ಹಿನ್ನೀರಿನಲ್ಲಿ ಅಕ್ರಮ ವಿದ್ಯುತ್ ಸಂಪರ್ಕ ಅಪಾಯಕಾರಿ

KannadaprabhaNewsNetwork |  
Published : Sep 06, 2026, 02:30 AM IST
ಹಗರಿಬೊಮ್ಮನಹಳ್ಳಿ ತಾಲೂಕಿನ ಹೊಳೆಮುತ್ಕೂರು ಗ್ರಾಮದಲ್ಲಿ ಹೋಬಳಿ ಮಟ್ಟದ ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮವನ್ನು ತಾಪಂ ಇಒ ಪಾಲಯ್ಯನ ಕೋಟೆ ವಿಶ್ವನಾಥ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಕೆಲವು ರೈತರು ಇಲಾಖೆಯ ಗಮನಕ್ಕೆ ಬಾರದಂತೆ ವಿದ್ಯುತ್ ಸಂಪರ್ಕ ಸ್ವಯಂ ಆಗಿ ಪಡೆದುಕೊಳ್ಳುತ್ತಿರುವುದು ಕಂಡುಬಂದಿದೆ

ಹಗರಿಬೊಮ್ಮನಹಳ್ಳಿ: ತುಂಗಭದ್ರಾ ಜಲಾಶಯ ಭರ್ತಿಯಾಗಿರುವ ಹಿನ್ನೆಲೆ ಹಿನ್ನೀರಿನ ಪ್ರದೇಶಗಳಲ್ಲಿ ಕಡಿತಗೊಳಿಸಿರುವ ವಿದ್ಯುತ್ ಸಂಪರ್ಕವನ್ನು ಕೆಲ ರೈತರು ಇಲಾಖೆಯ ಗಮನಕ್ಕೆ ಬಾರದಂತೆ ಪುನಃ ಸಂಪರ್ಕಗೊಳಿಸುವುದು ಅಪಾಯಕಾರಿ. ರೈತರು ಇಂತಹ ಕಾರ್ಯಕ್ಕೆ ಮುಂದಾಗಬಾರದು ಎಂದು ಜೆಸ್ಕಾಂ ತಂಬ್ರಹಳ್ಳಿ ಶಾಖಾಧಿಕಾರಿ ಎಚ್.ಹೊನ್ನೂರಪ್ಪ ಮನವಿ ಮಾಡಿದರು.

