ಕನ್ನಡಪ್ರಭ ವಾರ್ತೆ ಸಕಲೇಶಪುರ ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿಕೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸುವುದರಲ್ಲಿ ಅನುಮಾನವಿಲ್ಲ. ಹಾಗೆಯೇ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕೂಡ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಾಗುವುದು ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದರು. ಧರ್ಮಸ್ಥಳ, ಉಡುಪಿಗೆ ಭೇಟಿ ನೀಡಿ ವಾಪಸ್ ಆಗುವ ವೇಳೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಹಾಸನದ ಲೋಕಸಭಾ ಅಭ್ಯರ್ಥಿ ಕುರಿತು ಇನ್ನು ಅಂತಿಮ ಆಗಿಲ್ಲ. ವಾರದ ಹಿಂದೆ ಬೆಂಗಳೂರಿನಲ್ಲಿ ಪರಾಜಿತ ಅಭ್ಯರ್ಥಿಗಳ ಸಭೆ ಮಾಡಿದ್ದೇವೆ. ಮತ್ತೆ 22 ಅಕ್ಟೋಬರ್‌ನಲ್ಲಿ ಇನ್ನೊಂದು ಸಭೆ ಮಾಡುತ್ತೇವೆ. ಈ ಸಭೆಯಲ್ಲಿ ನಾನು, ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ, ಜಿಲ್ಲೆಯ ಪರಾಜಿತ ಅಭ್ಯರ್ಥಿಗಳು, ಜಿಲ್ಲಾ ಮಟ್ಟದ ಮುಖಂಡರು, ತಾಲೂಕು ಮುಖಂಡರ ಜೊತೆ ಚರ್ಚಿಸಿ ಅಕಾಂಕ್ಷಿಗಳ ಕುರಿತು ವರದಿ ಕಳುಹಿಸುತ್ತೇವೆ. ನಮ್ಮ ವರದಿ ಆಧರಿಸಿ ವರಿಷ್ಠರು ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕುರಿತು ತೀರ್ಮಾನ ಮಾಡ್ತಾರೆ. ಈ ಬಾರಿ ಹಾಸನದಲ್ಲಿ ಲೋಕಸಭಾ ಕ್ಷೇತ್ರ ಗೆಲ್ಲಬೇಕು ಎನ್ನೋದು ನಮ್ಮ ಆಸೆಯಾಗಿದೆ ಎಂದರು. ಮೋದಿಯವರು ಅಧಿಕಾರಕ್ಕೆ ಬಂದು ಹತ್ತು ವರ್ಷ ಆಗಿದೆ. ಅವರು ಬಂದಮೇಲೆ ಏನೇನು ಆಗಿದೆ ಎನ್ನೋದು ಕೂಡ ಜನರಿಗೆ ಗೊತ್ತಿದೆ. ಸಹಜವಾಗಿ ಪ್ರಜಾಪ್ರಭುತ್ವದಲ್ಲಿ ಒಂದೇ ಸರ್ಕಾರ ಹತ್ತು ವರ್ಷ ಆದಮೇಲು ಕೂಡ ಮುಂದುವರೆದಿರೊ ಉದಾಹರಣೆ ಇಲ್ಲ. ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಇಷ್ಟು ದೊಡ್ಡಮಟ್ಟದ ಗೆಲುವು ಪಡೆದ ಕಾರಣ ಅವರು ಶೇಕ್ ಆಗಿದ್ದಾರೆ. ಹಾಗಾಗಿಯೇ ಜನರ ಮನಸ್ಸನ್ನು ತಿರುಗಿಸಲು ಮಹಿಳಾ ಬಿಲ್ ಮಾಡೋ ಯತ್ನ ಮಾಡಿದ್ದಾರೆ. ಮಹಿಳಾ ಬಿಲ್ ಸೋನಿಯಾ ಗಾಂಧಿ ಅವರು ಮಾಡಬೇಕು ಎಂದಿದ್ದರು. ಇವರು ಹಾಗೆ ಮಾಡೋ ಹಾಗಿದ್ದರೆ ಎರಡು ವರ್ಷಗಳ ಹಿಂದೆಯೇ ಮಾಡಿ ಈಗ ಅದು ಜಾರಿ ಆಗೊ ಹಾಗೆ ಮಾಡಬಹುದಿತ್ತಲ್ಲ. ಈ ಚುನಾವಣೆಯಲ್ಲಿ ಅದರಿಂದ ಏನು ಲಾಭ ಇಲ್ಲ. ಏನಾದ್ರು ಹೊಸದು ಕೊಡಬೇಕು ಎಂದು ಹೀಗೆ ಮಾಡಿದ್ದಾರೆ ಎಂದು