ನಗರಸಭಾಧ್ಯಕ್ಷರ ಪದಚ್ಯುತಿಗೆ ಹಲವು ಅಸ್ತ್ರಗಳ ಪ್ರಯೋಗಕ್ಕೆ ಬಿಜೆಪಿ ಚಿಂತನೆ

KannadaprabhaNewsNetwork | Published : Oct 16, 2023 1:46 AM

ಸಾರಾಂಶ

ನಗರಸಭಾಧ್ಯಕ್ಷರ ಪದಚ್ಯುತಿಗೆ ಹಲವು ಅಸ್ತ್ರಗಳ ಪ್ರಯೋಗಕ್ಕೆ ಬಿಜೆಪಿ ಚಿಂತನೆ

ಇಂದೇ ಅವಿಶ್ವಾಸ ನಿರ್ಣಯದ ಪತ್ರ ಸಲ್ಲಿಕೆ । ನಗರಸಭೆಗೆ ಬಂದ್ರೆ ಘೇರಾವ್ । ಕಾನೂನು ತಜ್ಞರ ಸಂಪರ್ಕ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಕೊಟ್ಟ ಮಾತಿಗೆ ಪದೇ ಪದೇ ತಪ್ಪಿ, ಕಮಲ ಪಾಳೆಯದ ಕೆಂಗಣ್ಣಿಗೆ ಗುರಿಯಾಗಿರುವ ನಗರ ಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಲು ಬಿಜೆಪಿ ಚಿಂತನೆ ನಡೆಸಿದೆ. ಜಿಲ್ಲಾ, ನಗರ ಬಿಜೆಪಿ ಘಟಕ ಹಾಗೂ ನಗರಸಭೆ ಬಿಜೆಪಿ ಸದಸ್ಯರು ಭಾನುವಾರ ಪಕ್ಷದ ಕಚೇರಿಯಲ್ಲಿ ಸಭೆ ಸೇರಿ ಹಲವು ಆಯಾಮಗಳಲ್ಲಿ ಚರ್ಚೆ ನಡೆಸಿ, ಸಾಧಕ, ಬಾಧಕಗಳ ಬಗ್ಗೆ ಪರಿಶೀಲಿಸಿದರು. ಅವರನ್ನು ಪಕ್ಷದಿಂದ ಉಚ್ಛಾಟಿಸುವ ಹಾಗೂ ಇತರೆ ಕ್ರಮಗಳ ಬಗ್ಗೆ ಕಾನೂನು ತಜ್ಞ ರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲು ತೀರ್ಮಾನ ಕೈಗೊಳ್ಳಲಾಯಿತು.

ಮಾತಿಗೆ ತಪ್ಪಿದರು: ನಗರಸಭೆ ಅಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನಗರ ಕೋರ್ ಕಮಿಟಿಯಲ್ಲಿ ವರಸಿದ್ದಿ ವೇಣುಗೋಪಾಲ್, ಮಧು ಕುಮಾರ್‌ರಾಜ್ ಅರಸ್ ಹಾಗೂ ರಾಜು ಅವರಲ್ಲಿ ಓರ್ವರನ್ನು ಅಧ್ಯಕ್ಷರನ್ನಾಗಿ ಮಾಡುವ ತೀರ್ಮಾನ ತೆಗೆದುಕೊಳ್ಳಲಾಯಿತು. ಒಟ್ಟು 30 ತಿಂಗಳ ಅವಧಿಯನ್ನು ಮೂರು ಜನರಿಗೆ ಹಂಚಿಕೆ ಮಾಡಲಾಗಿದ್ದು, ಮೊದಲ 10 ತಿಂಗಳ ಅವಧಿ ವರಸಿದ್ದಿ ವೇಣುಗೋಪಾಲ್ ಅವರಿಗೆ ನೀಡಲಾಯಿತು. ತಮ್ಮ ಅವಧಿ ಮುಗಿಯುತ್ತಿದ್ದಂತೆ ರಾಜೀನಾಮೆ ನೀಡಬೇಕೆಂಬ ತೀರ್ಮಾನ ಕೈಗೊಳ್ಳಲಾಯಿತು. ಆದರೆ, ಅವರು 22 ತಿಂಗಳು ಅಧ್ಯಕ್ಷರಾಗಿ ಮುಂದುವರೆಯುವ ಮೂಲಕ ಮಾತಿಗೆ ತಪ್ಪಿದ್ದಾರೆಂಬ ಆರೋಪ ಬಿಜೆಪಿ ನಗರಸಭಾ ಸದಸ್ಯರದ್ದಾಗಿದೆ.

