ಜಗಳೂರು ಕ್ಷೇತ್ರದಲ್ಲಿ ಬಿಜೆಪಿ ಬಲಿಷ್ಠ: ರಾಮಚಂದ್ರ

KannadaprabhaNewsNetwork |  
Published : Oct 29, 2025, 01:00 AM IST
28 ಜೆ.ಜಿ.ಎಲ್.1) ಜಗಳೂರು ಪಟ್ಟಣದ ವಾಲ್ಮೀಕಿ ಭವನದಲ್ಲಿ ಮಂಗಳವಾರ ಬಿಜೆಪಿ ಭೂತ್ ಮಟ್ಟದ ಏಜಂಟರ್ಗಳ (ಬಿಎಲ್ಎ-೨) ಮತಪಟ್ಟಿ ಪರಿಷ್ಕರಣೆ ಕಾರ್ಯಾಗಾರಕ್ಕೆ ದೀಪ ಬೆಳಗುವ ಮೂಲಕ ವಿಧಾನ ಪರಿಷತ್ ಸದಸ್ಯ  ಅರುಣ್ ಕುಮಾರ್  , ಮಾಜಿ ಶಾಸಕ ಎಸ್.ವಿ.ರಾಮಚಂದ್ರ., ಎಚ್.ಪಿ.ರಾಜೇಶ್  ಉದ್ಘಾಟಿಸಿದರು. | Kannada Prabha

ಸಾರಾಂಶ

ಬಿಜೆಪಿಯಲ್ಲಿ ಸಂಘಟನೆಯ ಪರ್ವ ಆರಂಭವಾಗಿದೆ. ಜಗಳೂರು ಕ್ಷೇತ್ರದಲ್ಲಿ ಬಿಜೆಪಿ ಬಲವಾಗಿದೆ. ಕಳೆದ ಬಾರಿ ಕೇವಲ ೮೦೦ ಮತಗಳಿಂದ ಸೋತಿದ್ದೇನೆ. ಮತ್ತೆ ಸಂಘಟನೆ ಮಾಡಿ ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ತರುವ ಕೆಲಸ ಮಾಡಲು ಟೊಂಕಕಟ್ಟಿ ನಿಲ್ಲಲು ಪ್ರತಿಯೊಬ್ಬ ಕಾರ್ಯಕರ್ತರು ಕೈ ಜೋಡಿಸಬೇಕು ಎಂದು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಹೇಳಿದ್ದಾರೆ.

- ಬಿಜೆಪಿ ಬೂತ್‌ಮಟ್ಟದ ಏಜೆಂಟರ ಮತಪಟ್ಟಿ ಪರಿಷ್ಕರಣೆ ಕಾರ್ಯಾಗಾರ

- - -

ಕನ್ನಡಪ್ರಭ ವಾರ್ತೆ ಜಗಳೂರು

ಬಿಜೆಪಿಯಲ್ಲಿ ಸಂಘಟನೆಯ ಪರ್ವ ಆರಂಭವಾಗಿದೆ. ಜಗಳೂರು ಕ್ಷೇತ್ರದಲ್ಲಿ ಬಿಜೆಪಿ ಬಲವಾಗಿದೆ. ಕಳೆದ ಬಾರಿ ಕೇವಲ ೮೦೦ ಮತಗಳಿಂದ ಸೋತಿದ್ದೇನೆ. ಮತ್ತೆ ಸಂಘಟನೆ ಮಾಡಿ ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ತರುವ ಕೆಲಸ ಮಾಡಲು ಟೊಂಕಕಟ್ಟಿ ನಿಲ್ಲಲು ಪ್ರತಿಯೊಬ್ಬ ಕಾರ್ಯಕರ್ತರು ಕೈ ಜೋಡಿಸಬೇಕು ಎಂದು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.

ಪಟ್ಟಣದ ವಾಲ್ಮೀಕಿ ಭವನದಲ್ಲಿ ಮಂಗಳವಾರ ಬಿಜೆಪಿ ಬೂತ್‌ಮಟ್ಟದ ಏಜೆಂಟ್‌ಗಳ (ಬಿಎಲ್ಎ-೨) ಮತಪಟ್ಟಿ ಪರಿಷ್ಕರಣೆ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಇನ್ನೆರಡು ತಿಂಗಳಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳು ಬರಲಿವೆ. ರಾಜ್ಯ ಸರ್ಕಾರದ ವೈಫಲ್ಯಗಳನ್ನು ಬೂತ್ ಮಟ್ಟದ ಏಜೆಂಟ್‌ಗಳಿಗೆ ತಿಳಿಸುವ ಮೂಲಕ ಬಿಜೆಪಿ ಏಜೆಂಟರ ಶಕ್ತಿ ಏನೆಂದು ತೋರಿಸಿ ಎಂದು ಕಾರ್ಯಕರ್ತರಿಗೆ ಹುರಿದುಂಬಿಸಿದರು.

