ಕಾಂಗ್ರೆಸ್ ವಿರುದ್ಧ ಹೋರಾಡಿದ ತನ್ನ ಸದಸ್ಯರಿಗೇ ಬಿಜೆಪಿ ನೋಟಿಸ್!

KannadaprabhaNewsNetwork |  
Published : Sep 06, 2026, 02:30 AM IST
ಬಿಜೆಪಿ ಕಾರ್ಯಕರ್ತರಿಗೆ ಪಕ್ಷದಿಂದ ನೋಟೀಸ್ ನೀಡಿರುವುದು.  | Kannada Prabha

ಸಾರಾಂಶ

ಅನಿಲ ಮೆಣಸಿನಕಾಯಿ ನೇತೃತ್ವದಲ್ಲಿ "ಜೆನ್ ಜಿ ವೋಟರ್ಸ್ ಹಾಗೂ ಸಿಟಿಜನ್ಸ್ ಪೋರಂ " ಅಡಿಯಲ್ಲಿ ಆ. 31ರಂದು ನಗರದಲ್ಲಿ ನಡೆದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಗದಗ-ಬೆಟಗೇರಿ ನಗರಸಭೆಯ ಬಿಜೆಪಿ ಸದಸ್ಯ ರಾಘವೇಂದ್ರ ಯಳವತ್ತಿ ಸೇರಿದಂತೆ ಬಿಜೆಪಿಯ ಹಲವು ಕಾರ್ಯಕರ್ತರಿಗೆ ಗದಗ ಜಿಲ್ಲಾ ಬಿಜೆಪಿ ನಗರ ಮಂಡಲದಿಂದ ನೋಟಿಸ್‌ ಜಾರಿ ಮಾಡಲಾಗಿದೆ.

ಶಿವಕುಮಾರ ಕುಷ್ಟಗಿ

ಗದಗ: ಅನಿಲ ಮೆಣಸಿನಕಾಯಿ ನೇತೃತ್ವದಲ್ಲಿ "ಜೆನ್ ಜಿ ವೋಟರ್ಸ್ ಹಾಗೂ ಸಿಟಿಜನ್ಸ್ ಪೋರಂ " ಅಡಿಯಲ್ಲಿ ಆ. 31ರಂದು ನಗರದಲ್ಲಿ ನಡೆದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಗದಗ-ಬೆಟಗೇರಿ ನಗರಸಭೆಯ ಬಿಜೆಪಿ ಸದಸ್ಯ ರಾಘವೇಂದ್ರ ಯಳವತ್ತಿ ಸೇರಿದಂತೆ ಬಿಜೆಪಿಯ ಹಲವು ಕಾರ್ಯಕರ್ತರಿಗೆ ಗದಗ ಜಿಲ್ಲಾ ಬಿಜೆಪಿ ನಗರ ಮಂಡಲದಿಂದ ನೋಟಿಸ್‌ ಜಾರಿ ಮಾಡಲಾಗಿದೆ.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ಹೋರಾಟ ನಡೆಸಬೇಕಾದ ಸಂದರ್ಭದಲ್ಲಿ, ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ, ಬರಗಾಲ, ರೈತರ ಸಂಕಷ್ಟ, ಕುಡಿಯುವ ನೀರಿನ ಸಮಸ್ಯೆ ಹಾಗೂ ಯುವಕರ ನಿರುದ್ಯೋಗದ ವಿರುದ್ಧ ನಡೆದ ಜನಪರ ಹೋರಾಟದಲ್ಲಿ ಭಾಗವಹಿಸಿದ ತನ್ನದೇ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಬಿಜೆಪಿ ನೋಟಿಸ್ ನೀಡಿರುವುದು ಗದಗ ಜಿಲ್ಲಾ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ರೈತರು, ಯುವಕರು, ಮಹಿಳೆಯರು ಹಾಗೂ ನಾಗರಿಕರು ಪಾಲ್ಗೊಂಡು, ಗದಗ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು, ರೈತರಿಗೆ ಸೂಕ್ತ ಪರಿಹಾರ ನೀಡಬೇಕು, ಗದಗ, ಬೆಟಗೇರಿ ಅವಳಿ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದ್ದರು. ಇದರಲ್ಲಿ ಹಲವಾರು ಬಿಜೆಪಿ ಮುಖಂಡರು, ಕಾರ್ಯಕರ್ತರು ಯುವಕರು ಪಾಲ್ಗೊಂಡಿದ್ದರು.

