ಬಿಜೆಪಿಯವರು ರೈತರ ಹಿತ ಕಾಯದೇ ರಾಜಕೀಯ ಮಾಡುತ್ತಿದ್ದಾರೆ. ಮಹದಾಯಿ ಬಗ್ಗೆ ಚಕಾರವೆತ್ತದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಾಧನೆ ಶೂನ್ಯ. ಸಾವಿನ ಮನೆಯಲ್ಲೂ ಜೋಶಿ ರಾಜಕೀಯ ಮಾಡುತ್ತಿದ್ದಾರೆ
ನರಗುಂದ: ಪರಿಸರ, ಅರಣ್ಯ ಹಾಗೂ ಹುಲಿ ಸಂರಕ್ಷಣೆಯ ಕುಂಟು ನೆಪ ಹೇಳುತ್ತಿರುವ ಬಿಜೆಪಿಯಿಂದ ಮಹದಾಯಿ ಯೋಜನೆ ಅನುಷ್ಠಾನಕ್ಕೆ ಹಿನ್ನೆಡೆ ಉಂಟಾಗಿದೆ ಎಂದು ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಆರೋಪಿಸಿದರು.
ಶನಿವಾರ ಸಂಜೆ ಪಟ್ಟಣದ ಮಾರ್ಕಂಡಯ್ಯ ಹಾಲ್‌ನಲ್ಲಿ ಧಾರವಾಡ ಹಾಗೂ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರದ ಪಂಚಮಸಾಲಿ ಸಮಾಜದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಮಹದಾಯಿ, ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಭೂಮಿಯೊಳಗೆ ಪೈಪ್ ಮೂಲಕ ನೀರು ತರಲು ಯೋಜನೆ ರೂಪಿಸಲಾಗಿದೆ. ಅದು ಸಾಧ್ಯವೂ ಇದೆ. ಇದನ್ನು ಅರಿಯದ ಬಿಜೆಪಿಯವರು ರೈತರ ಹಿತ ಕಾಯದೇ ರಾಜಕೀಯ ಮಾಡುತ್ತಿದ್ದಾರೆ. ಮಹದಾಯಿ ಬಗ್ಗೆ ಚಕಾರವೆತ್ತದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಾಧನೆ ಶೂನ್ಯ. ಸಾವಿನ ಮನೆಯಲ್ಲೂ ಜೋಶಿ ರಾಜಕೀಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಪ್ರಹ್ಲಾದ ಜೋಶಿ ವಿರುದ್ಧ ಸರಳತೆಯ ವ್ಯಕ್ತಿ ವಿನೋದ ಅಸೂಟಿ ಸ್ಪರ್ಧಿಸಿದ್ದಾರೆ. ಅವರು ಸಮರ್ಥ ಅಭ್ಯರ್ಥಿ ಇದ್ದು, ಅವರ ಆಯ್ಕೆಗೆ ಎಲ್ಲರೂ ಶ್ರಮಿಸಬೇಕೆಂದರು.
ಲಿಂಗಾಯತರು ಬಿಜೆಪಿ ಬೆಂಬಲಿಸಿ ಸಾಕಾಗಿದೆ. ಬಿಜೆಪಿಯಿಂದ ಜನರ ಏಳ್ಗೆ ಅಸಾಧ್ಯ. ಆದ್ದರಿಂದ ಬಾಗಲಕೋಟೆ ಅಭ್ಯರ್ಥಿ ಸಂಯುಕ್ತಾ ಪಾಟೀಲ ಅವರನ್ನು ಬೆಂಬಲಿಸಿ ಕಾಂಗ್ರೆಸ್ ಗೆ ಮತ ನೀಡುವಂತೆ ಮನವಿ ಮಾಡಿದರು.
ಕೆಪಿಸಿಸಿ ಮಾಧ್ಯಮ ವಕ್ತಾರ ಡಾ. ಸಂಗಮೇಶ ಕೊಳ್ಳಿ ಮಾತನಾಡಿ, ಕಾಂಗ್ರೆಸ್‌ನಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ.ಪ್ರತಿನಿತ್ಯ ನೀರನ್ನು ಬದಲಾವಣೆ ಮಾಡದಿದ್ದರೆ ಕೊಳೆ ಮತ್ತು ಹುಳುಗಳಾಗುತ್ತವೆ. ಅದರಂತೆ ಬಿಜೆಪಿ ಸಂಸದ ಗದ್ದಿಗೌಡ್ರ ಅವರನ್ನು ಬದಲಾವಣೆ ಮಾಡಲೇಬೇಕು. ಇಲ್ಲವಾದರೆ ನೀರಿಗೆ ಹುಳು ಬೀಳುವಂತೆ ಬಾಗಲಕೋಟೆ ಕ್ಷೇತ್ರ ಅಭಿವೃದ್ಧಿಹೀನವಾಗುತ್ತದೆ. ಆದ್ದರಿಂದ ಗದ್ದಿಗೌಡ್ರವರನ್ನು ಸೋಲಿಸಿ ಸಂಯುಕ್ತಾ ಪಾಟೀಲರನ್ನು ಆಯ್ಕೆ ಮಾಡಬೇಕು.
ಧಾರವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಮಾತನಾಡಿ, ಅಭಿವೃದ್ಧಿ ತೋರದ ಸರ್ವಾಧಿಕಾರಿ ಧೋರಣೆಯ ಬಿಜೆಪಿ ತಿರಸ್ಕರಿಸಿ, ನನ್ನನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು.
ವಿಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಮಾತನಾಡಿ, ಮಹದಾಯಿ, ಕಳಸಾ ಬಂಡೂರಿಗೆ ನಾಲ್ಕು ದಶಕಗಳಿಂದ ಹೋರಾಟ ನಡೆಯುತ್ತಿದೆ. ಆದರೂ ಯೋಜನೆ ಜಾರಿಯಾಗಿಲ್ಲ. ಇದಕ್ಕೆ ಬಿಜೆಪಿ ಕಾರಣ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಬಾಪುಗೌಡ ಪಾಟೀಲ, ಕೆಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಸ್. ಪಾಟೀಲ, ಪ್ರಬಣ್ಣ ಹುಣಸಿಕಟ್ಟಿ, ನೀಲಕಂಠ ಅಸೂಟಿ, ಶಿವಾನಂದ ಮುತ್ತಣ್ಣವರ, ಪ್ರವೀಣ ಯಾವಗಲ್, ಆರ್.ಎಚ್. ಕೋನರಡ್ಡಿ, ಅಪ್ಪಣ್ಣ ನಾಯ್ಕರ, ವಿ.ಎನ್. ಕೊಳ್ಳಿ , ಸದುಗೌಡ ಪಾಟೀಲ, ಎಂ.ಬಿ. ಮೆಣಸಗಿ, ವಿಜಯ ತೋಟರ, ಶಿವಾನಂದ ಸಾತನ್ನವರ, ಜೈನ್, ಯಲ್ಲಪ್ಪ ಕುರಹಟ್ಟಿ, ವಿರೇಶ ಚುಳಕಿ, ಸಿ.ಬಿ. ಪಾಟೀಲ, ವಿಜಯ ಕುಲಕರ್ಣಿ, ಸುರೇಶ ಸಾತಣ್ಞವರ, ಅಶೋಕ ಸಾಲೂಟಿಗಿ, ಗುರುಪಾದಪ್ಪ ಕುರಹಟ್ಟಿ, ಬಿ.ಡಿ. ಪಾಟೀಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.