ವಿಧಾನ ಪರಿಷತ್ತು ಸದಸ್ಯ ಅರುಣ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ರಸ್ತೆಗಳ ಗುಂಡಿಗಳ ಮುಚ್ಚಲು ಹಣವಿಲ್ಲದೇ, ಕಾಲಹರಣ ಮಾಡುತ್ತಿದೆ. ಹಗರಣಗಳ ಮೇಲೆ ಹಗರಣ ಮಾಡುವ ಸರ್ಕಾರ ಇದಾಗಿದೆ. ವಿಷಯಾಂತರ ಮಾಡುವುದು ಸಚಿವರಾದ ಪ್ರಿಯಾಂಕ್ ಖರ್ಗೆ, ಮಧು ಬಂಗಾರಪ್ಪ ಅವರಿಗೆ ಕರಗತವಾಗಿದೆ. ನಾನು ಸಹ ಪರಿಷತ್ ಸದಸ್ಯ. ನಮಗೆ ಅನುದಾನದ ಹಣ ನೀಡಲು ಸರ್ಕಾರದಲ್ಲಿ ಹಣವಿಲ್ಲ. ಕುರ್ಚಿಗೆ ಅಂಟಿಕೊಂಡು ಕುಳಿತಿದ್ದಾರೆ. ಮಾತೆತ್ತಿದರೆ ಆರ್‌ಎಸ್‌ಎಸ್‌ ವಿರುದ್ಧ ಮಾತನಾಡುತ್ತಾರೆ. ಸರ್ಕಾರಿ ನೌಕರರಿಗೆ ಸಂಬಳ ಕೊಡುವಷ್ಟು ಹಣವಿಲ್ಲ. ಆರ್‌ಡಿಪಿಆರ್ ಇಲಾಖೆಯಲ್ಲಿ ನೀರಗಂಟಿಯಾಗಿ ಕೆಲಸ ಮಾಡುವ ನೌಕರ ಸಂಬಳವಿಲ್ಲದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕಷ್ಟ-ನಷ್ಟಗಳ ಬಗ್ಗೆ ಅರಿವಿಲ್ಲದೇ ವಿಷಯಾಂತರ ಮಾಡುವ ಮೂಲಕ ಕಾಲಹರಣ ಮಾಡುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಡ್ಲೆಬಾಳು ಧನಂಜಯ, ಬಿಜೆಪಿ ಮುಖಂಡ ಬಿಸ್ತುವಳ್ಳಿ ಬಾಬು, ಡಿ.ವಿ.ನಾಗಪ್ಪ, ಬಿಜೆಪಿ ಮಂಡಲ ನೂತನ ಅಧ್ಯಕ್ಷ ಎ.ಎಂ. ಆರಾಧ್ಯ ಮಾತನಾಡಿದರು.

ಮುಖಂಡರಾದ ಅನಿಲ್ ಕುಮಾರ್ ನಾಯ್ಕ್, ವಸಂತಕುಮಾರ್, ಪಲ್ಲಾಗಟ್ಟೆ ಮಹೇಶ್, ದೇವಿಕೆರೆ ಶಿವಕುಮಾರ ಸ್ವಾಮಿ, ಕಟ್ಟಿಗೆಹಳ್ಳಿ ಮಂಜುನಾಥ್ ಇತರರರು ಇದ್ದರು.

- - -

(ಟಾಪ್‌ ಕೋಟ್‌)

ಚುನಾವಣೆ ಬಂದರೆ ಬೂತ್ ಮಟ್ಟದಲ್ಲಿ ಬಲವರ್ಧನೆ ಮತ್ತು ಮತಪಟ್ಟಿ ಪರಿಷ್ಕರಣೆ ಅತ್ಯವಶ್ಯಕ. ಬಿಜೆಪಿಗೆ ತನ್ನದೇ ಆದ ನಿಯಮಗಳಿವೆ. ಬಹಳ ಮಹತ್ವವಾದ ಬೂತ್‌ಗಳ ಬಲವರ್ಧನೆ ಆಗಬೇಕು. ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಿ, ಹೊಸ ಮತಗಟ್ಟೆಗಳಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಿ ಎಚ್ಚರದಿಂದ ಕಾರ್ಯನಿರ್ವಹಿಸೋಣ.

- ಎಚ್.ಪಿ.ರಾಜೇಶ್‌, ಮಾಜಿ ಶಾಸಕ.

- - -

-28ಜೆಜಿಎಲ್.1:

ಕಾರ್ಯಾಗಾರವನ್ನು ವಿಪ ಸದಸ್ಯ ಅರುಣ್ ಕುಮಾರ್ ಉದ್ಘಾಟಿಸಿದರು. ಮಾಜಿ ಶಾಸಕ ಎಸ್.ವಿ.ರಾಮಚಂದ್ರ., ಎಚ್.ಪಿ.ರಾಜೇಶ್ ಮತ್ತಿತರ ಗಣ್ಯರು ಇದ್ದರು.

PREV

Recommended Stories

ವಾಲ್ಮೀಕಿಗೆ ದೇವರ ಪಟ್ಟ ಕೊಡದಿರುವುದು ದುರಂತ: ಡಾ.ಗೋಪಾಲ
ಚರ್ಚ್‌ನಲ್ಲಿ ನಡೆದಿರುವುದು ಆತ್ಮಹತ್ಯೆಯಲ್ಲ, ಕೊಲೆ: ಆರೋಪ