮಾಡಿ ಎಂಬ ಬೇಡಿಕೆಯನ್ನಿಟ್ಟುಕೊಂಡು ಅಭಿಯಾನ ನಡೆಸುವ ಯೋಚನೆಯೂ ಇದೆಯಂತೆ. ಒಟ್ಟಿನಲ್ಲಿ ಹುಬ್ಬಳ್ಳಿಯ ಬೆಂಗೇರಿಯಲ್ಲಿನ ರಾಷ್ಟ್ರಧ್ವಜ ಖರೀದಿಗೆ ಉತ್ತೇಜನ ಅಭಿಯಾನ ಶುರುವಾಗಿದ್ದು, ಜನರಿಂದಲೂ ಸ್ಪಂದನೆ ಸಿಗುತ್ತಿರುವುದಂತೂ ಸತ್ಯ.ಆನ್‌ಲೈನ್ ಮಾರಾಟಖಾದಿ ಧ್ವಜ ಮಾರಾಟವಾಗದೇ ಉತ್ಪಾದನೆ ಸ್ಥಗಿತಗೊಂಡಿದೆ ಎಂಬ ಮಾಹಿತಿ ಅರಿತು ಅಭಿಯಾನ ಶುರು ಮಾಡಿದ್ದೇವೆ. ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಆನ್‌ಲೈನ್ ಮಾರಾಟಕ್ಕೂ ಚಾಲನೆ ನೀಡಲಾಗಿದೆ ಎಂದು ಉತ್ತೇಜನ ಅಭಿಯಾನದ ಅಡ್ಮಿನ್ ಶಾಮ ನರಗುಂದ ತಿಳಿಸಿದ್ದಾರೆ.₹65 ಲಕ್ಷ ಮೌಲ್ಯದ ಧ್ವಜ ಮಾರಾಟ
ಖಾದಿ ಗ್ರಾಮೋದ್ಯೋಗದಲ್ಲಿ ಪ್ರಸಕ್ತ ವರ್ಷ ಈವರೆಗೆ ಬರೀ ₹65 ಲಕ್ಷ ಮೌಲ್ಯದ ಧ್ವಜ ಮಾರಾಟವಾಗಿವೆ. 2 ಕೋಟಿ ಮೌಲ್ಯದ ಧ್ವಜಗಳು ಹಾಗೆ ಉಳಿದಿವೆ. ಸಮಾನ ಮನಸ್ಕರ ತಂಡ ಉತ್ತೇಜಿಸಲು ಅಭಿಯಾನ ಶುರು ಮಾಡಿದೆ ಎಂದು ಬೆಂಗೇರಿಯ ಖಾದಿ ಗ್ರಾಮೋದ್ಯೋಗ ವ್ಯವಸ್ಥಾಪಕ ಶಿವಾನಂದ ಮಠಪತಿ ತಿಳಿಸಿದ್ದಾರೆ.