ಮೇಲ್ಮನೆ: ಬಿಜೆಪಿ, ದಳ 5+1 ಬದಲು 4+2 ಟಿಕೆಟ್‌ ಸೂತ್ರ

KannadaprabhaNewsNetwork |  
Published : May 13, 2024, 12:02 AM ISTUpdated : May 13, 2024, 07:14 AM IST
ಮೈತ್ರಿ | Kannada Prabha

ಸಾರಾಂಶ

ದಕ್ಷಿಣ ಶಿಕ್ಷಕರ ಕ್ಷೇತ್ರ ಜೆಡಿಎಸ್‌ಗೆ ನೀಡುವ ಸಾಧ್ಯತೆಯಿದ್ದು, ಇ.ಸಿ. ನಿಂಗರಾಜುಗೆ ಟಿಕೆಟ್‌ ಘೋಷಿಸಿದ್ದ ಬಿಜೆಪಿ ಅದನ್ನು ಹಿಂಪಡೆಯಲಿದೆ ಎನ್ನಲಾಗಿದೆ.

 ಬೆಂಗಳೂರು :  ವಿಧಾನಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಪಟ್ಟಿ ಪ್ರಕಟಿಸಿದ ಬಳಿಕ ಇದೀಗ ಆ ಕ್ಷೇತ್ರವನ್ನು ಮಿತ್ರ ಪಕ್ಷ ಜೆಡಿಎಸ್‌ಗೆ ಬಿಟ್ಟುಕೊಡಲು ಮುಂದಾಗಿದೆ.

ಶನಿವಾರವಷ್ಟೇ ಬಿಜೆಪಿ ಈ ಕ್ಷೇತ್ರದಿಂದ ಇ.ಸಿ.ನಿಂಗರಾಜು ಅವರನ್ನು ಅಭ್ಯರ್ಥಿಯನ್ನಾಗಿ ಅಧಿಕೃತವಾಗಿ ಘೋಷಿಸಿತ್ತು. ಘೋಷಣೆ ಬೆನ್ನಲ್ಲೇ ಜೆಡಿಎಸ್ ನಾಯಕರು ಬಿಜೆಪಿ ನಾಯಕರನ್ನು ಸಂಪರ್ಕಿಸಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಹೀಗಾಗಿ, ಈಗ ಕ್ಷೇತ್ರವನ್ನು ಬಿಟ್ಟುಕೊಡುವ ಬಗ್ಗೆ ಬಿಜೆಪಿ ನಾಯಕರು ಜೆಡಿಎಸ್ ನಾಯಕರಿಗೆ ಮಾಹಿತಿ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಿಜೆಪಿ ನಾಯಕರ ಭರವಸೆ ಬಳಿಕ ಭಾನುವಾರ ಜೆಡಿಎಸ್ ನಾಯಕರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರ ನಿವಾಸದಲ್ಲಿ ಸಭೆ ಸೇರಿ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಅಂತಿಮಗೊಳಿಸುವ ಸಂಬಂಧ ಚರ್ಚೆ ನಡೆಸಿದರು.

ಪರಿಷತ್ತಿನ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಪಕ್ಷದ ಮುಖಂಡ ವಿವೇಕಾನಂದ ಅವರಿಬ್ಬರ ಹೆಸರುಗಳು ಪ್ರಮುಖವಾಗಿ ಪ್ರಸ್ತಾಪವಾಗಿವೆ. ಈ ಪೈಕಿ ಶ್ರೀಕಂಠೇಗೌಡ ಅವರ ಹೆಸರು ಅಂತಿಮಗೊಳ್ಳುವ ಸಂಭವ ಹೆಚ್ಚಾಗಿದೆ.

