ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬುಧವಾರ ಹಿಂದುಳಿದ ವರ್ಗಗಳ ವಿಭಾಗದ ಎಸ್‌ಐಆರ್ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆಯು ಬಿರುಸಾಗಿ ನಡೆಯುತ್ತಿದೆ. ಅದು ವೇಗವಾಗಿ ನಡೆಯಲು ಪಕ್ಷದ ಬಿಎಲ್‌ಎಗಳು ಕೂಡ ಕಾರಣರಾಗಿದ್ದಾರೆ. ಈಗಾಗಲೇ ಪರಿಷ್ಕರಣೆ ಕಾರ್ಯಕ್ಕೆ 9 ದಿನಗಳಾಗಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಈ ಕಾರ್ಯ ಹೇಗೆ ನಡೆಯುತ್ತಿದೆ ಎಂಬ ಹಿನ್ನೆಲೆಯಲ್ಲಿ ಇಲ್ಲಿ ಸಭೆ ಕರೆದು ತಾವು ಪರಿಶೀಲನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಕೂಡ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಹೇಳಿದರು.
ಎಸ್‌ಐಆರ್ ಪ್ರಕ್ರಿಯೆಯನ್ನು ಬಿಜೆಪಿಯವರೇ ಪ್ರಾರಂಭ ಮಾಡಿದ್ದು. ಆದರೆ, ಈಗ ಕರ್ನಾಟಕದಲ್ಲಿ ಅದು ಸಮರ್ಪಕವಾಗಿ ನಡೆಯುತ್ತಿರುವುದನ್ನು ಕಂಡು ಬಿಜೆಪಿಯ ಕೆಲವರು ಇದು ಬೇಡವಾಗಿತ್ತು ಎಂದು ಮಾತನಾಡತೊಡಗಿದ್ದಾರೆ. ಅವರಿಗೆ ಈಗ ಆತಂಕವಾಗಿದೆ. ಕಾರಣ ರಾಜ್ಯದಲ್ಲಿ ಕಾಂಗ್ರೆಸ್ ಸದೃಢವಾಗಿದೆ. ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯವನ್ನು ಅದು ಯಶಸ್ವಿಯಾಗಿ ಮಾಡುತ್ತದೆ. ಇದು ಬಿಜೆಪಿ ಪಕ್ಷಕ್ಕೆ ತಿರುಮಂತ್ರವಾಗಬಹುದು ಎಂಬ ಆತಂಕ ಎದುರಾಗಿದೆ ಎಂದು ಕುಟುಕಿದರು.ಪರಿಷ್ಕರಣಾ ಕಾರ್ಯದಲ್ಲಿ ಕೆಲವು ಲೋಪದೋಷಗಳು ಇರುವುದು ನಿಜ. ಅದನ್ನೆಲ್ಲಾ ಸರಿ ಮಾಡುವತ್ತ ನಮ್ಮ ಪಕ್ಷದ ಬಿಎಲ್‌ಎ ಕಾರ್ಯಕರ್ತರು ಸಿದ್ಧರಾಗಿದ್ದಾರೆ. ರಾಜ್ಯಮಟ್ಟದ ಕಾರ್ಯಕರ್ತರು ಕೂಡ ಈ ಬಗ್ಗೆ ಆಗಾಗ ಸೂಚನೆಗಳನ್ನು ನೀಡುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿಯೂ ಕೂಡ ಬೂತ್ ಮಟ್ಟದಿಂದ ಇದು ಯಶಸ್ವಿಯಾಗುತ್ತಿದೆ. ಈಗ ಹಿಂದುಳಿದ ವರ್ಗಗಳ ವಿಭಾಗದಿಂದ ಬೂತ್ ಮಟ್ಟದ ಸಮಿತಿಯನ್ನು ರಚಿಸಲಾಗಿದ್ದು, ಕನಿಷ್ಠ ಮೂರು ಜನ ಮಹಿಳೆಯರು ಇರಬೇಕಾಗುತ್ತದೆ. ಒಟ್ಟು 11 ಅಥವಾ ಅದಕ್ಕೂ ಹೆಚ್ಚು ಸದಸ್ಯರನ್ನು ಸಮಿತಿಯಲ್ಲಿ ಸೇರಿಸಲಾಗುತ್ತದೆ. ಇವರೆಲ್ಲರೂ ಕೂಡ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪರೋಕ್ಷವಾಗಿ ಭಾಗವಹಿಸಿ ಮತದಾರರ ಪಟ್ಟಿಯಿಂದ ಯಾರೂ ಹೊರಗೆ ಹೋಗಬಾರದು ಎಂಬ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವಿವರಿಸಿದರು.
ಬಿಜೆಪಿಯವರಿಗೆ ಬೆಂಗಳೂರಿನ ಸುಮಾರು 8 ಕ್ಷೇತ್ರಗಳ ಬಗ್ಗೆ ಆತಂಕ ಪ್ರಾರಂಭವಾಗಿದೆ. ಮಹಾದೇವಪುರ ಸೇರಿದಂತೆ ಕೆಲವು ಕ್ಷೇತ್ರಗಳನ್ನು ಎಲ್ಲಿ ಕಳೆದುಕೊಳ್ಳುತ್ತೇವೋ ಎಂಬ ಆತಂಕ ಅವರಿಗಾಗಿದೆ. ಕಾರಣ ಮತಪಟ್ಟಿಯ ಬಗ್ಗೆ ಈಗ ಅಲ್ಲಿ ಜಾಗೃತಿ ಹೆಚ್ಚಾಗಿದೆ. ಬೇರೆ ರಾಜ್ಯದವರು ಅಲ್ಲಿ ಇದ್ದಾರೆ. ಒಟ್ಟಾರೆ ಎಸ್‌ಐಆರ್ ಪ್ರಕ್ರಿಯೆ ರಾಜ್ಯದಲ್ಲಿ ಮಾತ್ರ ಬಿಜೆಪಿಯವರಿಗೆ ಒಂದು ರೀತಿಯ ತಲೆನೋವಾಗಿದೆ ಎಂದಯ ವ್ಯಂಗ್ಯವಾಡಿದರು.
ಹಾಗೆಯೇ ರಾಹುಲ್‌ಗಾಂಧಿಯವರು ನೀಟ್ ಪರೀಕ್ಷೆಯ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಬಹುದೊಡ್ಡ ಹೋರಾಟವನ್ನು ರಾಷ್ಟ್ರವ್ಯಾಪಿ ನಡೆಸಿದ್ದಾರೆ. ‘ಛಾತ್ರೋನ್ ಕಿ ಗೂಂಜ್’ ಆಂದೋಲನಕ್ಕೆ ನಾವು ಕೂಡ ಕೈಜೋಡಿಸಿದ್ದೇವೆ. ಶಿಕ್ಷಣ ಉಳಿಸಿ ವಿದ್ಯಾರ್ಥಿಗಳ ಭವಿಷ್ಯ ಉಳಿಸಿ ಎಂಬ ಹಿನ್ನಲೆಯಲ್ಲಿ ಇದನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕದಲ್ಲಿ ಈ ಅಭಿಯಾನವನ್ನು ಬಲಪಡಿಸಲು ಎಚ್.ಎಸ್. ಮಂಜುನಾಥ ಗೌಡ ಅವರನ್ನು ನಿಯೋಜಿಸಲಾಗಿದೆ. ಅವರ ಜೊತೆಗೆ ನಾವೂ ಕೂಡ ಇದ್ದೇವೆ. ಶಿವಮೊಗ್ಗದಿಂದ ರಮೇಶ್ ಶಂಕರ ಘಟ್ಟ ಅವರ ಹೆಸರನ್ನೂ ಕೂಡ ಸೂಚಿಸಲಾಗಿದೆ ಎಂದರು.
-----------