ಸಮಸ್ಯೆ ಏನು?: ಗದಗ, ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ವರ್ಷಗಳಿಂದ ಜನರನ್ನು ಕಾಡುತ್ತಿದೆ. ಹಲವು ಪ್ರದೇಶಗಳಲ್ಲಿ ಸುಮಾರು 20 ದಿನಗಳಿಗೊಮ್ಮೆ ನೀರು ಪೂರೈಕೆಯಾಗುವ ಪರಿಸ್ಥಿತಿ ಇದೆ ಎಂಬ ಆರೋಪವೂ ಕೇಳಿಬರುತ್ತಿದೆ. ಇಂತಹ ಗಂಭೀರ ಜನಸಮಸ್ಯೆ ಕುರಿತು ಬಿಜೆಪಿ ನಾಯಕರು ದೊಡ್ಡ ಪ್ರಮಾಣದಲ್ಲಿ ಬೀದಿಗಳಿದು ಹೋರಾಟ ಮಾಡುವುದಾಗಲಿ, ಗಟ್ಟಿಯಾಗಿ ಧ್ವನಿ ಎತ್ತದೆ ಇರುವ ಹಿನ್ನೆಲೆಯಲ್ಲಿ ಅದೇ ಸಮಸ್ಯೆಗಾಗಿ ಯುವಕರು ಮತ್ತು ನಾಗರಿಕರು ಬೀದಿಗಿಳಿದು ಹೋರಾಟ ನಡೆಸಿದಾಗ, ಅದರಲ್ಲಿ ಭಾಗವಹಿಸಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ನೋಟಿಸ್ ನೀಡಿರುವುದು ಎಷ್ಟು ಸಮರ್ಥನೀಯ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಸಂಘಟನೆಗೆ ಹಿನ್ನಡೆ?: ಈಗಾಗಲೇ ಸಂಘಟನಾತ್ಮಕವಾಗಿ ಹಲವು ಸವಾಲುಗಳನ್ನು ಎದುರಿಸುತ್ತಿರುವ ಗದಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಘಟಕದಲ್ಲಿ ನೋಟಿಸ್ ನೀಡುವ ಬೆಳವಣಿಗೆ ಮತ್ತೊಂದು ಚರ್ಚೆಗೆ ಕಾರಣವಾಗಿದೆ. ನಾಯಕತ್ವದ ಕೊರತೆ, ಸಂಘಟನೆಯಲ್ಲಿನ ಭಿನ್ನಾಭಿಪ್ರಾಯಗಳು ಹಾಗೂ ಕಾರ್ಯಕರ್ತರ ಅಸಮಾಧಾನದ ನಡುವೆ ಇದೀಗ ನೋಟಿಸ್ ರಾಜಕೀಯ ಆರಂಭವಾಗಿದೆ. ಪಕ್ಷದ ನಿಜವಾದ ಶಕ್ತಿ ಸಾಮಾನ್ಯ ಕಾರ್ಯಕರ್ತರು. ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಅವರೊಂದಿಗೆ ಬೀದಿಗಿಳಿಯುವ ಕಾರ್ಯಕರ್ತರಿಗೆ ಬೆಂಬಲ ನೀಡುವ ಬದಲು ನೋಟಿಸ್ ನೀಡಿ ವಿವರಣೆ ಕೇಳುವುದು ಕಾರ್ಯಕರ್ತರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಪಕ್ಷಕ್ಕೆ ಪೂರಕವಲ್ಲದ ಸಂಘಟನೆಗಳ ಕಾರ್ಯಕ್ರಮದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಪಕ್ಷದ ನಿರ್ಧಾರದಂತೆ ನೊಟೀಸ್ ನೀಡಲಾಗಿದೆ ಎಂದು ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರುಡಗಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಜಾಸೇವೆ ಆಂದೋಲನ: ಅರ್ಜಿ ಸಲ್ಲಿಸಲು ಶಿರಹಟ್ಟಿಯಲ್ಲಿ ನೂಕುನುಗ್ಗಲು
ಮಕ್ಕಳ, ದೇಶದ ಭವಿಷ್ಯ ರೂಪಿಸುವ ಶಕ್ತಿ ಶಿಕ್ಷಕರಲ್ಲಿದೆ: ಡಾ. ಚಂದ್ರು ಲಮಾಣಿ