ಆದರೆ, ಚಿಕ್ಕಮಗಳೂರು ಹಬ್ಬ ಹಾಗೂ ವಿಧಾನಸಭಾ ಚುನಾವಣೆ ಇರುವುದರಿಂದ ಅವರನ್ನು ಅನಿವಾರ್ಯವಾಗಿ ಮುಂದುವರೆಸಿಕೊಂಡು ಬರಲಾಯಿತು.

ಸ್ಥಾನ ಕೈ ತಪ್ಪುವ ಆತಂಕ : ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಟಿ. ರವಿ ಪರಾಭವಗೊಳ್ಳುತ್ತಿದ್ದಂತೆ ನಗರಸಭೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳುವ ಆತಂಕ ಎದುರಾಯಿತು. ವರಸಿದ್ದಿ ವೇಣುಗೋಪಾಲ್ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಚುನಾವಣೆ ನಡೆದರೆ, ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮಾಡಿಕೊಂಡು ಬಿಜೆಪಿಯ ಕೆಲವು ಸದಸ್ಯರ ಬೆಂಬಲ ಪಡೆದು ಕಾಂಗ್ರೆಸ್ ಅಧಿಕಾರಕ್ಕೆ ಬರಬಹುದೆಂಬ ಲೆಕ್ಕಾಚಾರ ವರಸಿದ್ದಿ ವೇಣುಗೋಪಾಲ್ ಇನ್ನಷ್ಟು ದಿನ ಮುಂದುವರೆಯುವ ವಾತಾವರಣ ನಿರ್ಮಾಣಕ್ಕೆ ಕಾರಣವಾಯಿತು. ಕಳೆದ ಜುಲೈ ತಿಂಗಳಲ್ಲಿ ವರಸಿದ್ದಿ ವೇಣುಗೋಪಾಲ್ ರಾಜೀನಾಮೆ ನೀಡಿದಾಗ, ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂಬ ಸೂಕ್ಷ್ಮತೆ ಅರಿತು ರಾಜೀನಾಮೆ ಪತ್ರವನ್ನು ವಾಪಸ್ ಪಡೆಯಲು ಬಿಜೆಪಿ ಪಕ್ಷ ಸೂಚನೆ ನೀಡಿತ್ತು.

2ನೇ ರಾಜೀನಾಮೆ: ಎರಡೂವರೆ ವರ್ಷದ ಮೊದಲ ಅಧಿಕಾರ ಅವಧಿ ಮುಕ್ತಾಯಗೊಳ್ಳಲು ಕೇವಲ 8 ತಿಂಗಳು ಮಾತ್ರ ಉಳಿದುಕೊಂಡಿದೆ. ಈಗ ರಾಜೀನಾಮೆ ನೀಡಿದರೆ ಕಾಂಗ್ರೆಸ್, ಅಧಿಕಾರಕ್ಕೆ ಬರುವ ಕಸರತ್ತು ಮಾಡುವುದಿಲ್ಲ ಹಾಗಾಗಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪಕ್ಷ ಸೂಚಿಸಿದ ಮೇರೆಗೆ ಅ. 4 ರಂದು ವರಸಿದ್ದಿ ವೇಣುಗೋಪಾಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅದು ಅಂಗೀಕಾರ ಆಗುವ ಮೊದಲೇ ರಾಜೀನಾಮೆ ಪತ್ರವನ್ನು ವಾಪಸ್ ಪಡೆದುಕೊಂಡ ಪರಿಣಾಮ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ----- ಬಾಕ್ಸ್ ------