ತಾಲೂಕಿನ ಹೊಳೆಮುತ್ಕೂರು ಗ್ರಾಮದಲ್ಲಿ ನಡೆದ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಂಬ್ರಹಳ್ಳಿ ಶಾಖಾ ವ್ಯಾಪ್ತಿಯ ಬಹುತೇಕ ಪ್ರದೇಶಗಳು ತುಂಗಭದ್ರಾ ಹಿನ್ನೀರಿನ ವ್ಯಾಪ್ತಿಗೆ ಒಳಪಟ್ಟಿವೆ. ಜಲಾಶಯ ಭರ್ತಿಯಾಗಿರುವ ಹಿನ್ನೆಲೆ ನೀರಿನಲ್ಲಿ ಮುಳುಗಿರುವ ಪ್ರದೇಶಗಳಲ್ಲಿನ ವಿದ್ಯುತ್ ಸಂಪರ್ಕ ಮುನ್ನೆಚ್ಚರಿಕಾ ಕ್ರಮವಾಗಿ ಇಲಾಖೆಯಿಂದ ಕಡಿತಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಆದರೆ,ಕೆಲವು ರೈತರು ಇಲಾಖೆಯ ಗಮನಕ್ಕೆ ಬಾರದಂತೆ ವಿದ್ಯುತ್ ಸಂಪರ್ಕ ಸ್ವಯಂ ಆಗಿ ಪಡೆದುಕೊಳ್ಳುತ್ತಿರುವುದು ಕಂಡುಬಂದಿದೆ. ನೀರಿನ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಹೊಂದಿರುವುದರಿಂದ ವಿದ್ಯುತ್ ಸೋರಿಕೆ ಹಾಗೂ ಅಪಘಾತ ಸಂಭವಿಸುವ ಸಾಧ್ಯತೆ ಇದ್ದು, ಇದರಿಂದ ಜೀವಹಾನಿಗೂ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮವನ್ನು ತಾಪಂ ಇಒ ಪಾಲಯ್ಯನಕೋಟೆ ವಿಶ್ವನಾಥ್ ಉದ್ಘಾಟಿಸಿದರು. ಈ ವೇಳೆ ಮುತ್ಕೂರು ಗ್ರಾಮದ ಗ್ರಾಮನತ್ತು ಭೂಮಿ ಹಾಗೂ ನಿವೇಶನ ತಿದ್ದುಪಡಿ, ಕಿತ್ನೂರು ಗ್ರಾಮದ ದಾರಿ ಸಮಸ್ಯೆ ಮತ್ತು ಚರಂಡಿ ದುರಸ್ತಿ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಗ್ರಾಮಸ್ಥರು ಅರ್ಜಿ ಸಲ್ಲಿಸಿದರು. ತೆಲುಗೋಳಿ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸುವಂತೆ ಕೂಡ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಗೆ ೮, ಪಂಚಾಯತ್ ರಾಜ್ ಇಲಾಖೆಗೆ ೧೩, ಜೆಸ್ಕಾಂಗೆ ೬, ಪಿಡಬ್ಲ್ಯೂಡಿಗೆ ೧, ಸಮಾಜ ಕಲ್ಯಾಣ ಇಲಾಖೆಗೆ ೧, ಸಣ್ಣ ನೀರಾವರಿ ಇಲಾಖೆಗೆ ೧, ಪಶುಸಂಗೋಪನೆ ಇಲಾಖೆಗೆ ೧ ಹಾಗೂ ಆರೋಗ್ಯ ಇಲಾಖೆಗೆ ೧ ಸೇರಿದಂತೆ ಒಟ್ಟು ೩೨ ಸಾರ್ವಜನಿಕ ಅರ್ಜಿಗಳು ಸ್ವೀಕೃತವಾದವು. ಕೆಲವು ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲಾಯಿತು.

ವಿಬಿಜಿ ರಾಮ್ ಜಿ ಸಹಾಯಕ ನಿರ್ದೇಶಕ ರಮೇಶ್ ಮಹಾಲಿಂಗಪುರ, ಬಿಸಿಎಂ ಅಧಿಕಾರಿ ಕೊಟ್ರೇಶ್ ನಾಯ್ಕ್, ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಪೂಜಾರ್ ಸೂರಪ್ಪ, ಉಪ ತಹಸೀಲ್ದಾರ್ ಶಿಲ್ಪಾ ಮೇಟಿ, ಆರ್‌ಐ ವಿನಾಯಕ, ಶಿರಸ್ತೆದಾರ್ ಶ್ವೇತಾ, ಗ್ರಾಮ ಸಹಾಯಕರಾದ ನೇತ್ರಾವತಿ ಹಾಗೂ ಯಂಕಾರೆಡ್ಡಿ, ಶಿವಕುಮಾರ್, ಕಿತ್ನೂರು ಗ್ರಾಮದ ಫಕ್ಕೀರಪ್ಪ ಸೇರಿದಂತೆ ಮುತ್ಕೂರು ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಜಾಸೇವೆ ಆಂದೋಲನ: ಅರ್ಜಿ ಸಲ್ಲಿಸಲು ಶಿರಹಟ್ಟಿಯಲ್ಲಿ ನೂಕುನುಗ್ಗಲು
ಮಕ್ಕಳ, ದೇಶದ ಭವಿಷ್ಯ ರೂಪಿಸುವ ಶಕ್ತಿ ಶಿಕ್ಷಕರಲ್ಲಿದೆ: ಡಾ. ಚಂದ್ರು ಲಮಾಣಿ