ಹೇಳಿದರು. ಮಂಡ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಯಿಂದ ಹಾಲಿ ಸಂಸದರ ಸ್ಪರ್ಧೆ ವಿಚಾರದ ಕುರಿತು ಮಾತನಾಡಿ, ಅಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಇರ್ತಾರೆ. ಕಳೆದ ಚುನಾವಣೆಯೇ ಬೇರೆ ಈ ಚುನಾವಣೆಯೇ ಬೇರೆ, ಸುಮಲತಾರವರು ಬಿಜೆಪಿಯಿಂದ ನಿಲ್ತಾರೊ , ಜೆಡಿಎಸ್‌ನಿಂದ ನಿಲ್ತಾರೊ ಗೊತ್ತಿಲ್ಲ. ಸುಮಲತಾ ಅವರು ಕಾಂಗ್ರೆಸ್ ಸೇರ್ಪಡೆ ವಿಚಾರ ಚರ್ಚೆ ಆಗಿಲ್ಲ. ಈಗ ಯಾವುದೇ ಮೈತ್ರಿ ಇಲ್ಲ ಹಾಗಾಗಿ ನಮ್ಮ ಅಭ್ಯರ್ಥಿ ಇರ್ತಾರೆ. ಸುಮಲತಾ ಅವರು ಬಿಜೆಪಿಯಿಂದ ಅಥವಾ ಜೆಡಿಎಸ್‌ನಿಂದ ಅಭ್ಯರ್ಥಿ ಆಗಬೇಕು. ನಮ್ಮ ಜೊತೆ ಮೇಡಂ ಇದುವರೆಗೆ ಚರ್ಚೆ ಮಾಡಿಲ್ಲ ತೀರ್ಮಾನ ಅವರಿಗೆ ಬಿಟ್ಡಿದ್ದು. ಅಲ್ಲಿನ ಸ್ಥಾನವನ್ನು ಬಿಜೆಪಿಗೆ ಕೊಡ್ತಾರಾ, ಜೆಡಿಎಸ್‌ಗೆ ಕೊಡ್ತಾರಾ ಗೊತ್ತಿಲ್ಲ. ಒಕ್ಕಲಿಗರ ಸಮುದಾಯದ ಬಗ್ಗೆ ಭಗವಾನ್ ಆಕ್ಷೇಪಾರ್ಹ ಹೇಳಿಕೆ ಕುರಿತು ಮಾತನಾಡಿ, ನಾನು ಹೊರ ಊರಿನಲ್ಲಿದ್ದರಿಂದ ಅವರ ಹೇಳಿಕೆ ನಾನು ಗಮನಿಸಿಲ್ಲ. ಆದರೆ ಯಾವುದೇ ಒಂದು ಸಮಾಜದ ಬಗ್ಗೆ ಯಾರೇ ಅವಹೇಳನಮಾಡಿದ್ರೆ ಆ ಸಮುದಾಯಕ್ಕೆ ಏನು ಆಗಲ್ಲ. ಯಾರೇ ಆಗಲಿ ಇನ್ನೊಂದು ಸಮಾಜದ ಬಗ್ಗೆ ಟೀಕೆ ಮಾಡೋದು ತಪ್ಪು. ಹಾಗೆ ಮಾಡಿದ್ರೆ ಅವರಿಗೆ ಗೌರವ ಕಡಿಮೆಯಾಗುತ್ತದೆ ಹೊರತು ಸಮಾಜಕ್ಕೆ ಅಲ್ಲ ಏನೋ ಹೇಳ್ತಾರಲ್ಲ ಯಾರಾದ್ರು ವ್ಯಕ್ತಿ ತಪ್ಪಿದ್ದರೆ ಅವರ ಬಗ್ಗೆ ಮಾತನಾಡಬೇಕು ಎಂದು ಅಭಿಪ್ರಾಯಿಸಿದರು. ಕಾಡಾನೆ ಸಮಸ್ಯೆ ಮಂಡ್ಯದಲ್ಲಿ ಸಹ ಇದ್ದು ಮುಖ್ಯಮಂತ್ರಿಗಳ ಗಮನಕ್ಕೆತರಲಾಗಿದೆ. ಮುಂದಿನ ದಿನಗಳಲ್ಲಿ ಕಾಡಾನೆ ಸಮಸ್ಯೆಗೆ ಪರಿಹಾರ ಹುಡುಕಲಾಗುತ್ತದೆ. ಮಲೆನಾಡಿನಲ್ಲಿಕಾಡುತ್ತಿರುವ ಸೆಕ್ಷನ್ 4 ಡೀಮ್ಡ್ ಫಾರೆಸ್ಟ್ ಕುರಿತು ಸಭೆಗಳು ನಡೆದಿದ್ದು ಶೀಘ್ರದಲ್ಲೆ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಮಲೆನಾಡು ಭಾಗದಲ್ಲಿ ಈ ಹಿಂದೆ ಕಾಫಿ ಬೆಳೆಗಾರರಿಗೆ ಕೃಷಿ ಇಲಾಖೆ ವತಿಯಿಂದ ಸುಣ್ಣ ವಿತರಿಸಲಾಗುತ್ತಿದ್ದು ಇದು ನಿಂತಿರುವುದರ ಕುರಿತು ನನಗೆ ಮಾಹಿತಿಯಿಲ್ಲ. ಈ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ವೇಳೆ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಬೈರಮುಡಿ ಚಂದ್ರು, ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಮುರುಳಿಮೋಹನ್ ಸೇರಿದಂತೆ ಇತರರು ಹಾಜರಿದ್ದರು.