- ಎಚ್.ಕಡದಕಟ್ಟೆ ಬಳಿ ಮಂಜುನಾಥ ಪೆಟ್ರೋಲ್ ಬಂಕ್‌ನಲ್ಲಿ ರಕ್ತದಾನ ಶಿಬಿರ - - - ಕನ್ನಡಪ್ರಭ ವಾರ್ತೆ, ಹೊನ್ನಾಳಿ
ಮನುಷ್ಯನ ಜೀವ ಉಳಿಸುವಲ್ಲಿ ರಕ್ತ ಬಹುಮುಖ್ಯ ಪಾತ್ರವಹಿಸುತ್ತದೆ. ಈ ಕಾರಣದಿಂದ ದಾನಗಳಲ್ಲಿ ರಕ್ತದಾನವೇ ಸರ್ವಶ್ರೇಷ್ಠ ಎನಿಸಿದೆ ಎಂದು ದಾವಣಗೆರೆ ಎಸ್.ಎಸ್. ಹೈಟೆಕ್ ಆಸ್ಪತ್ರೆ ವೈದ್ಯ ಡಾ. ಪೃಥ್ವಿ ಹೇಳಿದರು.ಪಟ್ಟಣದ ಮಂಜುನಾಥ ಫ್ಯುಯಲ್ ಮತ್ತು ದಾವಣಗೆರೆ ಎಸ್‍ಎಸ್ ಹೈಟೆಕ್ ಆಸ್ಪತ್ರೆ ಆಶ್ರಯದಲ್ಲಿ ಭಾನುವಾರ ಪಟ್ಟಣದ ಎಚ್.ಕಡದಕಟ್ಟೆ ಸಮೀಪದ ನಯಾರ ಕಂಪೆನಿಯ ಮಂಜುನಾಥ ಪೆಟ್ರೋಲ್ ಬಂಕ್ ಆವರಣದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ರಕ್ತದಾನ ಮಾಡುವುದರಿಂದ ದಾನಿಯ ಆರೋಗ್ಯ ವೃದ್ಧಿಸುವುದರೊಂದಿಗೆ ರಕ್ತದ ಕಣಗಳ ಸಂಖ್ಯೆ ಹೆಚ್ಚಾಗುತ್ತದೆ. ಆರೋಗ್ಯವಂತ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದರು.ರಕ್ತ ದೇಹದಲ್ಲಿ ನಿರಂತರವಾಗಿ ಹುಟ್ಟುವ ದ್ರವಪದಾರ್ಥ. ರಕ್ತ ಕೊಡುವುದರಿಂದ ತೊಂದರೆ ಆಗುತ್ತದೆ ಎನ್ನುವ ತಪ್ಪು ಕಲ್ಪನೆ ಕೆಲವರಲ್ಲಿ ಇದೆ. ಇದು ಶುದ್ಧ ಸುಳ್ಳು. ರಕ್ತದಾನ ಮಾಡುವುದರಿಂದ ಯಾವುದೇ ಕಾರಣಕ್ಕೂ ದಾನಿಯ ದೇಹಕ್ಕೆ ತೊಂದರೆ ಆಗುವುದಿಲ್ಲ. ಬದಲಿಕೆ ಹಲವಾರು ಪ್ರಯೋಜನಗಳೂ ಇವೆ ಎಂದು ಹೇಳಿದರು.
ಮಂಜುನಾಥ ಫ್ಯುಯಲ್ ಪೆಟ್ರೋಲ್ ಬಂಕ್ ಮಾಲೀಕ ಸಚಿನ್ ಸತ್ತಿಗಿ ಮಾತನಾಡಿ, ಪ್ರತಿವರ್ಷ ಒಂದು ಸಾಮಾಜಿಕ ಕೈಂಕರ್ಯ ಹಮ್ಮಿಕೊಳ್ಳುವ ಹಂಬಲ ನಮ್ಮದಾಗಿದೆ. ಈ ವರ್ಷ ಬಸವೇಶ್ವರ ಜಯಂತಿ ಪ್ರಯುಕ್ತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿವರ್ಷ ಏನಾದರೊಂದು ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆದ ರಕ್ತದಾನ ಶಿಬಿರದಲ್ಲಿ 45ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು. ರಕ್ತದಾನ ಮಾಡಿದ ಯುವ ದಾನಿಗಳಿಗೆ ಪ್ರಮಾಣ ಪತ್ರ ನೀಡಿ, ಶಾಲು ಹೊದಿಸಿ ಗೌರವಿಸಲಾಯಿತು.
ಮನುಷ್ಯರು ಸದಾ ದುಡಿದು ಹಣ ಗಳಿಸುವ ಗುಂಗಿನಲ್ಲಿರುವುದು ಸಹಜ. ದುಡಿತದ ಹಣದಲ್ಲಿ ಅಲ್ಪ ಭಾಗವನ್ನು ಸಮಾಜದ ಒಳಿತಿಗೆ ಉಪಯೋಗ ಮಾಡುವುದು ಕರ್ತವ್ಯವಾಗಬೇಕು. ಯುವಕರು ರಕ್ತದಾನ ಮಾಡಲು ಮುಂದೆ ಬರಬೇಕು ಎಂದರು.23ನೇ ಬಾರಿ ರಕ್ತದಾನ:
ಶಿಬಿರದಲ್ಲಿ ಪಟ್ಟಣದ ಪತ್ರಕರ್ತ ಎನ್.ಕೆ.ಆಂಜನೇಯ 23ನೇ ಬಾರಿಗೆ ರಕ್ತದಾನ ಮಾಡಿದ್ದು ವಿಶೇಷವಾಗಿತ್ತು. ಡಾ.ಕುಸ್ವಿಂದರ್, ಡಾ. ಹೀನಾ, ಯುವ ಮುಖಂಡ ಆರಕೆರೆ ಅಮಿತ್, ಭರತ್ ಸತ್ತಿಗೆ, ಸುಮಿತ್ರ ಮಂಜುನಾಥ, ಎಸ್‍ಎಸ್ ಹೈಟೆಕ್ ಆಸ್ಪತ್ರೆ ಸಿಬ್ಬಂದಿ, ಇತರರು ಇದ್ದರು.- - -
ಕೋಟ್ ಪ್ರಥಮವಾಗಿ ಹಮ್ಮಿಕೊಂಡಿರುವ ರಕ್ತದಾನ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಮುಂದಿನ ವರ್ಷ ಗಣ್ಯರ ಅನಿಸಿಕೆಗಳನ್ನು ಪಡೆದು ಉತ್ತಮ ಹಾಗೂ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು- ಸಚಿನ್ ಸತ್ತಿಗಿ, ಬಂಕ್ ಮಾಲೀಕ
- - - -12ಎಚ್.ಎಲ್.ಐ1:ಹೊನ್ನಾಳಿ ಎಚ್.ಕಡದಕಟ್ಟೆ ಸಮೀಪದ ಮಂಜುನಾಥ ಫ್ಯುಯಲ್ ನಯಾರ ಟ್ರೋಲ್ ಬಂಕ್ ಆವರಣದಲ್ಲಿ ರಕ್ತದಾನ ಶಿಬಿರ ನಡೆಯಿತು.