ನಿರ್ಣಯಗಳು

- ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಳ್ಳಲು ಸಭೆ ಕರೆಯಲು ಸೋಮವಾರವೇ ಜಿಲ್ಲಾಧಿಕಾರಿಗೆ ನಗರಸಭೆ ಬಿಜೆಪಿ ಸದಸ್ಯರು ಕೋರಿಕೆ ಪತ್ರ ಸಲ್ಲಿಸಲು ಭಾನುವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. - ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ ಬಿಜೆಪಿಗೆ ಸಂಖ್ಯಾ ಬಲದ ಕೊರತೆ ಇರುವುದರಿಂದ ಜೆಡಿಎಸ್, ಪಕ್ಷೇತರ ಸದಸ್ಯರ ಜತೆಗೆ ಅಗತ್ಯಬಿದ್ದರೆ ಕಾಂಗ್ರೆಸ್ ಬೆಂಬಲ ಕೋರುವುದು. - ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್‌ ಅವರು ಚಿಕ್ಕಮಗಳೂರಿನಲ್ಲಿ ಇಲ್ಲ. ಅವರು ನಗರಸಭೆಗೆ ಬಂದರೆ, ಅವರು ಕಚೇರಿ ಒಳಗೆ ಹೋಗದಂತೆ ತಡೆಯುವುದು. - ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಿ ಜಯಗಳಿಸಿರುವ ಅವರನ್ನು ಪಕ್ಷದಿಂದ ಉಚ್ಛಾಟಿಸುವ ಸಂಬಂಧ ಕಾನೂನು ತಜ್ಞರ ಸಲಹೆ ಪಡೆಯುವುದು. --------------------------ಸಂಖ್ಯಾ ಬಲ ಚಿಕ್ಕಮಗಳೂರು ನಗರಸಭೆಯಲ್ಲಿ ಅವಿಶ್ವಾಸ ನಿರ್ಣಯ ಪಾಸ್ ಆಗಬೇಕಾದರೆ 24 ಸಂಖ್ಯಾ ಬಲ ಅವಶ್ಯಕ. ನಗರಸಭೆಯಲ್ಲಿ ಒಟ್ಟು 35 ಸದಸ್ಯರಿದ್ದು, ಈ ಪೈಕಿ ಬಿಜೆಪಿ 18, ಕಾಂಗ್ರೆಸ್ 12, ಜೆಡಿಎಸ್ 3, ಪಕ್ಷೇತರ 2. ನಗರಸಭಾ ಅಧ್ಯಕ್ಷರ ಚುನಾವಣೆಯಲ್ಲಿ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಲೋಕಸಭಾ ಸದಸ್ಯರು ಮತದಾನ ಮಾಡುವ ಹಕ್ಕು ಇರುವುದರಿಂದ ಸದಸ್ಯ 4 ಮಂದಿಯಲ್ಲಿ ಬಿಜೆಪಿ ಇಬ್ಬರು, ಕಾಂಗ್ರೆಸ್ ಹಾಗೂ ಜೆಡಿಎಸ್ ತಲಾ ಓರ್ವರು ಮತದಾನ ಮಾಡಬಹುದು. ವರಸಿದ್ದಿ ವೇಣುಗೋಪಾಲ್ ಪದಚ್ಯುತಿ ಮಾಡಲು ಬಿಜೆಪಿಗೆ ಇತರೆ ನಗರಸಭೆ ಸದಸ್ಯರ ಬೆಂಬಲದ ಅವಶ್ಯಕತೆ ಇದೆ. -------- 15 ಕೆಸಿಕೆಎಂ 1ಚಿಕ್ಕಮಗಳೂರು ನಗರಸಭೆ------ 15 ಕೆಸಿಕೆಎಂ 2ವರಸಿದ್ದಿ ವೇಣುಗೋಪಾಲ್‌

Share this article