ಬೊಂಬೆಗಳನ್ನು ಬಹಳ ವಿಶೇಷವಾಗಿ ಜೋಡಿಸಿ ಆಚರಣೆ ಕನ್ನಡಪ್ರಭ ವಾರ್ತೆ ಅರಸೀಕೆರೆ ಸಂಭ್ರಮದಿಂದ ಶರನ್ನವರಾತ್ರಿ ನಗರದ ವಿವಿಧ ದೇವಾಲಯಗಳಲ್ಲಿ ಶ್ರೀ ಮಾತೆಗೆ ವಿಶೇಷ ಅಲಂಕಾರಗಳನ್ನು ಮಾಡಲಾಗಿದೆ. ಅನೇಕ ಮನೆ-ಮನೆಗಳಲ್ಲಿ ಬೊಂಬೆಗಳನ್ನು ಬಹಳ ವಿಶೇಷವಾಗಿ ಜೋಡಿಸಿ ಮಹಿಳೆಯರು ನವರಾತ್ರಿಯ ಸಂಭ್ರಮದಲ್ಲಿದ್ದಾರೆ. ನಗರದ ಮಾರುತಿನಗರ ಬಡಾವಣೆಯಲ್ಲಿ ಸೀತಾ ಮಹಿಳಾ ಸಂಘದ ಅಧ್ಯಕ್ಷರಾದ ಶಕುಂತಲಮ್ಮ ಆನಂದ್ ಅವರ ಮನೆಯಲ್ಲಿ ದಸರಾ ಬೊಂಬೆಗಳನ್ನ ಬಹಳ ಆಕರ್ಷಣೀಯವಾಗಿ ಪ್ರತಿ ವರ್ಷದಂತೆ ಜೋಡಿಸಿದ್ದು ರಾಮಾಯಣ ಮಹಾಭಾರತ ಮೈಸೂರು ಅರಸರ ಆಳ್ವಿಕೆಯ ವೈಭವವನ್ನು ನೆನಪಿಗೆ ತರುವಂತಹ ಚಿತ್ರಾವಳಿಯನ್ನು ಬೊಂಬೆಗಳ ಜೋಡಣೆಯಲ್ಲಿ ರೂಪಿಸಿದ್ದಾರೆ. ಸಂಜೆ ಸೀತಾ ಮಹಿಳಾ ಸಂಘದ ಸದಸ್ಯರು ಪದಾಧಿಕಾರಿಗಳು ನವರಾತ್ರಿ ಹಾಡುಗಳು ನಾರಾಯಣಿ ಹೃದಯ, ನಾರಾಯಣಿ ಶ್ರುತಿ, ಮೊದಲಾದವುಗಳ ಪಠಣ ಮಾಡಿದರು. ಈ ಒಂದು ಕಾರ್ಯಕ್ರಮಕ್ಕೆ ಮಹಿಳಾ ಮಣಿಗಳು ಬೆಳಗಿನಿಂದಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಹತ್ತು ದಿನಗಳ ಕಾಲ ಈ ಸಂಘವು ವಿವಿಧ ಮನೆಗಳಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮವನ್ನು ನಡೆಸಿಕೊಡುವ ಮೂಲಕ ನಮ್ಮ ಭವ್ಯ ಸಂಸ್ಕೃತಿಯನ್ನು ಬಿಂಬಿಸಲಿದ್ದಾರೆ. ಈ ಸಂಘವು ಇತರೆ ದಿನಗಳಲ್ಲಿ ನಗರದ ಶ್ರೀರಾಮಮಂದಿರದಲ್ಲಿ ಸಮಾವೇಶಗೊಂಡು ಸೌಂದರ್ಯಲಹರಿ ವಿಷ್ಣು ಸಹಸ್ರನಾಮ ಇತರ ಭಜನೆಗಳ ಸೇವೆಯನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದ್ದಾರೆ.