ಕಳೆದ ಬಾರಿಯ ಚುನಾವಣೆಯಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸಿತ್ತು. ಕ್ಷೇತ್ರದಲ್ಲಿ ಜೆಡಿಎಸ್ ಪ್ರಾಬಲ್ಯವೂ ಇದೆ. ಹೀಗಾಗಿ, ಇಲ್ಲಿ ಬಿಜೆಪಿ ಸ್ಪರ್ಧಿಸಿದರೂ ಗೆಲ್ಲುವ ಸಾಧ್ಯತೆ ಕಷ್ಟ ಎಂಬುದು ವಾಸ್ತವಾಂಶ. ಹೀಗಾಗಿ, ಮಿತ್ರ ಪಕ್ಷ ಜೆಡಿಎಸ್‌ಗೆ ಬಿಟ್ಟುಕೊಡುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.ಮೈಸೂರಿನಲ್ಲಿ ಶನಿವಾರ ಈ ಬಗ್ಗೆ ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ ಬಿ.ಎಸ್‌. ಯಡಿಯೂರಪ್ಪ, ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ ನಡುವೆ 4:2 ಸೂತ್ರದಲ್ಲಿ ಮೈತ್ರಿ ಏರ್ಪಡುವ ಸಾಧ್ಯತೆ ಇದೆ ಎಂದಿದ್ದರು. ಹೀಗಾಗಿ ಅಂತಿಮವಾಗಿ ವಿಧಾನಪರಿಷತ್ತಿನ ಒಟ್ಟು 6 ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು 2 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧಿಸುವುದು ನಿಶ್ಚಿತವಾಗಿದೆ.

ದಕ್ಷಿಣ ಶಿಕ್ಷಕರ ಕ್ಷೇತ್ರ ಜೆಡಿಎಸ್‌ಗೆ ಸಿಗಲಿದೆ-ಜಿಟಿಡಿ:

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಬಿಜೆಪಿಯು ನೈಋತ್ಯ ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿತ್ತು. ಇದೀಗ ದಕ್ಷಿಣ ಶಿಕ್ಷಕರ ಕ್ಷೇತ್ರ ಕೂಡ ನಮಗೆ ಸಿಗಲಿದೆ. ಇದು ಅಧಿಕೃತವಾದ ಬಳಿಕ ಈ ತಿಂಗಳ 15ರಂದು ಸಭೆ ಸೇರಿ ಸಭೆ ಸೇರಿ ಅಭ್ಯರ್ಥಿ ಯಾರು ಎಂಬ ಬಗ್ಗೆ ತೀರ್ಮಾನ ಮಾಡುತ್ತೇವೆ. ಕೆ.ಟಿ.ಶ್ರೀಕಂಠೇಗೌಡ ಹಾಗೂ ವಿವೇಕಾನಂದ ಇಬ್ಬರು ಆಕಾಂಕ್ಷಿಗಳು ಇದ್ದಾರೆ ಎಂದು ತಿಳಿಸಿದರು.

ಶ್ರೀಕಂಠೇಗೌಡ ಮಾತನಾಡಿ, ಕಳೆದ ಹಲವು ವರ್ಷದಿಂದ ಶಿಕ್ಷಕರ ಸಮಸ್ಯೆಗೆ ಧ್ವನಿಯಾಗಿದ್ದೇನೆ. ಇದನ್ನು ವರಿಷ್ಠರ ಗಮನಕ್ಕೆ ತಂದಿದ್ದೆನೆ. ನನಗೆ ಟಿಕೆಟ್ ಸಿಗುವ ಭರವಸೆ ಇದೆ. 15ರಂದು ಅಂತಿಮ ನಿರ್ಧಾರ ಹೊರಬೀಳಲಿದೆ ಎಂದು ಹೇಳಿದರು.

ಏಕೆ ಬದಲಾವಣೆ?ಕಳೆದ ಬಾರಿ ಜೆಡಿಎಸ್ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಮೈತ್ರಿ ಇದ್ದರೂ ಈ ಸಲ ಬಿಜೆಪಿ ಅಭ್ಯರ್ಥಿ ಘೋಷಿಸಿತ್ತು. ಇದಕ್ಕೆ ಜೆಡಿಎಸ್‌ ನಾಯಕರು ಅಪಸ್ವರ ಎತ್ತಿದ್ದರು. ಹೀಗಾಗಿ ಜೆಡಿಎಸ್‌ಗೆ ಸೀಟು ಬಿಟ್ಟುಕೊಡಲು ಬಿಜೆಪಿ ಸಜ್ಜುಗೊಂಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